ನವದೆಹಲಿ: ದೆಹಲಿ ಪೊಲೀಸ್ ಪ್ರಧಾನ ಕಚೇರಿ ಎದುರು ಪೊಲೀಸ್ ಸಿಬ್ಬಂದಿ ನಡೆಸಿದ ಪ್ರತಿಭಟನೆಗೆ (Delhi Police Protest) ನೇತೃತ್ವ ವಹಿಸಿದ್ದ ಎಸಿಪಿ ಮನಸ್ವಿ ವಶಿಷ್ಠ (ACP Manasvi Vashishtha) ಅವರನ್ನು ಕೇಂದ್ರ ಗೃಹ ಸಚಿವಾಲಯ ಅಮಾನತುಗೊಳಿಸಿದೆ. ಸೋಮವಾರ ನಡೆದ ಪ್ರತಿಭಟನೆಯ ಬೆನ್ನಲ್ಲೇ ಈ ಕ್ರಮ ಕೈಗೊಳ್ಳಲಾಗಿದೆ.
ಅಕ್ಟೋಬರ್ 23ರಂದು ದೆಹಲಿಯ ಶಹದಾರ ಪೊಲೀಸ್ ಠಾಣೆಯಲ್ಲಿ ಪೊಲೀಸರು ಮತ್ತು ವಕೀಲರ ನಡುವೆ ನಡೆದ ಘರ್ಷಣೆಯ ಹಿನ್ನೆಲೆಯಲ್ಲಿ ಎಸಿಪಿ ಮನಸ್ವಿ ವಶಿಷ್ಠ ಹಾಗೂ ಶಹದಾರ ಠಾಣೆಯ ಇನ್ಸ್ಪೆಕ್ಟರ್ ಅರುಣ್ ಕುಮಾರ್ ಅವರನ್ನು ವರ್ಗಾವಣೆ ಮಾಡಲಾಗಿತ್ತು. ಈ ವರ್ಗಾವಣೆ ಆದೇಶವನ್ನು ವಿರೋಧಿಸಿ ಸುಮಾರು 150 ಮಂದಿ ಪೊಲೀಸ್ ಸಿಬ್ಬಂದಿ ಸೋಮವಾರ ದೆಹಲಿ ಪೊಲೀಸ್ ಪ್ರಧಾನ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದರು. ಇದನ್ನೂ ಓದಿ: ಕುಂದಾಪುರದ ಬಳ್ಳೂರಿನಲ್ಲಿ ಭೀಕರ ರಸ್ತೆ ಅಪಘಾತ; ಕಾಲೇಜು ವಿದ್ಯಾರ್ಥಿ ಸಾವು
ವರ್ಗಾವಣೆಗೊಂಡಿದ್ದ ಇಬ್ಬರು ಅಧಿಕಾರಿಗಳನ್ನು ಮತ್ತೆ ಹಿಂದಿನ ಹುದ್ದೆಗಳಿಗೆ ನಿಯೋಜಿಸಬೇಕು ಎಂಬುದು ಪ್ರತಿಭಟನಾಕಾರರ ಪ್ರಮುಖ ಬೇಡಿಕೆಯಾಗಿತ್ತು. ಮಹಿಳಾ ಪೊಲೀಸ್ ಸಿಬ್ಬಂದಿಯೂ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಈ ವೇಳೆ `ಸಮವಸ್ತ್ರಕ್ಕೆ ಆಗುವ ಅವಮಾನವನ್ನು ಸಹಿಸುವುದಿಲ್ಲ’ ಎಂಬ ಘೋಷಣೆಗಳನ್ನು ಕೂಗಲಾಗಿತ್ತು. ಇದನ್ನೂ ಓದಿ: ಲಾರೆನ್ಸ್ ಬಿಷ್ಣೋಯ್ ಇರುವ ಸಬರಮತಿ ಜೈಲ್ಗೆ ಬಾಂಬ್ ಬೆದರಿಕೆ – ಪೊಲೀಸರಿಂದ ಹೈ ಅಲರ್ಟ್
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಪೊಲೀಸ್ ಸಿಬ್ಬಂದಿಯ ನಿಯೋಗ ಪೊಲೀಸ್ ಆಯುಕ್ತ ಅನುರಾಗ್ ಕುಮಾರ್ ಅವರನ್ನು ಭೇಟಿಯಾಗಿ ಐದು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟಿತ್ತು. ಶಹದಾರ ಘಟನೆಗೆ ಸಂಬಂಧಿಸಿದ ವಕೀಲರ ವಿರುದ್ಧ ಕ್ರಮ ಕೈಗೊಳ್ಳಬೇಕು, ಗಲಾಟೆ ನಡೆಸುವ ವಕೀಲರ ವಿರುದ್ಧ ಎಫ್ಐಆರ್ ದಾಖಲಿಸಬೇಕು ಸೇರಿದಂತೆ ಪೊಲೀಸರ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಸೂಕ್ತ ವ್ಯವಸ್ಥೆ ರೂಪಿಸಬೇಕು ಎಂದು ಒತ್ತಾಯಿಸಲಾಗಿತ್ತು. ಇದನ್ನೂ ಓದಿ: ನ.13ಕ್ಕೆ ಪ್ರಧಾನಿ ಮೋದಿಯಿಂದ ನಮ್ಮ ಮೆಟ್ರೋ ಪಿಂಕ್ ಮಾರ್ಗ ಉದ್ಘಾಟನೆ
ಪ್ರತಿಭಟನೆ ಕುರಿತು ಮಾತನಾಡಿದ್ದ ಎಸಿಪಿ ಮನಸ್ವಿ ವಶಿಷ್ಠ, ಇದು ಪೊಲೀಸ್ ಸಿಬ್ಬಂದಿಯಿಂದ ಸ್ವಯಂಪ್ರೇರಿತವಾಗಿ ಆರಂಭವಾದ ಪ್ರತಿಭಟನೆಯಾಗಿದ್ದು, ತಾವು ಅದರಲ್ಲಿ ಭಾಗವಹಿಸಿರುವುದಾಗಿ ತಿಳಿಸಿದ್ದರು. ಪೊಲೀಸ್ ಸಿಬ್ಬಂದಿಯ ಸಮಸ್ಯೆಗಳನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರಲು ವೇದಿಕೆ ಕಲ್ಪಿಸಬೇಕು ಎಂಬ ಬೇಡಿಕೆಯನ್ನೂ ಮುಂದಿಟ್ಟಿದ್ದರು. ಇದನ್ನೂ ಓದಿ: ಜೈಲುಗಳಲ್ಲಿ ಜಾತಿ ತಾರತಮ್ಯ ಕೇಸ್; 23 ರಾಜ್ಯಗಳಿಗೆ ಸುಪ್ರೀಂ ಕೋರ್ಟ್ನಿಂದ ಕೊನೆಯ ಎಚ್ಚರಿಕೆ
ಇದಕ್ಕೂ ಮೊದಲು ಅಕ್ಟೋಬರ್ 23ರಂದು ಶಹದಾರ ಪೊಲೀಸ್ ಠಾಣೆಯಲ್ಲಿ ನಡೆದ ಘರ್ಷಣೆಯಲ್ಲಿ ವಕೀಲ ಲಲಿತ್ ಬನ್ಸಾಲ್ ಗಂಭೀರವಾಗಿ ಗಾಯಗೊಂಡಿದ್ದರು ಎನ್ನಲಾಗಿದೆ. ಈ ಘಟನೆಯ ಬಳಿಕ ಪೊಲೀಸರು ವಕೀಲರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಮತ್ತು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ವಕೀಲರು ಪ್ರತಿಭಟನೆ ಆರಂಭಿಸಿದ್ದರು. ದೆಹಲಿಯ ಜಿಲ್ಲಾ ನ್ಯಾಯಾಲಯಗಳ ವಕೀಲರು ಅನಿರ್ದಿಷ್ಟಾವಧಿ ಮುಷ್ಕರಕ್ಕೂ ಕರೆ ನೀಡಿದ್ದರು. ಇದನ್ನೂ ಓದಿ: ಮದ್ದೂರು | ಜಗಳ ಬಿಡಿಸಲು ಹೋದ ಯುವಕನ ಕತ್ತು ಸೀಳಿ ಹತ್ಯೆ
ಪರಿಸ್ಥಿತಿಯನ್ನು ತಿಳಿಗೊಳಿಸುವ ಉದ್ದೇಶದಿಂದ ಅಕ್ಟೋಬರ್ 28ರಂದು ಎಸಿಪಿ ಮನಸ್ವಿ ವಶಿಷ್ಠ ಮತ್ತು ಇನ್ಸ್ಪೆಕ್ಟರ್ ಅರುಣ್ ಕುಮಾರ್ ಅವರನ್ನು ವರ್ಗಾವಣೆ ಮಾಡಲಾಗಿತ್ತು. ಬಳಿಕ ವಕೀಲರು ತಮ್ಮ ಮುಷ್ಕರವನ್ನು ಹಿಂಪಡೆದಿದ್ದರು. ಈ ಬೆಳವಣಿಗೆಗಳ ಬೆನ್ನಲ್ಲೇ ಪೊಲೀಸ್ ಸಿಬ್ಬಂದಿ ಪ್ರತಿಭಟನೆ ನಡೆಸಿದ್ದು, ಇದೀಗ ಎಸಿಪಿ ಮನಸ್ವಿ ವಶಿಷ್ಠ ಅವರ ಅಮಾನತು ಪ್ರಕರಣ ಮತ್ತಷ್ಟು ಚರ್ಚೆಗೆ ಕಾರಣವಾಗಿದೆ. ಇದನ್ನೂ ಓದಿ: ಪುಣೆಯಲ್ಲಿ 23 ಕಿ.ಮೀ ಉದ್ದದ ಮೆಟ್ರೋ ಮಾರ್ಗ ಉದ್ಘಾಟಿಸಿದ ಪ್ರಧಾನಿ ಮೋದಿ; 4 ಹೊಸ ಕಾರಿಡಾರ್ಗಳಿಗೆ ಶಂಕುಸ್ಥಾಪನೆ
