ಬಳ್ಳಾರಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ವಿರುದ್ಧ ಮಾಡಲಾಗಿರುವ ಸ್ಟಿಂಗ್ ಕಾರ್ಯಾಚರಣೆಯ(Sting Operation) ಹಿಂದೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೈವಾಡವಿದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ (N Ravikumar) ಗಂಭೀರ ಆರೋಪ ಮಾಡಿದ್ದಾರೆ.
ಬಳ್ಳಾರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರನ್ನು ಅಧಿಕಾರದಿಂದ ಕೆಳಗಿಳಿಸಲು ಕಾಂಗ್ರೆಸ್ನವರೇ ಈ ರೀತಿಯ ಷಡ್ಯಂತ್ರ ರೂಪಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಸಿದ್ದರಾಮಯ್ಯ ನಮ್ಮ ರಾಜ್ಯದ ಹಿಂದುಳಿದ ವರ್ಗಗಳ ಪ್ರಮುಖ ನಾಯಕ. ಅವರಿಗೆ ಇದೇ ರೀತಿ ಅಪಮಾನ ಮಾಡುತ್ತಾ ಹೋದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ವನಾಶವಾಗಲಿದೆ. ಈ ಸರ್ಕಾರಕ್ಕೆ ಕಿಂಚಿತ್ತಾದರೂ ಮಾನ, ಮರ್ಯಾದೆ ಇದ್ದರೆ ಈ ರೀತಿಯ ಕೀಳು ಮಟ್ಟದ ಕೆಲಸಗಳನ್ನು ಮಾಡಬಾರದಿತ್ತು. ಸಿದ್ದರಾಮಯ್ಯನವರಿಗೆ ಈ ರೀತಿಯ ತಂತ್ರಗಳನ್ನು ಮಾಡಿಯೇ ಡಿಕೆಶಿ ಅವರು ಕುರ್ಚಿಯಿಂದ ಕೆಳಗಿಳಿಸಿದ್ದಾರೆ. ಇದು ಸ್ವಪಕ್ಷೀಯರೇ ಸಿದ್ದರಾಮಯ್ಯರಿಗೆ ಮಾಡಿರುವ ಮಹಾನ್ ದ್ರೋಹ ಎಂದು ರವಿಕುಮಾರ್ ಆಕ್ರೋಶ ಹೊರಹಾಕಿದರು.
ಇತ್ತೀಚೆಗೆ ನಡೆದ ವಿಧಾನ ಪರಿಷತ್ ಚುನಾವಣೆಯ ಫಲಿತಾಂಶದ ಕುರಿತು ಮಾತನಾಡಿದ ಅವರು, ವಿಧಾನಸಭೆ ಹಾಗೂ ಉಪಚುನಾವಣೆಯಲ್ಲಿ ಗೆದ್ದ ತಕ್ಷಣ ಕಾಂಗ್ರೆಸ್ಗೆ ಅತಿಯಾದ ಅಹಂಕಾರ ಬಂದಿತ್ತು. ಜನ ನಮ್ಮ ಕೈಯಲ್ಲೇ ಇದ್ದಾರೆ, ನಾವು ಆಡಿದ್ದೇ ಆಟ ಎಂದುಕೊಂಡು ಜನರಿಗೆ ನೀಡಿದ ಭರವಸೆಗಳನ್ನು ಮರೆತರು. ಸರ್ಕಾರಿ ಶಾಲೆಗಳಲ್ಲಿ ಸಮವಸ್ತ್ರವಿಲ್ಲ, ಅತಿಥಿ ಶಿಕ್ಷಕರಿಂದಲೇ ಶಿಕ್ಷಣ ಸಂಸ್ಥೆಗಳು ನಡೆಯುತ್ತಿವೆ. ರೈತರ ಆತ್ಮಹತ್ಯೆ, ಬಾಣಂತಿಯರ ಸಾವುಗಳು ಹೆಚ್ಚಾಗುತ್ತಿವೆ. ಖಜಾನೆ ಖಾಲಿಯಾಗಿದೆ ಎಂದು ಹಣಕಾಸು ಇಲಾಖೆ ಎಚ್ಚರಿಸಿದರೂ ಮಂಗಳೂರಿನಲ್ಲಿ 32,000 ಕೋಟಿ ರೂ. ಮೊತ್ತದ ಯೋಜನೆಗಳನ್ನು ಘೋಷಿಸಿದರು. ಸರ್ಕಾರದ ಈ ಅಧೋಗತಿಯನ್ನು ಗಮನಿಸಿದ ಶಿಕ್ಷಕರು ಹಾಗೂ ಪದವೀಧರ ಮತದಾರರು ನಾಲ್ಕೂ ಕ್ಷೇತ್ರಗಳಲ್ಲಿ ಬಿಜೆಪಿಯನ್ನು ಗೆಲ್ಲಿಸಿ ಕಾಂಗ್ರೆಸ್ ಸರ್ಕಾರಕ್ಕೆ ಸರಿಯಾಗಿ ಕಪಾಳಮೋಕ್ಷ ಮಾಡಿದ್ದಾರೆ ಎಂದರು. ಇದನ್ನೂ ಓದಿ: ಹಿಂಸಾಚಾರದ ಮೂಲಕ ಸರ್ಕಾರ ಬೀಳಿಸಲು ಯತ್ನಿಸುವವರಿಗೆ ಸರ್ಕಾರಿ ಉದ್ಯೋಗ ಬಂದ್ – ಯೋಗಿ ಸರ್ಕಾರದ ಆದೇಶ
ಮಲ್ಲಿಕಾರ್ಜುನ ಖರ್ಗೆ ಮತ್ತು ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ತಂದೆಯ ಬಗ್ಗೆ ಮಾತನಾಡುವುದು ಕಲ್ಯಾಣ ಕರ್ನಾಟಕದ ಸಂಸ್ಕೃತಿಯಲ್ಲ. ಪ್ರಧಾನಿ ಹುದ್ದೆ ಕಾಂಗ್ರೆಸ್ ನೀಡಿದ ಭಿಕ್ಷೆಯಲ್ಲ, ದೇಶದ ಜನ ನೀಡಿದ ಆಶೀರ್ವಾದ. ಜನರಿಗೆ ತಕ್ಕ ಪಾಠ ಕಲಿಸುವ ಶಕ್ತಿ ಇದೆ. ಇವಿಎಂ ಬೇಡ, ಬ್ಯಾಲೆಟ್ ಪೇಪರ್ ಬೇಕು ಎಂದಿದ್ದ ಕಾಂಗ್ರೆಸ್ಗೆ ಜನರು ಬ್ಯಾಲೆಟ್ನಲ್ಲೂ ತಕ್ಕ ಪಾಠ ಕಲಿಸಿದ್ದಾರೆ. ಇನ್ನು ಮುಂದಕ್ಕೆ ಅವರು ತಾಳೆಗರಿಯಲ್ಲಿ ಚುನಾವಣೆ ನಡೆಸಿ ಎಂದು ಕೇಳಿದರೂ ಆಶ್ಚರ್ಯವಿಲ್ಲ ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್ ಪಕ್ಷವು ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಯತ್ನಿಸುತ್ತಿದೆ ಎಂದು ಆರೋಪಿಸಿದ ರವಿಕುಮಾರ್, ನೇಪಾಳ, ಬಾಂಗ್ಲಾದೇಶಗಳಲ್ಲಿ ನಡೆದಂತೆ ಇಲ್ಲೂ ಗಲಭೆ ಎಬ್ಬಿಸಲು ಹುನ್ನಾರ ನಡೆಸಲಾಗುತ್ತಿದೆ. ಸುಪ್ರೀಂ ಕೋರ್ಟ್ಗೂ ಬೆದರಿಕೆ ಹಾಕುವ ಮಟ್ಟಕ್ಕೆ ಕಾಂಗ್ರೆಸ್ ಇಳಿದಿದೆ. ಚುನಾವಣಾ ಆಯೋಗ ತಯಾರಿಸುವ ಮತದಾರರ ಪಟ್ಟಿಯ ಮೇಲೆ ಸಂಶಯ ವ್ಯಕ್ತಪಡಿಸುತ್ತಿದ್ದಾರೆ. ಕಾಂಗ್ರೆಸ್ನ ಈ ಅಪ್ರಜಾಸತ್ತಾತ್ಮಕ ಹಾಗೂ ಅಪಾಯಕಾರಿ ನೀತಿಗಳ ವಿರುದ್ಧ ‘ಪ್ರಜಾಪ್ರಭುತ್ವವನ್ನು ಉಳಿಸಿ, ಅರಾಜಕತೆಯನ್ನು ಅಳಿಸಿ’ ಎಂಬ ಘೋಷಣೆಯೊಂದಿಗೆ ರಾಜ್ಯದ 10 ಪ್ರಮುಖ ಸ್ಥಳಗಳಲ್ಲಿ ಸೇರಿದಂತೆ ದೇಶಾದ್ಯಂತ ಬಿಜೆಪಿ ಬೃಹತ್ ಪಾದಯಾತ್ರೆ ಹಮ್ಮಿಕೊಳ್ಳಲಿದೆ ಎಂದು ತಿಳಿಸಿದರು.
