ನವದೆಹಲಿ: ಲಡಾಖ್ (Ladakh) ಭಾರತದ ಅವಿಭಾಜ್ಯ ಭಾಗ. ಇದನ್ನು ಯಾರೂ ಅಲ್ಲಗಳೆಯಲಾಗದು ಎಂದು ಚೀನಾಗೆ (China) ಭಾರತ ಟಕ್ಕರ್ ಕೊಟ್ಟಿದೆ.
ಕೇಂದ್ರಾಡಳಿತ ಪ್ರದೇಶವಾದ ಲಡಾಖ್‌ನಲ್ಲಿನ 28 ಆಯಕಟ್ಟಿನ ಸ್ಥಳಗಳು ಮತ್ತು ಭೌಗೋಳಿಕ ವೈಶಿಷ್ಟ್ಯಗಳ ಹೆಸರುಗಳನ್ನು ಅಧಿಕೃತ ನಕ್ಷೆಗಾಗಿ ಕೇಂದ್ರ ಸರ್ಕಾರವು ಗುರುತಿಸಿ ಪ್ರಮಾಣೀಕರಿಸಿದಾಗ ಚೀನಾ ಆಕ್ಷೇಪ ವ್ಯಕ್ತಪಡಿಸಿತು. ಇದರ ಬೆನ್ನಲ್ಲೇ, ಲಡಾಖ್ ಭಾರತದ (India) ಅವಿಭಾಜ್ಯ ಮತ್ತು ಬೇರ್ಪಡಿಸಲಾಗದ ಭಾಗ ಎಂದು ಭಾರತ ಪುನರುಚ್ಚರಿಸಿದೆ.
ಅಕ್ಟೋಬರ್ 2 ರಂದು ಭಾರತವು ಲಡಾಖ್‌ನಲ್ಲಿನ 28 ಕಾರ್ಯತಂತ್ರದ ಸ್ಥಳಗಳು ಮತ್ತು ಭೌಗೋಳಿಕ ವೈಶಿಷ್ಟ್ಯಗಳನ್ನು ಅಧಿಕೃತ ಭಾರತೀಯ ನಕ್ಷೆಯಲ್ಲಿ ಔಪಚಾರಿಕವಾಗಿ ಗುರುತಿಸಿತು. ಇವುಗಳಲ್ಲಿ ‘ವಾಸ್ತವಿಕ ನಿಯಂತ್ರಣ ರೇಖೆ’ಯ (LAC) ಉದ್ದಕ್ಕೂ ಇರುವ ಗೊಗ್ರಾ ಮತ್ತು ಹಾಟ್ ಸ್ಪ್ರಿಂಗ್‌ನಂತಹ ಪ್ರಮುಖ ಗಡಿ ಸಂಘರ್ಷದ ತಾಣಗಳೂ ಸೇರಿವೆ. ಇದನ್ನೂ ಓದಿ: ಸ್ಮಿತ್ ಮಚ್ಚಾರ್ ಮೇಲೆ ಹಲ್ಲೆ ನಡೆಸಿದ್ದ ವ್ಯಕ್ತಿಗೆ ಆಪ್ತರಾಗಿದ್ದ ಮಾಲ್ಡೀವ್ಸ್‌ನ ಇಬ್ಬರು ಸಹ-ಪೈಲಟ್‌ಗಳು ವಶಕ್ಕೆ
ಲಡಾಖ್ ಆಡಳಿತದೊಂದಿಗೆ ಸರ್ಕಾರ ಸಮಾಲೋಚನೆ ನಡೆಸಿ ಕ್ರಮಕೈಗೊಂಡಿದೆ. ಅಧಿಕೃತ ಭೂಪಟ ರಚನೆಯನ್ನು ವ್ಯವಸ್ಥಿತಗೊಳಿಸುವುದು, ನಿಖರವಾದ ಗುರುತಿಸುವಿಕೆಗೆ ಅನುವು ಮಾಡಿಕೊಡುವುದು ಮತ್ತು ಸೂಕ್ಷ್ಮ ಗಡಿ ಪ್ರದೇಶದ ಕುರಿತು ಸಾರ್ವಜನಿಕರಲ್ಲಿ ಉತ್ತಮ ಅರಿವನ್ನು ಮೂಡಿಸುವ ಉದ್ದೇಶ ಹೊಂದಲಾಗಿದೆ.
ಲಡಾಖ್ ಕೇಂದ್ರಾಡಳಿತ ಪ್ರದೇಶದ ‘ಸರ್ವೆ ಆಫ್ ಇಂಡಿಯಾ’ ನಕ್ಷೆಯಲ್ಲಿ ಈ ಸ್ಥಳಗಳನ್ನು ಅಧಿಕೃತವಾಗಿ ಗುರುತಿಸುವುದರ ಉದ್ದೇಶವು, ಅವುಗಳ ನಿಖರವಾದ ಗುರುತಿಸುವಿಕೆಗೆ ಹಾಗೂ ಸಾರ್ವಜನಿಕರಲ್ಲಿ ಉತ್ತಮ ಅರಿವು ಮೂಡಿಸಲು ಅನುವು ಮಾಡಿಕೊಡುವುದಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ಗೋಗ್ರಾ ಮತ್ತು ಹಾಟ್ ಸ್ಪ್ರಿಂಗ್ ಪ್ರಮುಖ ವ್ಯೂಹಾತ್ಮಕ ಸ್ಥಳಗಳಾಗಿವೆ. 2020 ರಲ್ಲಿ ಭಾರತೀಯ ಹಾಗೂ ಚೀನೀ ಪಡೆಗಳ ನಡುವೆ ಉಂಟಾದ ಬಿಕ್ಕಟ್ಟಿನ ಸಂದರ್ಭದಲ್ಲಿ ಇವು ಸಂಘರ್ಷದ ತಾಣಗಳಾಗಿದ್ದವು. ವಾಸ್ತವಿಕ ನಿಯಂತ್ರಣ ರೇಖೆಯ (LAC) ಉದ್ದಕ್ಕೂ ಭಾರತೀಯ ಪಡೆಗಳ ಗಸ್ತು ಚಟುವಟಿಕೆಗಳಿಗೆ ಈ ಸ್ಥಳಗಳು ಅತ್ಯಂತ ನಿರ್ಣಾಯಕವಾಗಿವೆ. ಇದನ್ನೂ ಓದಿ: ಸುಪ್ರೀಂ ಆವರಣದಲ್ಲಿ ನನ್ನ ಮೇಲೆ ರಾಹುಲ್ ಹಲ್ಲೆ – ಗರ್ಭಿಣಿ ಪತ್ರಕರ್ತೆ ಆರೋಪ
ಲಡಾಖ್ ಕೇಂದ್ರಾಡಳಿತ ಪ್ರದೇಶವು ಭಾರತದ ಅವಿಭಾಜ್ಯ ಮತ್ತು ಬೇರ್ಪಡಿಸಲಾಗದ ಭಾಗವಾಗಿದೆ ಎಂಬುದನ್ನು ಪುನರುಚ್ಚರಿಸಲಾಗಿದೆ. ಚೀನಾ ಕಡೆಯಿಂದ ಎಷ್ಟೇ ನಿರಾಕರಣೆಗಳು ಬಂದರೂ, ಈ ಸ್ಥಾಪಿತ ಸತ್ಯವನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಸಚಿವಾಲಯವು ಒತ್ತಿಹೇಳಿದೆ.

