ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ (CEC) ಹಾಗೂ ಚುನಾವಣಾ ಆಯುಕ್ತರ ನೇಮಕಾತಿಗೆ ಸಂಬಂಧಿಸಿದ 2023ರ ಕಾಯ್ದೆಯ ಸಾಂವಿಧಾನಿಕ ಮಾನ್ಯತೆ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರದಲ್ಲಿ ಸೆ.23ರಂದು ನೀಡಿದ್ದ ವಿಭಜಿತ ತೀರ್ಪನ್ನು ಹಿಂಪಡೆಯುವಂತೆ ಕೋರಿ ಸಲ್ಲಿಸಿರುವ ಅರ್ಜಿಯನ್ನು ಪರಿಶೀಲಿಸಲು ಸುಪ್ರೀಂಕೋರ್ಟ್ (Supreme Court) ಬುಧವಾರ ಒಪ್ಪಿಕೊಂಡಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜಾಯ್ಮಾಲ್ಯ ಬಾಗ್ಚಿ ಮತ್ತು ವಿ.ಮೊಹನಾ ಅವರ ಪೀಠದ ಮುಂದೆ ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣನ್ ಅರ್ಜಿಯನ್ನು ಪ್ರಸ್ತಾಪಿಸಿದರು. ಈ ವೇಳೆ, ಅರ್ಜಿಯನ್ನು ಪರಿಶೀಲಿಸಿ ಬಳಿಕ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ತಿಳಿಸಿದ್ದಾರೆ. ಇದನ್ನೂ ಓದಿ: SIR ವಿವಾದ| ವಿಜಯ್‌ಗೆ ಹೆದರುತ್ತಿದ್ದೀರಾ?- ರಾಹುಲ್ ಮೌನ, ದ್ವಂದ್ವ ನೀತಿಗೆ ಡಿಎಂಕೆ ಆಕ್ರೋಶ
ಸೆ.23ರಂದು ನ್ಯಾಯಮೂರ್ತಿಗಳಾದ ದೀಪಂಕರ್ ದತ್ತಾ ಮತ್ತು ಸತೀಶ್ ಚಂದ್ರ ಶರ್ಮಾ ಅವರ ದ್ವಿಸದಸ್ಯ ಪೀಠವು ಸಿಇಸಿ ಹಾಗೂ ಇಸಿಗಳ ನೇಮಕಾತಿ ಕಾಯ್ದೆಯನ್ನು ಪ್ರಶ್ನಿಸಿರುವ ಅರ್ಜಿಗಳನ್ನು ಸಂವಿಧಾನ ಪೀಠಕ್ಕೆ ವರ್ಗಾಯಿಸಬೇಕೇ ಎಂಬ ವಿಚಾರದಲ್ಲಿ ಭಿನ್ನಾಭಿಪ್ರಾಯ ವ್ಯಕ್ತಪಡಿಸಿತ್ತು. ನ್ಯಾಯಮೂರ್ತಿ ದತ್ತಾ ಉನ್ನತ ಪೀಠಕ್ಕೆ ಪ್ರಕರಣ ವರ್ಗಾಯಿಸುವ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದರೆ, ನ್ಯಾಯಮೂರ್ತಿ ಶರ್ಮಾ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠದ ವಿಚಾರಣೆಗೆ ಒಪ್ಪಿದ್ದರು.
ಇಬ್ಬರು ನ್ಯಾಯಮೂರ್ತಿಗಳ ನಡುವೆ ಒಮ್ಮತ ಮೂಡದ ಹಿನ್ನೆಲೆ, ಸೂಕ್ತ ಸಂಖ್ಯೆಯ ನ್ಯಾಯಮೂರ್ತಿಗಳ ಪೀಠ ರಚಿಸುವ ಕುರಿತು ನಿರ್ಧಾರ ಕೈಗೊಳ್ಳಲು ಪ್ರಕರಣವನ್ನು ಮುಖ್ಯ ನ್ಯಾಯಮೂರ್ತಿಗಳ ಆಡಳಿತಾತ್ಮಕ ವಿಭಾಗದ ಮುಂದೆ ಇರಿಸಲಾಗಿತ್ತು. ಇದನ್ನೂ ಓದಿ: ಯಾವುದೇ ರಾಜಕೀಯ ಪಕ್ಷ ನಮ್ಮ ಭೇಟಿಗೆ ಮನವಿ ಮಾಡಿಲ್ಲ: ಚುನಾವಣಾ ಆಯೋಗ ಸ್ಪಷ್ಟನೆ
ವಿಭಜಿತ ತೀರ್ಪನ್ನು ಹಿಂಪಡೆಯುವಂತೆ ಸಲ್ಲಿಸಿರುವ ಅರ್ಜಿಯಲ್ಲಿ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಅವರ ಪುತ್ರ ಚುನಾವಣಾ ಆಯೋಗದ ಪರ ಮಧ್ಯಪ್ರದೇಶ ಹೈಕೋರ್ಟ್‌ನಲ್ಲಿ ಸ್ಥಾಯಿ ವಕೀಲರಾಗಿರುವ ವಿಚಾರವನ್ನು ಉಲ್ಲೇಖಿಸಲಾಗಿದೆ. ಈ ಹಿನೆಲೆ ನ್ಯಾಯಮೂರ್ತಿ ಶರ್ಮಾ ವಿಚಾರಣೆಯಿಂದ ಹಿಂದೆ ಸರಿಯಬೇಕಿತ್ತೇ ಎಂಬ ಪ್ರಶ್ನೆಯನ್ನೂ ಅರ್ಜಿದಾರರು ಎತ್ತಿದ್ದಾರೆ.
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮತ್ತೊಂದು ಕ್ಯುರೇಟಿವ್ ಅರ್ಜಿಯೂ ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಕೆಯಾಗಿದೆ ಎಂದು ಹಿರಿಯ ವಕೀಲರು ಪೀಠಕ್ಕೆ ತಿಳಿಸಿದ್ದಾರೆ. ಆದರೆ ಕ್ಯುರೇಟಿವ್ ಅರ್ಜಿ ಮತ್ತು ಪ್ರಸ್ತುತ ಸಲ್ಲಿಸಿರುವ ತೀರ್ಪು ಹಿಂಪಡೆಯುವ ಅರ್ಜಿ ಎರಡೂ ಪ್ರತ್ಯೇಕವಾಗಿವೆ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಜ್ಞಾನೇಶ್ ಕುಮಾರ್ ರಾಜೀನಾಮೆಗೆ ವೋಟ್ ಬಚಾವ್, ದೇಶ ಬಚಾವ್ ಹೆಸರಿನಲ್ಲಿ ಹೋರಾಟ: ಬಿ.ಕೆ.ಹರಿಪ್ರಸಾದ್

