– ಪ್ರಕರಣದ ತನಿಖೆ ಕೈಗೆತ್ತಿಕೊಂಡ ವಿಮಾನ ಅಪಘಾತ ತನಿಖಾ ಸಂಸ್ಥೆ
ಡೆಹ್ರಾಡೂನ್: ಇಲ್ಲಿನ ಬದರಿನಾಥ ಧಾಮದಿಂದ ಡೆಹ್ರಾಡೂನ್ ಕಡೆಗೆ ತೆರಳುತ್ತಿದ್ದಾಗ ಜೋಶಿಮಠದ ಬಳಿ ಪತನಗೊಂಡ ಹೆಲಿಕಾಪರ್ನಲ್ಲಿ ಬೆಂಗಳೂರಿನ ಐವರು ಸೇರಿ 6 ಮಂದಿ ಮೃತಪಟ್ಟಿದ್ದು, ದೇಹಗಳು ಗುರುತೇ ಸಿಗದಷ್ಟು ಸುಟ್ಟು ಕರಕಲಾಗಿವೆ. ನಾಳೆ (ನ.1) ಮರಣೋತ್ತರ ಪರೀಕ್ಷೆ ಬಳಿಕ ಬೆಂಗಳೂರಿಗೆ ಮೃತದೇಹ ರವಾನೆಯಾಗುವ ಸಾಧ್ಯತೆಯಿದೆ.
ಉತ್ತರಾಖಂಡ್ನ ಚಾರ್ಧಾಮ್ ಪ್ರದರ್ಶನಕ್ಕೆ ತೆರಳಿದ್ದ ಕನ್ನಡಿಗರಾದ ಸಿಸಿಬಿ ಇನ್ಸ್ಪೆಕ್ಟರ್ ಅರುಣ್ ಸಾಲಂಕಿ, ವಕೀಲರಾದ ಶಂಕರೇಗೌಡ, ನಟರಾಜ್, ಕಂಟ್ರ್ಯಾಕ್ಟರ್ ಪ್ರತಾಪ್ಗೌಡ, ಉದ್ಯಮಿ ಸುಧೀರ್ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಉತ್ತರಾಖಂಡದಲ್ಲಿ ಕಳೆದ 10 ವರ್ಷದಲ್ಲಿ 13 ಹೆಲಿಕಾಪ್ಟರ್ ದುರಂತ – 27 ಮಂದಿ ಸಾವು
ಅ.31ರ ಬೆಳಗ್ಗೆ 5 ಗಂಟೆಗೆ ರಕ್ಷಣಾ ಕಾರ್ಯಾಚರಣೆ ಆರಂಭವಾಗಿದ್ದು, ದುರ್ಗಮ ಪ್ರದೇಶದಿಂದ ಮೃತದೇಹಗಳನ್ನು ಹೊರತರುವುದು ಕಷ್ಟಕರವಾಗಿತ್ತು. ಚಮೋಲಿಯ ಜೋಶಿಮಠದ ಚಾಯ್ ಗ್ರಾಮದಲ್ಲಿ ಅವಶೇಷಗಳು ಪತ್ತೆಯಾಗಿದ್ದು, ಸದ್ಯ ಜೋಶಿಮಠದ ಸರ್ಕಾರಿ ಆಸ್ಪತ್ರೆಯಲ್ಲಿ ಮೃತದೇಹಗಳನ್ನಿಡಲಾಗಿದೆ. ಡಿಎನ್ಎ ಮೂಲಕ ಮೃತದೇಹಗಳ ಪತ್ತೆ ಕಾರ್ಯನಡೆಯಲಿದ್ದು, ತದನಂತರ ಮೃತದೇಹಗಳ ಹಸ್ತಾಂತರ ಪ್ರಕ್ರಿಯೆ ನಡೆಸಲಾಗುತ್ತದೆ. ನಾಳೆ ಬೆಂಗಳೂರಿಗೆ ಮೃತದೇಹಗಳು ರವಾನೆಯಾಗುವ ಸಾಧ್ಯತೆಯಿದೆ. ಈಗಾಗಲೇ ಮೃತರ ಕುಟುಂಬಸ್ಥರು ಉತ್ತರಾಖಂಡ್ಗೆ ಪ್ರಯಾಣ ಬೆಳೆಸಿದ್ದಾರೆ.
ದುರಂತದಲ್ಲಿ ಸಕಲೇಶಪುರದ ಬಾಚಿಹಳ್ಳಿ ಗ್ರಾಮದ ಪ್ರತಾಪ್ ಗೌಡ ನಿಧನಕ್ಕೆ ಇಡೀ ಗ್ರಾಮವೇ ಕಣ್ಣೀರಿಡುತ್ತಿದೆ. ಹುಟ್ಟೂರಿನಲ್ಲಿ ಪ್ರತಾಪ್ ಗೌಡ ದೇವಾಲಯ, ಶಾಲಾ-ಕಾಲೇಜು, ಬಡವಿದ್ಯಾರ್ಥಿಗಳು, ರೈತರಿಗಾಗಿ ನೆರವಿನ ಹಸ್ತ ನೀಡಿದ್ದರು. ಯಾರೇ ನೆರವು ಕೇಳಿಕೊಂಡು ಬಂದರೂ ಇಲ್ಲ ಅನ್ನುತ್ತಿರಲಿಲ್ಲವಂತೆ. ನಾಯಕತ್ವದ ಗುಣ ಹೊಂದಿದ್ದ ಪ್ರತಾಪ್ ಗೌಡ ಕಾಂಗ್ರೆಸ್ ಪಕ್ಷದಿಂದ ಜಿಲ್ಲಾ ಪಂಚಾಯಿತಿಗೆ ಸ್ಪರ್ಧಿಸುವ ಆಸೆ ಹೊಂದಿದ್ದರಂತೆ. ಕುಣಿಗಲ್ ತಾಲೂಕಿನ ಹುಲಿಯೂರುದುರ್ಗದ ಕೋಳಿ ವ್ಯಾಪಾರಿ ನಟರಾಜ್ ಸಾವಿಗೆ ಸಂಬಂಧಿಕರು ಕಂಬನಿ ಮಿಡಿದಿದ್ದಾರೆ. ನಾಳೆ ಹಳೆಪೇಟೆ ಜೂನಿಯರ್ ಕಾಲೇಜು ಹಿಂಭಾಗದಲ್ಲಿ ಅಂತ್ಯ ಸಂಸ್ಕಾರಕ್ಕೆ ನಿರ್ಧರಿಸಲಾಗಿದೆ ಅಂದಿದ್ದಾರೆ. ಇದನ್ನೂ ಓದಿ: ಹೆಲಿಕಾಪ್ಟರ್ ದುರಂತ | ಬೆಂಗಳೂರಿನ ಐವರು ಸೇರಿ 6 ಮಂದಿ ಸಾವು – ಸುಟ್ಟು ಕರಕಲಾದ ಸ್ಥಿತಿಯಲ್ಲಿ ಮೃತದೇಹ ಪತ್ತೆ!
ಉತ್ತರಾಖಂಡ್ ದುರಂತದಲ್ಲಿ ಹೈಕೋರ್ಟ್ ವಕೀಲ ಸುಧೀರ್ ಸಾವನ್ನಪ್ಪಿದ್ದಾರೆ. ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ತ್ಯಾವಣಗಿ ಮೂಲದವರಾದ ಸುಧೀರ್ ಕುಟುಂಬದೊಂದಿಗೆ ಬೆಂಗಳೂರಿನ ನಾಗರಬಾವಿಯಲ್ಲಿ ವಾಸವಿದ್ದರು. ಇವತ್ತು ಸುಧೀರ್ ಚಿಕ್ಕಪ್ಪನ ಮಗ ಮದ್ವೆ ಇದ್ದು. ಇವತ್ತು ಬಂದೇ ಬರ್ತೀನಿ ಎಂದು ಹೇಳಿದ್ದರಂತೆ. ಆದರೆ ಸಾವಿನ ಸುದ್ದಿ ಕೇಳಿ ಕುಟುಂಬಕ್ಕೆ ಬರಸಿಡಿಲು ಬಡಿದಂತಾಗಿದೆ. ಈ ಮಧ್ಯೆ, ಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿ, ಉತ್ತರಾಖಂಡ್ ಅನಾಹುತ ಭಾರಿ ದುಃಖ ತಂದಿದೆ. ಮೃತರ ಪಾರ್ಥಿವ ಶರೀರ ತರಲು ಬೇಕಾದ ವ್ಯವಸ್ಥೆ ಮಾಡಿದ್ದೇವೆ ಎಂದಿದ್ದಾರೆ. ಆ ಕುಟುಂಬಗಳಿಗೆ ದುಃಖ ಭರಿಸುವ ಶಕ್ತಿಯನ್ನು ದೇವರು ಕೊಡಲಿ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಹೇಳಿದ್ದಾರೆ.ಇದನ್ನೂ ಓದಿ: ಜೋಶಿಮಠ ಬಳಿ ಹೆಲಿಕಾಪ್ಟರ್ ಪತನ – ಅವಘಡದಲ್ಲಿ ತುಮಕೂರಿನ ವಿದ್ಯಾಭಾರತಿ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ದುರ್ಮರಣ
ತನಿಖಾ ಕೈಗೆತ್ತಿಕೊಂಡ ವಿಮಾನ ಅಪಘಾತ ತನಿಖಾ ಸಂಸ್ಥೆ:
ಉತ್ತರಾಖಂಡದಲ್ಲಿ ಹೆಲಿಕಾಪ್ಟರ್ ಪತನಗೊಂಡ ದುರ್ಗಮ ಸ್ಥಳದಿಂದ ಮೃತದೇಹಗಳನ್ನು ಅರಣ್ಯ ಇಲಾಖೆಯ ತಂಡ, ವಿಮಾನ ಅಪಘಾತ ತನಿಖಾ ಬ್ಯೂರೋದ ಅಧಿಕಾರಿಗಳು ಹಾಗೂ ಡಿಜಿಸಿಎ ತಂಡ ಹೊರತೆಗೆದಿದೆ. ಪ್ರಕರಣದ ತನಿಖೆಯನ್ನು ಎಎಐಬಿ ಅಂದರೆ ವಿಮಾನ ಅಪಘಾತ ತನಿಖಾ ಸಂಸ್ಥೆ ಕೈಗೆತ್ತಿಕೊಂಡಿದೆ. ಪೈಲಟ್ ಕ್ಯಾಪ್ಟನ್ ಹಿಮಾಂಶು ಅವರ ಫ್ಲೇಯಿಂಗ್ ಹಿಸ್ಟರಿ, ಚಾಪರ್ನ ಬ್ಲ್ಯಾಕ್ ಬಾಕ್ಸ್ ಮತ್ತು ಫ್ಲೈಟ್ ಡೇಟಾ ಪರಿಶೀಲನೆ ಮಾಡಿದ್ದು, ಹವಾಮಾನ ವೈಪರೀತ್ಯ, ಹೆಲಿಕಾಪ್ಟರ್ ನಿರ್ವಹಣೆ ಮತ್ತು ತಾಂತ್ರಿಕ ಸ್ಥಿತಿಯ ಬಗ್ಗೆಯೂ ತನಿಖೆ ಮಾಡ್ತಿದೆ.
ಇನ್ನು ಈ ದುರಂತಕ್ಕೂ ಮುನ್ನ ಹವಾಮಾನ ಇಲಾಖೆ ಉತ್ತರಾಖಂಡದಾದ್ಯಂತ ಯೆಲ್ಲೋ ಅಲರ್ಟ್ ಘೋಷಿಸಿದ್ದರೂ ಹೆಲಿಕಾಪ್ಟರ್ ಹಾರಾಟಕ್ಕೆ ಅನುಮತಿ ನೀಡಿದ್ದು ಹೇಗೆ ಎಂಬ ಅನುಮಾನಗಳು ಎದ್ದಿವೆ. ಧಾರ್ಮಿಕ ಕ್ಷೇತ್ರಗಳ ದರ್ಶನದ ಜೊತೆಗೆ ಪ್ರಕೃತಿ ಸೌಂದರ್ಯವನ್ನು ಸವಿಯಲು ಒಟ್ಟಿಗೆ ಹೋಗಿದ್ದ ಸ್ನೇಹಿತರು ಇದೀಗ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಮನೆ ಸೇರುತ್ತಿರುವುದು ಘೋರ ದುರಂತವಾಗಿದೆ.ಇದನ್ನೂ ಓದಿ: ಜೋಶಿಮಠ ಬಳಿ ಹೆಲಿಕಾಪ್ಟರ್ ಪತನ – ದುರಂತದಲ್ಲಿ ಬೆಂಗಳೂರಿನ ಪೊಲೀಸ್ ಇನ್ಸ್ಪೆಕ್ಟರ್ ಸಾವು
