ಹಾಸನ: ಉತ್ತರಾಖಂಡದಲ್ಲಿ ನಡೆದ ಹೆಲಿಕಾಪ್ಟರ್ ದುರಂತದಲ್ಲಿ (Uttarakhand Helicopter Tragedy) ಸಾವನ್ನಪ್ಪಿದ ಉದ್ಯಮಿ ಪ್ರತಾಪ್ಗೌಡ ಅವರ ಅಂತ್ಯಕ್ರಿಯೆ ಸಕಲೇಶಪುರ ತಾಲೂಕಿನ ಹುಟ್ಟೂರು ಬಾಚಿಹಳ್ಳಿಯಲ್ಲಿ ನೆರವೇರಿತು.
ಬೆಳಿಗ್ಗೆ ಪ್ರತಾಪ್ಗೌಡ ಅವರ ಪಾರ್ಥಿವ ಶರೀರವನ್ನು ಅಂಬ್ಯುಲೆನ್ಸ್ ಮೂಲಕ ತರಲಾಯಿತು. ಹಾಸನದ ಗಡಿ ಭಾಗದಿಂದ ಬಾಚಿಹಳ್ಳಿಯವರೆಗೂ ನೂರಾರು ಮಂದಿ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಕಂಬನಿ ಮಿಡಿದರು. ಪ್ರತಾಪ್ಗೌಡರೇ ಧನ ಸಹಾಯ ಮಾಡಿ ಸಕಲೇಶಪುರ ಪಟ್ಟಣದ ಬಿಎಂ ರಸ್ತೆ ಪಕ್ಕದಲ್ಲಿ ನಿರ್ಮಾಣ ಮಾಡಿದ್ದ ಕೆಂಪೇಗೌಡ ಪ್ರತಿಮೆ ಬಳಿ ಸಾವಿರಾರು ಜನ ಅಂತಿಮ ದರ್ಶನ ಪಡೆದರು. ಹೆತ್ತೂರು ಗ್ರಾಮದಲ್ಲಿ ವರ್ತಕರು ಸ್ವಯಂಪ್ರೇರಿತವಾಗಿ ಅಂಗಡಿಮುಂಗಟ್ಟುಗಳನ್ನು ಮುಚ್ಚಿ ಅಂತಿಮ ದರ್ಶನ ಪಡೆದು ಶ್ರದ್ಧಾಂಜಲಿ ಸಲ್ಲಿಸಿದರು. ಇದನ್ನೂ ಓದಿ: ಉತ್ತರಾಖಂಡ ಹೆಲಿಕಾಪ್ಟರ್ ದುರಂತ – ಸರ್ಕಾರಿ ಗೌರವದೊಂದಿಗೆ ನೆರವೇರಿದ ಸಿಸಿಬಿ ಇನ್ಸ್ಪೆಕ್ಟರ್ ಅರುಣ್ ಸಾಳುಂಕೆ ಅಂತ್ಯಕ್ರಿಯೆ
ಬಾಚಿಹಳ್ಳಿ ಗ್ರಾಮದಲ್ಲಿ ಒಕ್ಕಲಿಗ ಸಂಪ್ರದಾಯದಂತೆ ಅಂತಿಮ ವಿಧಿ-ವಿಧಾನ ನಡೆಸಲಾಯಿತು. ಈ ವೇಳೆ ಪತಿ ಪ್ರತಾಪ್ಗೌಡ ಅವರ ಫೋಟೋ ನೋಡಿ ಪತ್ನಿ ದೀಕ್ಷಿತ ಕಣ್ಣೀರಿಟ್ಟರು. ಹಿರಿಯ ಪುತ್ರ ಕುನಾಲ್ಗೌಡ ಚಿತೆಗೆ ಅಗ್ನಿಸ್ಪರ್ಶ ಮಾಡಿದರು. ಅಂತ್ಯಕ್ರಿಯೆ ವೇಳೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಅಂತ್ಯಕ್ರಿಯೆಯಲ್ಲಿ ಸಂಸದ ಶ್ರೇಯಸ್ಪಟೇಲ್, ಶಾಸಕ ಸಿಮೆಂಟ್ಮಂಜು ಹಾಗೂ ನೂರಾರು ಮಂದಿ ಭಾಗಿಯಾಗಿದ್ದರು. ಇದನ್ನೂ ಓದಿ: ಉತ್ತರಾಖಂಡ ಹೆಲಿಕಾಪ್ಟರ್ ದುರಂತ – ಒಕ್ಕಲಿಗ ಸಂಪ್ರದಾಯದಂತೆ ನೆರವೇರಿದ ತುಮಕೂರಿನ ಇಬ್ಬರ ಅಂತ್ಯಸಂಸ್ಕಾರ
