ಮುಂಬೈ: ಅತ್ತೆ-ಮಾವನ ಮನೆಯವರ ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಟೆಕ್ಕಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾರಾಷ್ಟ್ರದ (Maharashtra) ಪುಣೆಯಲ್ಲಿ (Pune Techie) ನಡೆದಿದೆ. ಪೊಲೀಸರು ಆಕೆಯ ಪತಿ ಮತ್ತು ಆತನ ಕುಟುಂಬದವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ತ್ರಿಷ್ಣಾ ರಾಹುಲ್ ಸಕ್ಪಾಲ್ ಎಂಬ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2018ರಲ್ಲಿ ರಾಹುಲ್ ಸಕ್ಪಾಲ್ ಅವರನ್ನು ವಿವಾಹವಾಗಿದ್ದರು. ಮಹಿಳೆಯ ತಂದೆ ಬಾಲಕೃಷ್ಣ ನಿಕಮ್ ಅವರು ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳ ದೂರು ನೀಡಿದ್ದಾರೆ. ಇದನ್ನೂ ಓದಿ: ಬೆಂಗಳೂರಿನ ಟೆಕ್ಕಿ ಹೈದರಾಬಾದ್ನಲ್ಲಿ ಸೂಸೈಡ್ – ಅಪಾರ್ಟ್ಮೆಂಟ್ನ 30ನೇ ಮಹಡಿಯಿಂದ ಹಾರಿ ಆತ್ಮಹತ್ಯೆ
ವಿವಾಹವಾದಾಗಿನಿಂದಲೂ ತ್ರಿಷ್ಣಾಳ ಪೂರ್ತಿ ವೇತನವನ್ನು ನೀಡುವಂತೆ ಅತ್ತೆ ಮನೆಯವರು ಕಿರುಕುಳ ನೀಡುತ್ತಿದ್ದರು. ತವರು ಮನೆಯ ಫ್ಲ್ಯಾಟ್ ಅನ್ನು ಅತ್ತೆಯ ಹೆಸರಿಗೆ ವರ್ಗಾಯಿಸುವಂತೆ ಮತ್ತು ಮಾವನಿಗಾಗಿ 1 ಕೋಟಿ ರೂಪಾಯಿ ಮೌಲ್ಯದ ಫ್ಲ್ಯಾಟ್ ಅನ್ನು ಖರೀದಿಸುವಂತೆ ನನ್ನ ಮಗಳ ಮೇಲೆ ಒತ್ತಡ ಹೇರಿದ್ದರೆಂದು ನಿಕಮ್ ಆರೋಪಿಸಿದ್ದಾರೆ.
ದೌರ್ಜನ್ಯದಿಂದ ನೊಂದ ಆಕೆ 2021ರಲ್ಲಿ ತನ್ನ ತಂದೆ-ತಾಯಿಯ ಮನೆಗೆ ಮರಳಿದ್ದರು. ನಂತರ ಆಕೆಯ ಪತಿ ಮರುಮದುವೆಯಾಗಲು ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದನಾದರೂ, ಆ ಪ್ರಕರಣವು ಸದ್ಯ ನ್ಯಾಯಾಲಯದಲ್ಲಿ ಬಾಕಿ ಇದೆ. ಆದರೆ, ಈಗ ಟೆಕ್ಕಿ ತ್ರಿಷ್ಣಾ ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನನ್ನ ಸಾವಿಗೆ ಪತಿ, ಅತ್ತೆ ವೈಶಾಲಿ, ಮಾವ ಸಂಜಯ್, ನಾದಿನಿ ಶೈಲಿ ಮತ್ತು ಅಜ್ಜಿ-ಅತ್ತೆ ಶಕುಂತಲಾ ಸಾಳುಂಕೆ ಕಾರಣ ಎಂದು ಮಹಿಳೆ ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ. ಆಕೆಯ ತಂದೆಯ ದೂರಿನ ಆಧಾರದ ಮೇಲೆ ಐವರು ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಇದನ್ನೂ ಓದಿ: FB ಲೈವ್ನಲ್ಲೇ ಪಂಜಾಬ್ ಡ್ರಗ್ಸ್ ವಿರೋಧಿ ಹೋರಾಟಗಾರನನ್ನು ಗುಂಡಿಕ್ಕಿ ಹತ್ಯೆಗೈದ ಮೆಡಿಕಲ್ ಮಾಲೀಕ

