ಬೆಂಗಳೂರು: ಹಾಲು-ಮೊಸರಿನ ಬೆಲೆ ಏರಿಕೆ ಆಘಾತ ಬೆನ್ನಲ್ಲೇ ರಾಜ್ಯದ ಜನತೆಗೆ ಸರ್ಕಾರ ಬಸ್ ಟಿಕೆಟ್ ಶಾಕ್ ಕೊಟ್ಟಿದೆ. ಕೆಎಸ್ಆರ್ಟಿಸಿ, ಬಿಎಂಟಿಸಿ ಬಸ್ ಪ್ರಯಾಣ ದರ ಗಣನೀಯವಾಗಿ ಹೆಚ್ಚಳ ಮಾಡಲಾಗಿದೆ.
ಬಸ್ ಟಿಕೆಟ್ ದರ ಏರಿಕೆ ಬೆನ್ನಲ್ಲೇ ಮಾಸಿಕ ಬಸ್ಪಾಸ್ ದರಗಳೂ ಏರಿಕೆಯಾಗಿದೆ. ತಿಂಗಳ ಪಾಸ್ಗೆ ಬರೋಬ್ಬರಿ 300 ರೂ. ನಷ್ಟು ಏರಿಕೆ ಮಾಡಲಾಗಿದೆ. 1,200 ರೂ. ಇದ್ದ ತಿಂಗಳ ಪಾಸ್ ದರ 1,500 ರೂ.ಗೆ ಹೆಚ್ಚಳ ಮಾಡಲಾಗಿದೆ. ತಿಂಗಳ ವೋಲ್ವೋ ಪಾಸ್ 2,380 ರೂ.ನಿಂದ 2500 ರೂ.ಗೆ ಹೆಚ್ಚಿಸಲಾಗಿದೆ. ಇಂದು ಮಧ್ಯರಾತ್ರಿಯಿಂದಲೇ ಪರಿಷ್ಕೃತ ದರ ಜಾರಿಗೆ ಬರಲಿದೆ.
ದೀಪಾವಳಿ ಹಬ್ಬದ ಖುಷಿಯಲ್ಲಿರೋ ರಾಜ್ಯದ ಜನತೆಗೆ ಇಂದು ಮಧ್ಯರಾತ್ರಿಯಿಂದಲೇ ದರ ಏರಿಕೆಯ ಬಿಸಿ ತಟ್ಟಲಿದೆ. ಕೆಎಸ್ಆರ್ಟಿಸಿ ಸಾಮಾನ್ಯ ಬಸ್ಗಳಲ್ಲಿ ಮೊದಲ 5 ಹಂತಗಳ ಪ್ರಯಾಣದಲ್ಲಿ ಗರಿಷ್ಠ 9 ರೂ., ವೇಗದೂತ ಬಸ್ಸುಗಳಲ್ಲಿ 10 ಹಂತಗಳವರೆಗೆ ಗರಿಷ್ಠ 18 ರೂ.ರಷ್ಟು ಪ್ರಯಾಣ ದರ ಹೆಚ್ಚಳ ಮಾಡಲಾಗಿದೆ.
ಬಿಎಂಟಿಸಿಯಲ್ಲಿ ಪ್ರತಿ ಸ್ಟೇಜ್ಗೆ 4 ರೂ. ನಂತೆ ಹಂತ-ಹಂತವಾಗಿ ಏರಿಕೆಯಾಗಲಿದ್ದು, ದೂರದ ಪ್ರಯಾಣಕ್ಕೆ ಗರಿಷ್ಠ 12 ರೂ. ರಷ್ಟು ಹೆಚ್ಚಳ ಮಾಡಲಾಗಿದೆ. ಎಸಿ ವಜ್ರ ಬಸ್ಗಳ ಗರಿಷ್ಠ ಪ್ರಯಾಣ ದರ 75 ರೂಪಾಯಿಗಳಿಂದ 90 ರೂಪಾಯಿಗೆ ಹೆಚ್ಚಳವಾಗಲಿದೆ. ಕೆಂಪೇಗೌಡ ಏರ್ಪೋರ್ಟ್ಗೆ ಸಂಚರಿಸುವ ವಾಯುವಜ್ರ ಬಸ್ಗಳ ಗರಿಷ್ಠ ದರ 405 ರೂಪಾಯಿಗಳಿಂದ 425 ರೂಪಾಯಿಗೆ ಏರಿಕೆಯಾಗಲಿದೆ. ಶಕ್ತಿ ಯೋಜನೆಯಡಿ ಮಹಿಳೆಯರ ಉಚಿತ ಪ್ರಯಾಣ ಮುಂದುವರಿಯಲಿದೆ. ಇನ್ನು, ಸರ್ಕಾರಿ ಬಸ್ ಪ್ರಯಾಣದರ ಏರಿಕೆ ಬೆನ್ನಲ್ಲೇ ಖಾಸಗಿ ಬಸ್ಗಳಲ್ಲಿ ಶೇ.30ರಿಂದ 50ವರೆಗೆ ಟಿಕೆಟ್ ದರ ಹೆಚ್ಚಾಗೋ ಸಾಧ್ಯತೆಗಳಿವೆ.
ಸಾಮಾನ್ಯ ಸಾರಿಗೆ ಬೆಂಗಳೂರಿನಿಂದ ಎಷ್ಟು ಏರಿಕೆ?
* ನೆಲಮಂಗಲ – 35 ರೂ. ನಿಂದ 44 ರೂ. (9 ರೂ. ಏರಿಕೆ)
* ಹೊಸಕೋಟೆ – 35 ರೂ. ನಿಂದ 44 ರೂ. (9 ರೂ. ಏರಿಕೆ)
* ದೊಡ್ಡಬಳ್ಳಾಪುರ – 38 ರೂ. ನಿಂದ 47 ರೂ. (9 ರೂ. ಏರಿಕೆ)
* ಆನೇಕಲ್ – 38 ರೂ. ನಿಂದ 47 ರೂ. (9 ರೂ. ಏರಿಕೆ)
* ಮಾಗಡಿ – 46 ರೂ. ನಿಂದ 57 ರೂ. (11 ರೂ. ಏರಿಕೆ)
* ಮಾಲೂರು – 46 ರೂ. ನಿಂದ 57 ರೂ. (11 ರೂ. ಏರಿಕೆ)
ವೇಗದೂತ ಸಾರಿಗೆ – ಬೆಂಗಳೂರಿನಿಂದ ಜಿಲ್ಲಾ ಕೇಂದ್ರಗಳಿಗೆ ಎಷ್ಟು ಏರಿಕೆ?
* ಕೋಲಾರ – 81 ರೂ. ನಿಂದ 100 ರೂ. (19 ರೂ. ಏರಿಕೆ)
* ತುಮಕೂರು – 81 ರೂ. ನಿಂದ 100 ರೂ. (19 ರೂ. ಏರಿಕೆ)
* ಮಂಡ್ಯ – 110 ರೂ. ನಿಂದ 136 ರೂ. (26 ರೂ. ಏರಿಕೆ)
* ಮೈಸೂರು – 160 ರೂ. ನಿಂದ 197 ರೂ. (37 ರೂ. ಏರಿಕೆ)
* ಹಾಸನ – 219 ರೂ. ನಿಂದ 270 ರೂ. (51 ರೂ. ಏರಿಕೆ)
* ಚಿಕ್ಕಮಗಳೂರು – 295 ರೂ. ನಿಂದ 363 ರೂ. (68 ರೂ. ಏರಿಕೆ)
* ದಾವಣಗೆರೆ – 317 ರೂ. ನಿಂದ 390 ರೂ. (73 ರೂ. ಏರಿಕೆ)
* ಶಿವಮೊಗ್ಗ – 340 ರೂ. ನಿಂದ 419 ರೂ. (79 ರೂ. ಏರಿಕೆ)
* ಮಂಗಳೂರು – 423 ರೂ. ನಿಂದ 521 ರೂ. (98 ರೂ. ಏರಿಕೆ)
* ಹುಬ್ಬಳ್ಳಿ – 490 ರೂ. ನಿಂದ 613 ರೂ. (123 ರೂ. ಏರಿಕೆ)
* ಬೆಳಗಾವಿ – 603 ರೂ. ನಿಂದ 742 ರೂ. (139 ರೂ. ಏರಿಕೆ)
* ಕಲಬುರಗಿ – 754 ರೂ. ನಿಂದ 928 ರೂ. (174 ರೂ. ಏರಿಕೆ)
* ಬಿಎಂಟಿಸಿ ಪ್ರಯಾಣ ದರ
> 2 ಕಿ.ಮೀವರೆಗಿನ ಪ್ರಯಾಣಕ್ಕೆ 4 ರೂ. ಹೆಚ್ಚಳ
> 2 ಕಿ.ಮೀನಿಂದ 4 ಕಿ.ಮೀ ಪ್ರಯಾಣಕ್ಕೆ 6 ರೂ. ಹೆಚ್ಚಳ
> ದೂರದ ಪ್ರಯಾಣಕ್ಕೆ- ಗರಿಷ್ಠ 12 ರೂ. ಹೆಚ್ಚಳ
* ವಜ್ರ ಸೇವೆಗಳು (ಹವಾ ನಿಯಂತ್ರಿತ)
> 6 ಕಿ.ಮೀ.ವರೆಗಿನ ಪ್ರಯಾಣ- 5 ರೂ. ಹೆಚ್ಚಳ
> 6 ಕಿ.ಮೀ.ಯಿಂದ 18 ಕಿಮೀ- 10 ರೂ.
> ದೂರದ ಪ್ರಯಾಣಕ್ಕೆ- ಗರಿಷ್ಠ 15 ರೂ. ಹೆಚ್ಚಳ
ಇನ್ನು, ದಿನದ ಪಾಸ್ ಕನಿಷ್ಠ 20 ರಿಂದ ಗರಿಷ್ಠ 40 ರೂ, ವಾರ ಪಾಸ್ ಕನಿಷ್ಠ 70 ರಿಂದ ಗರಿಷ್ಠ 175 ರೂ, ಮಾಸಿಕ ಪಾಸ್ ಕನಿಷ್ಠ 300 ರಿಂದ ಗರಿಷ್ಠ 500 ರೂಪಾಯಿವರೆಗೆ ಏರಿಕೆ ಮಾಡಲಾಗಿದೆ.

