ಜೈಪುರ: ರಾಜಸ್ಥಾನದ ಶ್ರೀಗಂಗಾನಗರದಲ್ಲಿ ನಡೆದ ರೈಲ್ವೆ ಹಳಿ ಸ್ಫೋಟ (Rajasthan Railway Track Blast) ಪ್ರಕರಣ ಹಲವು ಅನುಮಾನಗಳಿಗೆ ಕಾರಣವಾಗಿದೆ. ಭಾರತ-ಪಾಕಿಸ್ತಾನ (Pakistan Terror Network) ಗಡಿ ಸಮೀಪವೇ ಘಟನೆ ನಡೆದಿರುವುದರಿಂದ ಸ್ಫೋಟದ ಹಿಂದೆ ಪಾಕಿಸ್ತಾನದ ಉಗ್ರ ಜಾಲ ಅಥವಾ ಸ್ಲೀಪರ್ ಸೆಲ್ಗಳ ಕೈವಾಡ ಇದೆಯೇ ಎಂಬ ಆಯಾಮದಲ್ಲಿ ತನಿಖೆ ನಡೆಯುತ್ತಿದೆ.
ಸ್ಫೋಟದ ಹಿಂದೆ ಉಗ್ರ ಸಂಘಟನೆಗಳ ಸಂಚು ಇದೆಯೇ ಎಂಬ ಬಗ್ಗೆಯೂ ತನಿಖಾ ಸಂಸ್ಥೆಗಳು ಪರಿಶೀಲನೆ ನಡೆಸುತ್ತಿವೆ. ರಾಷ್ಟ್ರೀಯ ತನಿಖಾ ಸಂಸ್ಥೆ (NIA), ರಾಜಸ್ಥಾನ ಎಟಿಎಸ್ ಸೇರಿದಂತೆ ವಿವಿಧ ತನಿಖಾ ಸಂಸ್ಥೆಗಳು ಘಟನೆಯ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿವೆ. ಆದರೆ, ಪಾಕಿಸ್ತಾನದ ಉಗ್ರ ಜಾಲ ಅಥವಾ ಸ್ಲೀಪರ್ ಸೆಲ್ಗಳ ಸಂಪರ್ಕ ಇನ್ನೂ ದೃಢಪಟ್ಟಿಲ್ಲ.
ಸ್ಫೋಟದ ತೀವ್ರತೆಗೆ ರೈಲ್ವೆ ಹಳಿಯ ಕೆಳಭಾಗದಲ್ಲಿದ್ದ ಎರಡು ಕಾಂಕ್ರೀಟ್ ಸ್ಲೀಪರ್ಗಳು ಹಾನಿಗೊಳಗಾಗಿವೆ. ಘಟನಾ ಸ್ಥಳದಲ್ಲಿ ಸುಮಾರು ಎರಡು ಅಡಿ ಆಳದ ಕುಳಿ ಸೃಷ್ಟಿಯಾಗಿದೆ. ಸ್ಫೋಟ ಸಂಭವಿಸುವುದಕ್ಕೂ ಸುಮಾರು 45 ನಿಮಿಷ ಮೊದಲು ಇದೇ ಮಾರ್ಗದಲ್ಲಿ ಪ್ರಯಾಣಿಕ ರೈಲು ಸಂಚರಿಸಿತ್ತು ಎಂದು ತಿಳಿದುಬಂದಿದೆ.
ಘಟನೆಯ ಬೆನ್ನಲ್ಲೇ ಮುನ್ನೆಚ್ಚರಿಕೆ ಕ್ರಮವಾಗಿ ಸೂರತ್ಗಢ-ಅನುಪ್ಗಢ ಮಾರ್ಗದಲ್ಲಿ ಸಂಚರಿಸಬೇಕಿದ್ದ ನಾಲ್ಕು ರೈಲುಗಳ ಸೇವೆಯನ್ನು ರದ್ದುಗೊಳಿಸಲಾಗಿತ್ತು.
ಇನ್ನು ಈ ಹಿಂದೆ ಗಡಿ ಪ್ರದೇಶದಲ್ಲಿ ವಶಪಡಿಸಿಕೊಳ್ಳಲಾಗಿದ್ದ ಆರ್ಡಿಎಕ್ಸ್ ಮತ್ತು ಶಸ್ತ್ರಾಸ್ತ್ರಗಳಿಗೂ ಈ ಸ್ಫೋಟಕ್ಕೂ ಏನಾದರೂ ಸಂಬಂಧವಿದೆಯೇ ಎಂಬ ಬಗ್ಗೆಯೂ ಪರಿಶೀಲನೆ ನಡೆಯುತ್ತಿದೆ. ಗಡಿಭಾಗದಲ್ಲಿ ನಡೆದಿರುವ ಈ ಘಟನೆ ಭದ್ರತಾ ಸಂಸ್ಥೆಗಳ ಆತಂಕಕ್ಕೆ ಕಾರಣವಾಗಿದೆ.ಇದನ್ನೂ ಓದಿ: ರಾಜಸ್ಥಾನದಲ್ಲಿ ರೈಲ್ವೆ ಹಳಿ ಮೇಲೆ ಸ್ಫೋಟ – ತಪ್ಪಿತು ದೊಡ್ಡ ದುರಂತ
ಸದ್ಯ ವಿಧಿವಿಜ್ಞಾನ ಪ್ರಯೋಗಾಲಯದ ವರದಿಗಾಗಿ ತನಿಖಾ ಸಂಸ್ಥೆಗಳು ಕಾಯುತ್ತಿವೆ. ವರದಿ ಬಂದ ಬಳಿಕ ಸ್ಫೋಟಕ್ಕೆ ಬಳಸಿದ ವಸ್ತು ಹಾಗೂ ಅದರ ವಿಧಾನ ಯಾವುದು ಎಂಬ ಬಗ್ಗೆ ಸ್ಪಷ್ಟತೆ ಸಿಗುವ ನಿರೀಕ್ಷೆಯಿದೆ.ಇದನ್ನೂ ಓದಿ: ಹಾಸನಾಂಬ ಜಾತ್ರೆ| ಸಚಿವ-ಸಂಸದರ ಸಂಧಾನ ಯಶಸ್ವಿ, ಅಂಕಣಕ್ಕೆ ಮರಳಿ ಚಾಂಪಿಯನ್ ಪಟ್ಟ ಗೆದ್ದ ದೆಹಲಿ!
