ವಾಷಿಂಗ್ಟನ್: ಅಮೆರಿಕದಲ್ಲಿ ನಾಳೆ ಮಧ್ಯಂತರ ಚುನಾವಣೆಗೆ (US Midterm Election) ಮತದಾನ ನಡೆಯಲಿದೆ. ಚುನಾವಣೆ ನಡೆದು ಕೇವಲ 2 ವರ್ಷ, ಟ್ರಂಪ್ (Donald Trump) ಅಧ್ಯಕ್ಷರಾಗಿ ಕೇವಲ 22 ತಿಂಗಳುಗಳಾಗಿವೆ. ಇದೊಂದು ಮಧ್ಯಂತರ ಚುನಾವಣೆಯಾಗಿದ್ದು, ಅಧ್ಯಕ್ಷರ 4 ವರ್ಷಗಳ ಅಧಿಕಾರಾವಧಿಯ ನಿಖರ ಮಧ್ಯಭಾಗದಲ್ಲಿ ನಡೆಯುವ ಅಮೆರಿಕದ ಸಂಸತ್ ಕಾಂಗ್ರೆಸ್ ಚುನಾವಣೆಯೇ ಇದಾಗಿದೆ.
ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ನ (ಜನಪ್ರತಿನಿಧಿಗಳ ಸಭೆ) ಎಲ್ಲಾ 435 ಸ್ಥಾನಗಳು ಹಾಗೂ ಸೆನೆಟ್ನ 100 ಸ್ಥಾನಗಳ ಪೈಕಿ 35 ಸ್ಥಾನಗಳಿಗೆ ಮತದಾನ ನಡೆಯಲಿದೆ. ಅಧ್ಯಕ್ಷೀಯ ಅವಧಿಯ ಮಧ್ಯಭಾಗದಲ್ಲಿ ನಡೆಯುವ ಈ ಚುನಾವಣೆಗಳು ಸಾರ್ವಜನಿಕರ ಅಭಿಪ್ರಾಯಗಳನ್ನು ಅಳೆಯುವ ಮಾನದಂಡಗಳಾಗಿವೆ. ಸೆನೆಟ್ ಮತ್ತು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಎರಡರಲ್ಲೂ ರಿಪಬ್ಲಿಕನ್ ಪಕ್ಷದ ನಿಯಂತ್ರಣವನ್ನು ಹೊಂದಿರುವ ಟ್ರಂಪ್ ಅವರಿಗೆ ಈ ಚುನಾವಣೆ ಅವರ ನೀತಿಗಳ ಜನಪ್ರಿಯತೆಯನ್ನು ಪರೀಕ್ಷಿಸುವ ವೇದಿಕೆಯಾಗಿದೆ. ಇದನ್ನೂ ಓದಿ: ಸಂಸತ್ತಿನ ವಿಶೇಷ ಅಧಿವೇಶನಕ್ಕೆ ಸಿದ್ಧ – SIR ಕುರಿತು ಚರ್ಚೆಗೆ ಬನ್ನಿ; ರಾಹುಲ್ ಗಾಂಧಿಗೆ ಅಮಿತ್ ಶಾ ಸವಾಲ್
ಪ್ರಸ್ತುತ ರಾಜಕೀಯ ಚಿತ್ರಣದ ಪ್ರಕಾರ, ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ನಲ್ಲಿ ಪ್ರಸ್ತುತ ರಿಪಬ್ಲಿಕನ್ (Republican) ಪಕ್ಷವು 218 ಸ್ಥಾನಗಳನ್ನು ಹೊಂದುವ ಮೂಲಕ ಅಲ್ಪ ಬಹುಮತ ಕಾಯ್ದುಕೊಂಡಿದೆ. ಬಹುಮತ ಸಾಬೀತುಪಡಿಸಲು 218 ಸ್ಥಾನಗಳ ಅಗತ್ಯವಿದ್ದು, ಡೆಮಾಕ್ರಟಿಕ್ (Democrats) ಪಕ್ಷವು 214 ಸ್ಥಾನಗಳನ್ನು ಹೊಂದಿದೆ. ಓರ್ವ ಪಕ್ಷೇತರ ಸದಸ್ಯ ರಿಪಬ್ಲಿಕನ್ನರೊಂದಿಗೆ ಗುರುತಿಸಿಕೊಂಡಿದ್ದರೆ, 2 ಸ್ಥಾನಗಳು ಖಾಲಿ ಇವೆ.
ಮತ್ತೊಂದೆಡೆ, 100 ಸದಸ್ಯ ಬಲದ ಸೆನೆಟ್ನಲ್ಲಿ ರಿಪಬ್ಲಿಕನ್ ಪಕ್ಷವು 53 ಸ್ಥಾನಗಳೊಂದಿಗೆ ಸ್ಪಷ್ಟ ಪಾರುಪತ್ಯ ಹೊಂದಿದೆ. ಡೆಮಾಕ್ರಟಿಕ್ ಪಕ್ಷದ ಬಳಿ 45 ಸ್ಥಾನಗಳಿದ್ದು, ಇಬ್ಬರು ಪಕ್ಷೇತರರು ಅವರೊಂದಿಗೆ ಗುರುತಿಸಿಕೊಂಡಿದ್ದಾರೆ. ಪ್ರಸ್ತುತ 35 ಸ್ಥಾನಗಳಿಗೆ ಮಾತ್ರ ಚುನಾವಣೆ ನಡೆಯಲಿದೆ (33 ಸಾಮಾನ್ಯ ಹಾಗೂ ಫ್ಲಾರಿಡಾ ಮತ್ತು ಓಹಿಯೊದಲ್ಲಿ 2 ವಿಶೇಷ ಚುನಾವಣೆ). ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮುಂದಿನ ಆಡಳಿತದ ಅವಧಿಯಲ್ಲಿನ ವಿಧೆಯಕಗಳ ಅಂಗೀಕಾರ, ಆಂತರಿಕ ತನಿಖೆಗಳು ಮತ್ತು ಆರ್ಥಿಕ ನಿರ್ಧಾರಗಳ ಮೇಲೆ ಯಾರು ಹಿಡಿತ ಸಾಧಿಸಲಿದ್ದಾರೆ ಎಂಬುದನ್ನು ಈ ಚುನಾವಣೆ ನಿರ್ಧರಿಸಲಿದೆ.
ಅಮೆರಿಕದ ಕಾಲಮಾನದ ಪ್ರಕಾರ ಮಂಗಳವಾರ ಬೆಳಿಗ್ಗೆ 6ರಿಂದ 8ಗಂಟೆಯೊಳಗೆ ಮತದಾನ ಆರಂಭವಾಗಲಿದ್ದು, ಸಂಜೆಯಿಂದಲೇ ಆರಂಭಿಕ ಫಲಿತಾಂಶಗಳು ಹೊರಬೀಳುವ ನಿರೀಕ್ಷೆಯಿದೆ. ಆದರೆ ತೀವ್ರ ಪೈಪೋಟಿ ಇರುವ ಕ್ಷೇತ್ರಗಳ ಅಂತಿಮ ಫಲಿತಾಂಶ ಪ್ರಕಟವಾಗಲು ಕೆಲವು ದಿನಗಳು ಹಿಡಿಯುವ ಸಾಧ್ಯತೆಯಿದೆ. ಮತದಾನ ಮುಗಿದ ಕೂಡಲೇ ಮತ ಎಣಿಕೆ ಪ್ರಾರಂಭವಾಗುತ್ತದೆ. ಫಲಿತಾಂಶಗಳು ನವೆಂಬರ್ 4 ರಂದು ಹೊರಬೀಳಬಹುದು. ಸಂಸತ್ನ 2 ಸದನಗಳಲ್ಲೂ ಸದ್ಯಕ್ಕೆ ಟ್ರಂಪ್ ಪವರ್ಫುಲ್ ಆಗಿದ್ದಾರೆ. ಆದರೆ, ನಾಳಿನ ಚುನಾವಣೆ ಬಳಿಕ ಅಂಕಿ ಸಂಖ್ಯೆಗಳಲ್ಲಿ ವ್ಯತ್ಯಯ ಆಗಬಹುದು. ಈ ಮಧ್ಯಂತರ ಚುನಾವಣೆಯಲ್ಲಿ ಭಾರತೀಯ ಮೂಲದ ಹಲವರು ಕಣದಲ್ಲಿ ಇದ್ದಾರೆ.
ಅಮೆರಿಕದ ಸಂಸತ್ತನ್ನು `ಕಾಂಗ್ರೆಸ್’ ಎಂದು ಕರೆಯಲಾಗುತ್ತದೆ. ಇದರಲ್ಲಿ ಎರಡು ಸದನಗಳಿವೆ. ಕೆಳಮನೆಯನ್ನು `ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್’ (ಪ್ರತಿನಿಧಿ ಸಭೆ) ಎನ್ನಲಾಗುತ್ತದೆ. ಇದರ ಒಟ್ಟು ಸದಸ್ಯ ಬಲ 435. ಜನಸಂಖ್ಯೆಯ ಆಧಾರದ ಮೇಲೆ ರಾಜ್ಯಗಳಿಗೆ ಈ ಸ್ಥಾನಗಳನ್ನು ಹಂಚಿಕೆ ಮಾಡಲಾಗಿರುತ್ತದೆ. ಈ ಸದನದ ಸದಸ್ಯರ ಅಧಿಕಾರಾವಧಿ ಕೇವಲ ಎರಡು ವರ್ಷಗಳು. ಅಂದರೆ, ಪ್ರತೀ ಎರಡು ವರ್ಷಗಳಿಗೊಮ್ಮೆ ಈ ಸದನದ ಎಲ್ಲ 435 ಸ್ಥಾನಗಳಿಗೂ ಹೊಸದಾಗಿ ಚುನಾವಣೆ ನಡೆಯುತ್ತದೆ. ಸದ್ಯ ಈ ಎಲ್ಲಾ ಸ್ಥಾನಗಳಿಗೂ ಮತದಾನ ನಡೆಯಲಿದೆ.
ಮೇಲ್ಮನೆಯಾದ `ಸೆನೆಟ್’ನ ಒಟ್ಟು ಸದಸ್ಯ ಬಲ ಕೇವಲ 100. ಇಲ್ಲಿ ಜನಸಂಖ್ಯೆಯ ಹಂಗಿಲ್ಲದೆ ಅಮೆರಿಕದ ಎಲ್ಲಾ 50 ರಾಜ್ಯಗಳು ತಲಾ ಇಬ್ಬರು ಪ್ರತಿನಿಧಿಗಳನ್ನು ಸಮಾನವಾಗಿ ಆರಿಸಿ ಕಳುಹಿಸುತ್ತವೆ. ಸೆನೆಟರ್ಗಳ ಅಧಿಕಾರಾವಧಿ ಆರು ವರ್ಷಗಳು. ಆದರೆ, ಪ್ರತೀ ಎರಡು ವರ್ಷಕ್ಕೊಮ್ಮೆ ಸೆನೆಟ್ನ ಮೂರನೇ ಒಂದರಷ್ಟು ಸದಸ್ಯರ ಅವಧಿ ಮುಕ್ತಾಯವಾಗುತ್ತದೆ. ಪ್ರಸ್ತುತ 33 ನಿಯಮಿತ ಸ್ಥಾನಗಳು ಹಾಗೂ ಫ್ಲೋರಿಡಾ ಮತ್ತು ಒಹಾಯೊದ 2 ವಿಶೇಷ ಚುನಾವಣೆಗಳು ಸೇರಿ ಒಟ್ಟು 35 ಸೆನೆಟ್ ಸ್ಥಾನಗಳಿಗೆ ಈಗ ಕದನ ನಡೆಯುತ್ತಿದೆ. ಅವಧಿ ಮುಗಿದವರು ಕಡ್ಡಾಯವಾಗಿ ನಿವೃತ್ತರಾಗಬೇಕಿಲ್ಲ, ಅವರು ಮರು ಆಯ್ಕೆ ಬಯಸಿ ಸ್ಪರ್ಧಿಸಲೂ ಅವಕಾಶವಿದೆ.
ಡೆಮಾಕ್ರಟ್ಗಳು ಗೆದ್ದರೆ ಟ್ರಂಪ್ ಆಡಳಿತ ಯಂತ್ರದ `ಪ್ಲಾನ್ ಬಿ’ ಕೂಡ ಸಿದ್ಧವಾಗಿದೆ. ಸಂಸತ್ತಿನ ನೆರವಿಲ್ಲದೆ, ತಮ್ಮ ಕಾರ್ಯಾಂಗದ ಅಧಿಕಾರ ಬಳಸಿ ವಲಸೆ ನಿಯಂತ್ರಣ, ಆಮದು ಸುಂಕ ಹೆಚ್ಚಳ ಹಾಗೂ ಬಜೆಟ್ ಅನುದಾನಗಳ ಮರುಹಂಚಿಕೆ ಮಾಡಲು ಟ್ರಂಪ್ ಸಿದ್ಧತೆ ನಡೆಸಿದ್ದಾರೆ. ಅಲ್ಲದೆ, ಡೆಮಾಕ್ರಟ್ಗಳು ತರುವ ಯಾವುದೇ ಮಸೂದೆಗಳನ್ನು ಸುಲಭವಾಗಿ ವೀಟೊ (ತಿರಸ್ಕರಿಸುವ ಹಕ್ಕು) ಮಾಡಲು ತಾವು `ಮಿಸ್ಟರ್ ವೀಟೊ’ ಆಗುವುದಾಗಿಯೂ ಟ್ರಂಪ್ ಈಗಾಗಲೇ ಘೋಷಿಸಿದ್ದಾರೆ. ಇದನ್ನೂ ಓದಿ: NCP ಸಂಸ್ಥಾಪಕ ಶರದ್ ಪವಾರ್ ಆಸ್ಪತ್ರೆಗೆ ದಾಖಲು

