ರಾಮನಗರ: ವಿಜಯಲಕ್ಷ್ಮಿ ಹಾಗೂ ನಟ ಧನ್ವೀರ್ (Dhanveer Gowda) ನಡುವಿನ ಸಂಘರ್ಷದಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್ ಅವರ ಪುತ್ರನೂ ಆಗಿರುವ ನಟ ಝೈದ್ ಖಾನ್ ಹೆಸರು ಪ್ರಸ್ತಾಪ ಹಿನ್ನೆಲೆ, ಧನ್ವೀರ್ ವಿರುದ್ಧ ಝೈದ್ ಖಾನ್ ಅಭಿಮಾನಿಗಳು (Zaid Khan Fans) ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚನ್ನಪಟ್ಟಣದಲ್ಲಿ ಝೈದ್ ಖಾನ್ ಅಭಿಮಾನಿಗಳು ಪ್ರತಿಭಟನೆ ನಡೆಸಿ, ಈ ವೇಳೆ ಧನ್ವೀರ್ ಭಾವಚಿತ್ರಕ್ಕೆ ಮಸಿ ಬಳಿದು, ಚಪ್ಪಲಿಯಿಂದ ಹೊಡೆದು ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ನಟ ಧನ್ವೀರ್ ತಮ್ಮ ವೈಯಕ್ತಿಕ ಲಾಭಕ್ಕೆ ಝೈದ್ ಖಾನ್ ಹೆಸರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ದುರಹಂಕಾರದಲ್ಲಿ ಝೈದ್ ಖಾನ್ ಬಗ್ಗೆ ನಾಲಿಗೆ ಹರಿಬಿಟ್ಟಿದ್ದಾರೆ. ಧನ್ವೀರ್ ಕೂಡಲೇ ನಟ ಝೈದ್ ಖಾನ್ ಬಳಿ ಬಹಿರಂಗವಾಗಿ ಕ್ಷಮೆ ಕೇಳಬೇಕು. ಇಲ್ಲವಾದಲ್ಲಿ ನಟ ಧನ್ವೀರ್ ರಾಜ್ಯದಲ್ಲಿ ಎಲ್ಲೇ ಹೋದರೂ ಅವರಿಗೆ ಮುತ್ತಿಗೆ ಹಾಕಿ ತಕ್ಕ ಪಾಠ ಕಲಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಸಂಬಂಧ ಚನ್ನಪಟ್ಟಣ ನಗರ ಪೊಲೀಸ್ ಠಾಣೆಯಲ್ಲಿ ಧನ್ವೀರ್ ವಿರುದ್ಧ ದೂರು ದಾಖಲಿಸಿದ್ದಾರೆ. ಝೈದ್ ಖಾನ್ ಬಗ್ಗೆ ಅವಹೇಳನ ಮಾಡಿರೋ ಧನ್ವೀರ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಒತ್ತಾಯಿಸಿದ್ದಾರೆ.

