– ಕಾರ್ಖಾನೆ ಮಾಲೀಕರ ಒಪ್ಪಿಗೆ ಬೆನ್ನಲ್ಲೇ ಸಚಿವ ಸತೀಶ್ ಜಾರಕಿಹೊಳಿ ಘೋಷಣೆ
– ನಾಳೆಯಿಂದಲೇ ಸಕ್ಕರೆ ಕಾರ್ಖಾನೆ ಶುರು ಮಾಡಲು ಮನವಿ
ಬೆಳಗಾವಿ: ಕಳೆದ ಹಲವು ದಿನಗಳಿಂದ ಕಬ್ಬಿನ ದರ (Sugarcane Price) ನಿಗದಿಗಾಗಿ ರೈತರು ನಡೆಸುತ್ತಿದ್ದ ಹೋರಾಟಕ್ಕೆ ಕೊನೆಗೂ ಮಹತ್ವದ ತಿರುವು ಸಿಕ್ಕಿದೆ. ಪ್ರತಿ ಟನ್ ಕಬ್ಬಿಗೆ 3,600 ರೂಪಾಯಿ ದರ ನೀಡಲು ಸಕ್ಕರೆ ಕಾರ್ಖಾನೆ ಮಾಲೀಕರು ಒಪ್ಪಿಗೆ ಸೂಚಿಸಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಘೋಷಿಸಿದ್ದಾರೆ.
ಬೆಳಗಾವಿಯಲ್ಲಿ (Belagavi) ರೈತ ಮುಖಂಡರು ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರೊಂದಿಗೆ ನಡೆಸಿದ ಮಹತ್ವದ ಸಭೆಯ ಬಳಿಕ ಸಚಿವರು ಈ ಘೋಷಣೆ ಮಾಡಿದ್ದಾರೆ. ಹಲವು ಸುತ್ತಿನ ಮಾತುಕತೆಗಳ ಬಳಿಕ ಕಾರ್ಖಾನೆ ಮಾಲೀಕರು ಪ್ರತಿ ಟನ್ ಕಬ್ಬಿಗೆ 3,600 ರೂಪಾಯಿ ನೀಡಲು ಸಮ್ಮತಿಸಿದ್ದಾರೆ. ಹೀಗಾಗಿ ರೈತ ಮುಖಂಡರು ಕೂಡ ಈ ದರವನ್ನ ಒಪ್ಪಿಕೊಂಡು ಹೋರಾಟವನ್ನ ಕೈಬಿಡಬೇಕು ಎಂದು ಸಚಿವರು ಮನವಿ ಮಾಡಿದ್ದಾರೆ.
ಕಬ್ಬು ಬೆಳೆಗಾರರ ಹೋರಾಟದಿಂದಾಗಿ ಜಿಲ್ಲೆಯ ಹಲವು ಸಕ್ಕರೆ ಕಾರ್ಖಾನೆಗಳ ಆರಂಭ ವಿಳಂಬವಾಗಿದ್ದು, ರೈತರು ಮತ್ತು ಕಾರ್ಖಾನೆಗಳ ನಡುವೆ ದರದ ವಿಚಾರವಾಗಿ ಹಗ್ಗಜಗ್ಗಾಟ ಮುಂದುವರಿದಿತ್ತು. ಈ ಹಿನ್ನೆಲೆ ಸಚಿವ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ರೈತ ಮುಖಂಡರು ಹಾಗೂ ಕಾರ್ಖಾನೆ ಮಾಲೀಕರೊಂದಿಗೆ ಸತತವಾಗಿ ಸಭೆಗಳನ್ನ ನಡೆಸಲಾಗಿತ್ತು. ಇದೀಗ ನಡೆದ ಸಭೆಯಲ್ಲಿ ಪ್ರತಿ ಟನ್ ಕಬ್ಬಿಗೆ 3,600 ರೂಪಾಯಿ ದರ ನಿಗದಿಪಡಿಸುವ ಬಗ್ಗೆ ಒಮ್ಮತ ಮೂಡಿದೆ ಎಂದು ಸಚಿವರು ತಿಳಿಸಿದ್ದಾರೆ.
ನಾಳೆಯಿಂದಲೇ ಕಾರ್ಖಾನೆ ಆರಂಭಿಸಲು ಮನವಿ
ರೈತರಿಗೆ ಯಾವುದೇ ರೀತಿಯ ತೊಂದರೆಯಾಗಬಾರದು ಎಂದರೆ ಸಕ್ಕರೆ ಕಾರ್ಖಾನೆಗಳು ಆರಂಭವಾಗುವುದು ಅತ್ಯಂತ ಮುಖ್ಯ. ಆದ್ದರಿಂದ ನಾಳೆಯಿಂದಲೇ ಕಾರ್ಖಾನೆಗಳನ್ನ ಆರಂಭಿಸಲು ರೈತ ಮುಖಂಡರು ಹಾಗೂ ಕಾರ್ಖಾನೆ ಮಾಲೀಕರು ಸಹಕರಿಸಬೇಕು ಎಂದು ಸತೀಶ್ ಜಾರಕಿಹೊಳಿ ಮನವಿ ಮಾಡಿದ್ದಾರೆ.
ಚೂನಪ್ಪ ಪೂಜೇರಿ ಹಾಗೂ ಶಶಿಕಾಂತ ಗುರೂಜಿ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆ ಮತ್ತು ಜೈಲ್ ಭರೋ ಚಳವಳಿಯನ್ನ ಕೈಬಿಡುವಂತೆ ರೈತ ಮುಖಂಡರಲ್ಲಿ ಮನವಿ ಮಾಡಿದರು. ಈಗಾಗಲೇ ಕಾರ್ಖಾನೆ ಮಾಲೀಕರು 3,600 ರೂಪಾಯಿ ದರ ನೀಡಲು ಒಪ್ಪಿಕೊಂಡಿರುವುದರಿಂದ ರೈತರು ಕೂಡ ಸಕಾರಾತ್ಮಕವಾಗಿ ಸ್ಪಂದಿಸಬೇಕು ಎಂದು ಹೇಳಿದರು.
ಎಂಎಸ್ಪಿ ಹೆಚ್ಚಳವಾದರೆ ರೈತರಿಗೆ ಲಾಭ
ಇನ್ನು ರೈತರು ಮುಂದಿಟ್ಟಿರುವ ಎಂಎಸ್ಪಿ (ಕನಿಷ್ಠ ಬೆಂಬಲ ಬೆಲೆ) ಹೆಚ್ಚಳದ ಬೇಡಿಕೆ ಕುರಿತು ಮಾತನಾಡಿದ ಸಚಿವರು, ಮುಂದಿನ ದಿನಗಳಲ್ಲಿ ಎಂಎಸ್ಪಿ ಹೆಚ್ಚಳವಾದ್ರೆ, ಅದರ ಸಂಪೂರ್ಣ ಲಾಭವನ್ನ ರೈತರಿಗೆ ನೀಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ. ಕಾರ್ಖಾನೆಗಳು ಆರಂಭವಾದ ಬಳಿಕ ಸರ್ಕಾರದ ಮುಂದೆ ರೈತರು ತಮ್ಮ ಪ್ರತ್ಯೇಕ ಬೇಡಿಕೆಗಳನ್ನು ಸಲ್ಲಿಸಬಹುದು. ಆ ಬೇಡಿಕೆಗಳ ಕುರಿತು ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲು ಅವಕಾಶವಿದೆ ಎಂದು ತಿಳಿಸಿದ್ದಾರೆ.
ರೈತರ ಹೋರಾಟ ಕಾರ್ಖಾನೆಗಳ ವಿರುದ್ಧವಲ್ಲ
ರೈತರ ಹೋರಾಟವನ್ನು ಕಾರ್ಖಾನೆಗಳ ವಿರುದ್ಧದ ಹೋರಾಟ ಎಂದು ಪರಿಗಣಿಸಬಾರದು. ರೈತರು ಎಸ್ಎಪಿ (SAP) ಜಾರಿಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಅವರ ಬೇಡಿಕೆಗಳನ್ನ ಸರ್ಕಾರದ ಗಮನಕ್ಕೆ ತರುವ ಉದ್ದೇಶದಿಂದ ಈ ಹೋರಾಟ ನಡೆಯುತ್ತಿದೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
