– ಕರ್ನಾಟಕದ ಮಾಜಿ ಡಿಸಿಎಂ ಮೊಮ್ಮಗಳನ್ನ ವಿವಾಹವಾಗಿರುವ ಅಬ್ದುಲ್
ಕಾರವಾರ: ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ ಮಿಷಿಗನ್ ರಾಜ್ಯದ ಸೆನೆಟರ್ ಸ್ಥಾನಕ್ಕೆ ಸ್ಪರ್ಧಿಸಿ ಗೆಲುವು ಕಂಡ ಡೆಮಾಕ್ರಟಿಕ್ ಪಕ್ಷದ ಅಬ್ದುಲ್ ಅಲ್ ಸಯೀದ್ ಮೊದಲ ಮುಸ್ಲಿಂ ಸಂಸದ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಆದರೆ, ಅವರ ಸಂಬಂಧಗಳು ಭಾರತದ ಕರ್ನಾಟಕ ರಾಜ್ಯದ ಭಟ್ಕಳ ರಾಜಕಾರಣಿ ಕುಟುಂಬದೊಂದಿಗೆ ಬೆಸೆದುಕೊಂಡಿದೆ.
ಅಬ್ದುಲ್ ಅಲ್ ಸಯೀದ್ ಅವರ ಪತ್ನಿ ಡಾ. ಸಾರಾ ಜುಕಾಕು ಭಟ್ಕಳದವರು. ಇವರ ತಂದೆ ವೈದ್ಯ ಡಾ. ತಯ್ಯಬ್ ಜುಕಾಕು ಕೂಡ ಭಟ್ಕಳದವರಾಗಿದ್ದು, ಮಾಜಿ ಡಿಸಿಎಂ ದಿವಂಗತ ಶಂಸುದ್ದೀನ್ ಜುಕಾಕು ಅವರ ಪುತ್ರ. ದಿವಂಗತ ಶಂಸುದ್ದೀನ್ ಜುಕಾಕು ಅವರು ಬಾಂಬೆ ಪ್ರೆಸಿಡೆನ್ಸಿಯಿಂದ ಒಮ್ಮೆ ಮತ್ತು ಮೈಸೂರು ಪ್ರೆಸಿಡೆನ್ಸಿ, ಹೊನ್ನಾವರ ವಿಧಾನಸಭಾ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಅವರು ಮುಖ್ಯಮಂತ್ರಿ ಬಿ.ಡಿ.ಜತ್ತಿ ಅವರ ಸರ್ಕಾರದಲ್ಲಿ ಹಣಕಾಸು ಖಾತೆಯನ್ನು ಹೊಂದಿದ್ದರು.
1950 ರಲ್ಲಿ ಉಪಮುಖ್ಯಮಂತ್ರಿಯಾಗಿ ಸಹ ಸೇವೆ ಸಲ್ಲಿಸಿದ್ದರು. ಇವರು ಭಟ್ಕಳದ ಮೊದಲ ಮುಸ್ಲಿಂ ವಕೀಲರಾಗಿದ್ದು, ಉತ್ತರ ಕನ್ನಡ ಜಿಲ್ಲೆಯ ಭಟ್ಕಳಕ್ಕೆ 1945 ರಲ್ಲಿ ಮೊದಲ ಬಾರಿಗೆ ವಿದ್ಯುತ್ ಸಂಪರ್ಕ ನೀಡುವಲ್ಲಿ ಕಾಣಿಕೆ ನೀಡಿದರು. ಮೊದಲ ದೂರವಾಣಿ ಸಂಪರ್ಕ ಭಟ್ಕಳಕ್ಕೆ ಸಿಗಲು ಇವರು ಕಾರಣೀಕರ್ತರು. ಇವರ ಸ್ಮರಣಾರ್ಥ ಭಟ್ಕಳ ನಗರದಲ್ಲಿ ರಸ್ತೆಯ ವೃತ್ತವೊಂದಕ್ಕೆ ಶಂಸುದ್ದೀನ್ ಸರ್ಕಲ್ ಎಂದು ಹೆಸರಿಡಲಾಗಿದೆ.
ಇಂತಹ ಕುಟುಂಬದ ಕುಡಿ ವೈದ್ಯ ಡಾ. ತಯ್ಯಬ್ ಜುಕಾಕು ಅಮೆರಿಕಕ್ಕೆ ವಲಸೆ ಹೋದರೆ, ಉಳಿದವರು ಗಲ್ಫ್ ರಾಷ್ಟ್ರಗಳಲ್ಲಿ ಜೀವನ ಕಂಡುಕೊಂಡಿದ್ದಾರೆ. ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಮೂತ್ರಪಿಂಡಶಾಸ್ತ್ರಜ್ಞರಾಗಿ ಕೆಲಸ ಮಾಡಿರುವ ಡಾ. ತಯ್ಯಬ್ ಜುಕಾಕು ಅವರು ಅಲ್ಲಿನ ಹಲವಾರು ಸಾಮಾಜಿಕ ಮತ್ತು ದತ್ತಿ ಸಂಸ್ಥೆಗಳೊಂದಿಗೆ ಸಕ್ರಿಯವಾಗಿ ಸಂಬಂಧ ಹೊಂದಿದ್ದು, ಸಾಮಾಜಿಕ ಸೇವೆ ಮಾಡುತಿದ್ದಾರೆ. 2006 ಡಾ. ತಯ್ಯಬ್ ಜುಕಾಕು ಪುತ್ರಿ ಡಾ. ಸಾರಾ ಜುಕಾಕು ಅವರನ್ನ ಡಾ. ಅಬ್ದುಲ್ ಅಲ್ ಸಯೀದ್ ವರಿಸಿದ್ದು, ಇವರಿಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ.
