ಉಡುಪಿ: ಕುಂದಾಪುರ (Kundapura) ತಾಲೂಕಿನ ಬಳ್ಳೂರಿನಲ್ಲಿ ಅಕ್ಟೋಬರ್ 30ರಂದು ಟಿಪ್ಪರ್ ಲಾರಿ ಹಾಗೂ ಸ್ಕೂಟರ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮೂಡ್ಲಕಟ್ಟೆ ಕಾಲೇಜಿನ ವಿದ್ಯಾರ್ಥಿ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಮೃತ ವಿದ್ಯಾರ್ಥಿಯನ್ನು ಕಂಡ್ಲೂರು ನಿವಾಸಿ ಟಿ.ಕೆ.ಮೊಹಮ್ಮದ್ ಶಾಯನ್ ಎಂದು ಗುರುತಿಸಲಾಗಿದೆ. ಅಪಘಾತದ ಬಳಿಕ ಅವರನ್ನು ಮಣಿಪಾಲದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಸ್ಕೂಟರ್ನ ಹಿಂಬದಿ ಸವಾರನಾಗಿದ್ದ ಮತ್ತೊಬ್ಬ ವಿದ್ಯಾರ್ಥಿ ಮೊಹಮ್ಮದ್ ರಾಯನ್ ಕೂಡ ಅಪಘಾತದಲ್ಲಿ ಗಾಯಗೊಂಡಿದ್ದರು.
ಕುಂದಾಪುರ ತಾಲೂಕಿನ ಬಳ್ಳೂರು ಗ್ರಾಮದ ವಿಷ್ಣುಮೂರ್ತಿ ದೇವಸ್ಥಾನದ ಸಮೀಪ ರಾಜ್ಯ ಹೆದ್ದಾರಿ 52ರಲ್ಲಿ ಅಕ್ಟೋಬರ್ 30ರಂದು ಈ ಅಪಘಾತ ಸಂಭವಿಸಿತ್ತು. ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು. ಮಣ್ಣು ಸಾಗಿಸುತ್ತಿದ್ದ ಎರಡು ಟಿಪ್ಪರ್ ಲಾರಿಗಳು ಕುಂದಾಪುರ ಕಡೆಯಿಂದ ಅತಿವೇಗ ಹಾಗೂ ನಿರ್ಲಕ್ಷ್ಯದಿಂದ ಬರುತ್ತಿದ್ದವು ಎನ್ನಲಾಗಿದೆ. ಮುಂದೆ ಸಾಗುತ್ತಿದ್ದ ಕೆಎಸ್ಆರ್ಟಿಸಿ ಬಸ್ನಿಂದಾಗಿ ಮೊದಲ ಟಿಪ್ಪರ್ ಚಾಲಕ ವೇಗ ಕಡಿಮೆ ಮಾಡಿದ್ದಾನೆ. ಈ ವೇಳೆ ಹಿಂಬದಿಯಿಂದ ಬಂದ ಮತ್ತೊಂದು ಟಿಪ್ಪರ್ ಮೊದಲ ಟಿಪ್ಪರ್ಗೆ ಡಿಕ್ಕಿ ಹೊಡೆದಿದೆ. ಬಳಿಕ ಎರಡನೇ ಟಿಪ್ಪರ್ ಚಾಲಕ ವಾಹನವನ್ನು ರಸ್ತೆಯ ಬಲಬದಿಗೆ ತಿರುಗಿಸಿದ ಪರಿಣಾಮ, ಕಂಡೂರು ಕಡೆಯಿಂದ ಬಸೂರು ಕಡೆಗೆ ವಿದ್ಯಾರ್ಥಿಗಳನ್ನು ತೆರಳುತ್ತಿದ್ದ ಸ್ಕೂಟರ್ಗೆ ಡಿಕ್ಕಿಯಾಗಿದೆ. ಪರಿಣಾಮ ಇಬ್ಬರೂ ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದರು.
ಅಪಘಾತಕ್ಕೀಡಾದ ಟಿಪ್ಪರ್ ಅಗತ್ಯ ಪರವಾನಗಿ ಇಲ್ಲದೇ ಮಣ್ಣು ಸಾಗಿಸುತ್ತಿರುವುದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಅಪಘಾತಕ್ಕೀಡಾದ ಟಿಪ್ಪರ್ ಅಗತ್ಯ ಪರವಾನಗಿ ಇಲ್ಲದೆ ಮಣ್ಣು ಸಾಗಿಸುತ್ತಿರುವುದು ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಅಪಘಾತ ಹಾಗೂ ಅಕ್ರಮ ಮಣ್ಣು ಸಾಗಾಟಕ್ಕೆ ಸಂಬಂಧಿಸಿದಂತೆ ಇಬ್ಬರು ಟಿಪ್ಪರ್ ಚಾಲಕರಾದ ನಾಗರಾಜ್ ಮತ್ತು ಋತ್ವಿಜ್ ಹಾಗೂ ಮಣ್ಣು ತೆಗೆದ ಜಾಗದ ಮಾಲೀಕ ಅಜಿತ್ ಶೆಟ್ಟಿ ಅವರನ್ನು ಪೊಲೀಸರು ಬಂಧಿಸಿದ್ದಾರೆ.
