ಹೊಸ ಥರದ ಕೌಟುಂಬಿಕ ಕಥೆಗಳಿಂದ ನೋಡುಗರ ಮನ ಗೆಲ್ಲುತ್ತಿರುವ ಸನ್ ಉದಯ ವಾಹಿನಿ ವಿಶೇಷ ದೈವೀಕ ಕತೆಗಳನ್ನು ವೀಕ್ಷಕರಿಗೆ ಉಣಬಡಿಸಲು ಸಜ್ಜಾಗಿದೆ.
ಮುಂಬರುವ ದಸರಾ (Dasara Festival), ದೀಪಾವಳಿ (Deepavali) ಹಬ್ಬದ ಋತುವಿನಲ್ಲಿ ʻನವಶಕ್ತಿ ವೈಭವʼ (Navashakti Vaibhava) ವಿಶೇಷ ಸಂಚಿಕೆಗಳ ಮೂಲಕ, ಮಹಿಳಾ ಶಕ್ತಿಯನ್ನು ಸಂಭ್ರಮಿಸಲು ತಯಾರಿ ನಡೆಸಿದೆ. ಒಂಬತ್ತು ದೇವಿ ಕ್ಷೇತ್ರಗಳಲ್ಲಿ ನಡೆಯುವ ಒಂಭತ್ತು ದೈವೀಕ ಕತೆಗಳಲ್ಲಿ ಸನ್ ಉದಯದ ರಥಸಪ್ತಮಿ, ಮಹಾಲಕ್ಷ್ಮೀ ಮದುವೆ, ಗೆಳತಿ ಗಾಯತ್ರಿ, ಮೂಗುತಿ ಮಲ್ಲಿ, ಶಾಂತಿ ನಿವಾಸ, ಮಾಂಗಲ್ಯ, ಕೃಷ್ಣವಂಶಿ ಹಾಗೂ ಮೈನಾ ಧಾರಾವಾಹಿಗಳ ಒಂಭತ್ತು ನಾಯಕಿಯರು ದೇವಿ ಅಂಶವಾಗಿ ಕಾಣಿಸಿಕೊಳ್ಳಲಿದ್ದಾರೆ. ಇದನ್ನೂ ಓದಿ: ಅಜಯ್ ರಾವ್ ನಟನೆಯ ‘ಪಾರ್ಟ್ನರ್’ ಚಿತ್ರದ ಲವಲವಿಕೆ ಸಾಂಗ್ ರಿಲೀಸ್

ಮೈಸೂರು, ಕೊಲ್ಲೂರು, ಕಟೀಲು, ಶಿರಸಿ, ಸವದತ್ತಿ ಮುಂತಾದ ಒಂಭತ್ತು ದೇವಿ ಕ್ಷೇತ್ರಗಳಲ್ಲೇ ವಿಶೇಷ ಸಂಚಿಕೆಗಳು ಚಿತ್ರೀಕರಣಗೊಳ್ಳುತ್ತಿರುವುದು ಇನ್ನೊಂದು ವಿಶೇಷ. ಇದು ನಂಬಿಕೆಗಳಿಗಿಂತ ಮಿಗಿಲಾಗಿ ಮಹಿಳೆಯರ ಆತ್ಮವಿಶ್ವಾಸ ಮತ್ತು ಅಂತಃಶಕ್ತಿಗಳನ್ನು ಬಡಿದೆಬ್ಬಿಸುವ ಕಥಾಗುಚ್ಛವಾಗಿದೆ. ದೈವೀಕ ಶಕ್ತಿ ಸ್ತ್ರೀಯಲ್ಲಿ ಅಡಕವಾಗಿರುತ್ತದೆ ಹಾಗೂ ಮಹಿಳಾ ಶಕ್ತಿಯನ್ನು ದಮನಿಸಲು ಯಾರಿಂದಲೂ ಸಾಧ್ಯವಿಲ್ಲ ಎಂಬ ಸಂದೇಶ ರವಾನಿಸುವಂಥ ಕಥೆಗಳು ರೂಪುಗೊಳ್ಳುತ್ತಿವೆ ಎನ್ನುತ್ತಾರೆ ಸನ್ ಉದಯ ಮುಖ್ಯಸ್ಥರು.
ʻನವಶಕ್ತಿ ವೈಭವʼ ಸರಣಿಯಲ್ಲಿ ಅಕ್ಟೋಬರ್ 11 ಭಾನುವಾರ ರಾತ್ರಿ 9 ಕ್ಕೆ ಮೊದಲ ಸಂಚಿಕೆ ʻರಥ ಸಪ್ತಮಿʼ ವಿಶೇಷ ಪ್ರಸಾರವಾಗಲಿದೆ. ಇದು ಮೈಸೂರಿನಲ್ಲಿ ಚಿತ್ರೀಕರಣಗೊಂಡಿದೆ. ಮೈಕ್ರೋಫೈನಾನ್ಸ್ ಸಾಲದ ಸುಳಿಗೆ ಸಿಲುಕಿದ ಶಿಕ್ಷಕಿ ಹಾಗೂ ಆಕೆಯ ಪುತ್ರಿಯನ್ನು ಬಚಾವು ಮಾಡಲು, ಸಪ್ತಮಿ ತನ್ನ ಬುದ್ಧಿ ಶಕ್ತಿ ಹಾಗೂ ಆತ್ಮಬಲವನ್ನೇ ಅಸ್ತ್ರಗಳನ್ನಾಗಿ ಬಳಸಿ ದುಷ್ಟ ಮರ್ದನ ಮಾಡಿ ಹೇಗೆ ನೊಂದವರ ಪಾಲಿಗೆ ದೇವಿಯಾಗಿ ಕಂಗೊಳಿಸುತ್ತಾಳೆ ಎಂಬುದು ಕಥಾಹಂದರ. ಇದು ಪವಾಡಗಳಿಗಿಂತ ಮಿಗಿಲಾಗಿ ವಾಸ್ತವದ ನೆಲೆಗಟ್ಟಿನ ಮೇಲೆ ಹೆಣ್ಣನ್ನು ದೈವೀಕತೆಯೊಂದಿಗೆ ಸಮೀಕರಿಸುತ್ತದೆ.

ರಥ ಸಪ್ತಮಿ ನಾಯಕಿ ಮೌಲ್ಯ ಗೌಡ ನಾಯಕ ಜೀವನ್ ಜೊತೆಗೆ ವಿಶೇಷ ಪಾತ್ರಗಳಲ್ಲಿ ಸ್ವಪ್ನಾ ರಾಜ್, ಸುದರ್ಶನ್, ಇಶಿಕಾ ಮುಂತಾದ ಖ್ಯಾತ ತಾರಾಗಣವಿದೆ. ʻನವಶಕ್ತಿ ವೈಭವʼ ಒಂದು ಗಂಟೆಯ ವಿಶೇಷ ಸಂಚಿಕೆಗಳು ಅಕ್ಟೋಬರ್ 11 ರಿಂದ ಭಾನುವಾರ ರಾತ್ರಿ 9 ಗಂಟೆಗೆ ಪ್ರಸಾರವಾಗಲಿವೆ. ಇದನ್ನೂ ಓದಿ: ಎರಡನೇ ಮಗುವಿನ ನಿರೀಕ್ಷೆಯಲ್ಲಿ ಕಿಯಾರಾ-ಸಿದ್ಧಾರ್ಥ್ ಜೋಡಿ

