ಕೆಲ ಸಿನಿಮಾಗಳು ಕಥೆ, ಸಾಂಗ್ಸ್ ಮತ್ತು ಮೇಕಿಂಗ್‌ನಿಂದಲೇ ಸಿನಿರಸಿಕರ (Ajay Rao) ಗಮನ ಸೆಳೆಯುತ್ತವೆ. ಇದೀಗ ‘ಮಳೆ’, ‘ಧೈರ್ಯಂ’, ‘ದಿಲ್ ಪಸಂದ್’ ಖ್ಯಾತಿಯ ನಿರ್ದೇಶಕ ಶಿವತೇಜಸ್ ಸಾರಥ್ಯದ ‘ಪಾರ್ಟ್ನರ್’ ಚಿತ್ರ ಕೂಡ ಇದೇ ಕಾರಣಕ್ಕೆ ಸದ್ದು ಮಾಡುತ್ತಿದೆ. ಈಗಾಗಲೇ ಚಿತ್ರದ ‘ಅಮೋರಾ’ ಸಾಂಗ್ ಗಮನ ಸೆಳೆದಿದ್ದು, ಇದೀಗ ಮತ್ತೊಂದು ಹಾಡು ‘ಲವಲವಿಕೆ’ ರಿಲೀಸ್ ಆಗಿದೆ.
ಅಜಯ್ ರಾವ್ ಮತ್ತು ಬೃಂದಾ ಆಚಾರ್ಯ ನಾಯಕ-ನಾಯಕಿಯಾಗಿ ನಟಿಸಿರುವ ‘ಪಾರ್ಟ್ನರ್’ ಲವ್ ಮತ್ತು ಫ್ಯಾಮಿಲಿ ಎಂಟರ್‌ಟೈನರ್ ಸಿನಿಮಾ. ಇಂದಿನ ಯುವಜನರ ಲೈಫ್‌ಸ್ಟೈಲ್, ಲವ್, ಬ್ರೇಕಪ್ ಹಾಗೂ ಲಿವಿಂಗ್ ರಿಲೇಶನ್‌ಶಿಪ್ ಸುತ್ತ ಕಥೆ ಸಾಗಲಿದೆ. ಈ ಎಲ್ಲಾ ವಿಚಾರಗಳ ಜೊತೆಗೆ ಒಂದು ಸುಂದರ ಮೆಸೇಜ್ ಕೂಡ ಸಿನಿಮಾದಲ್ಲಿದೆ ಎನ್ನುವುದು ಚಿತ್ರತಂಡದ ಮಾತು.
‘ಲವಲವಿಕೆ’ ಹಾಡಿಗೆ ಕವಿರಾಜ್ ಸಾಹಿತ್ಯ ಬರೆದಿದ್ದಾರೆ. ಕಾರ್ತೀಕ್ ಮತ್ತು ರಮ್ಯ ಅಭ್ಯಂಕರ್ ಧ್ವನಿ ನೀಡಿದ್ದಾರೆ. ನಕುಲ್ ಅಭ್ಯಂಕರ್ ಸಂಗೀತ ಸಂಯೋಜಿಸಿದ್ದು, ಮುರಳಿ ಮಾಸ್ಟರ್ ಹಾಡಿಗೆ ಕೊರಿಯೋಗ್ರಫಿ ಮಾಡಿದ್ದಾರೆ. ಸುಜ್ಞಾನ್ ಅವರ ಕ್ಯಾಮೆರಾದಲ್ಲಿ ಹಾಡು ಕಲರ್‌ಫುಲ್ ಆಗಿ ಮೂಡಿಬಂದಿದೆ.
ಚಿತ್ರದ ನಿರ್ಮಾಪಕರ ಆಧ್ಯಾತ್ಮಿಕ ಗುರುಗಳಾದ ರಂಗನಾಥ್ ಹಾಗೂ ಮಂಜುನಾಥ್ ಅವರು ‘ಲವಲವಿಕೆ’ ಹಾಡನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು.
ಹಾಡು ಬಿಡುಗಡೆ ವೇಳೆ ನಿರ್ದೇಶಕ ಶಿವತೇಜಸ್ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ಸಿನಿಮಾ ತಾವು ಅಂದುಕೊಂಡಿದ್ದಕ್ಕಿಂತಲೂ ಚೆನ್ನಾಗಿ ಬಂದಿದೆ. ‘ಲವಲವಿಕೆ’ ಚಿತ್ರದ ಎರಡನೇ ಹಾಡಾಗಿದ್ದು, ಇದನ್ನು ಕಲರ್‌ಫುಲ್ ಆಗಿ ಮಾಡಲಾಗಿದೆ. ಪ್ರತಿ ಹಾಡನ್ನೂ ಒಂದೊಂದು ಕಲರ್ ಪ್ಯಾಟರ್ನ್‌ನಲ್ಲಿ ತೋರಿಸುವ ಪ್ರಯತ್ನ ಮಾಡಿದ್ದೇವೆ ಎಂದು ಹೇಳಿದ್ದಾರೆ.
ಪಾಂಡಿಚೇರಿ ಹಾಗೂ ಬೆಂಗಳೂರಿನಲ್ಲಿ ಸಿನಿಮಾದ ಶೂಟಿಂಗ್ ನಡೆದಿದ್ದು, ರಂಗಾಯಣ ರಘು ಮತ್ತು ಚಿತ್ಕಲಾ ಸೇರಿದಂತೆ ಹಲವು ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ. ‘ಪ್ರೇಮದ ಊರಲಿ’ ಸಿನಿಮಾ ಕನ್ನಡ ಚಿತ್ರರಂಗಕ್ಕೆ ಹೊಸ ಚೈತನ್ಯ ನೀಡಿದಂತೆ, ‘ಪಾರ್ಟ್ನರ್’ ಕೂಡ ಫ್ಯಾಮಿಲಿ ಸಬ್ಜೆಕ್ಟ್ ಮೂಲಕ ಜನರಿಗೆ ಇಷ್ಟವಾಗಲಿದೆ ಎಂಬ ನಂಬಿಕೆ ಇದೆ ಎಂದು ಶಿವತೇಜಸ್ ಹೇಳಿದ್ದಾರೆ.

ನಿರ್ಮಾಪಕ ಹರೀಶ್ ದೇವಿತಂದ್ರೆ ಮಾತನಾಡಿ, ಸಿನಿಮಾ ವಿತರಣೆ ಹಾಗೂ ಚಾನೆಲ್‌ನಲ್ಲಿ ಕೆಲಸ ಮಾಡಿದ ಅನುಭವ ತನಗಿದೆ. ಇಡೀ ಕುಟುಂಬ ಕೂತು ಯಾವುದೇ ಮುಜುಗರವಿಲ್ಲದೆ ನೋಡಬಹುದಾದ ಸಿನಿಮಾ ಇದಾಗಿದೆ. ಬಿಸಿನೆಸ್ ದೃಷ್ಟಿಯಿಂದಲೂ ಸಿನಿಮಾವನ್ನು ಮಾಡಿದ್ದು, ಚಿತ್ರವನ್ನು ಜನರಿಗೆ ತಲುಪಿಸಲು ಈಗಾಗಲೇ ಪ್ಲ್ಯಾನ್ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.ಇದನ್ನೂ ಓದಿ: ಪ್ರೇಮಾನಂದ ಮಹಾರಾಜ್ ಆಶ್ರಮಕ್ಕೆ ಭೇಟಿ ನೀಡಿದ್ದಕ್ಕೆ ಕೊಹ್ಲಿಗೆ ಸಿಕ್ತಾ 5 ಕೋಟಿ?
ಇನ್ನು ನಟ ಅಜಯ್ ರಾವ್ ಅವರಿಗೆ ನಿರ್ದೇಶಕ ಶಿವತೇಜಸ್ ಹೇಳಿದ ಕಥೆ ತುಂಬಾ ಇಷ್ಟವಾಗಿದೆಯಂತೆ. ಈ ಸಿನಿಮಾ ತಮ್ಮ ಮನಸ್ಸಿಗೆ ತುಂಬಾ ಹತ್ತಿರವಾಗಿದೆ ಎಂದು ಅವರು ಹೇಳಿದ್ದಾರೆ. ಸಿನಿಮಾದ ಹಾಡುಗಳಂತೆಯೇ ಸೀನ್ಸ್ ಕೂಡ ಕಲರ್‌ಫುಲ್ ಆಗಿವೆ. ಹ್ಯೂಮನ್ ವ್ಯಾಲ್ಯೂಸ್ ಮತ್ತು ಎಮೋಷನ್ಸ್‌ಗಳನ್ನು ಸಿನಿಮಾದಲ್ಲಿ ಚೆನ್ನಾಗಿ ತೋರಿಸಲಾಗಿದೆ ಎಂದಿದ್ದಾರೆ.
ಶಿವತೇಜಸ್ ಜೊತೆ ನನಗೆ ಸುಮಾರು 25 ವರ್ಷಗಳ ಸ್ನೇಹವಿದೆ. ಚಿತ್ರದ ಟೈಟಲ್‌ಗೆ ತಕ್ಕಂತೆ ಒಳ್ಳೆಯ ‘ಪಾರ್ಟ್ನರ್’ ಆಗಿ ನಿರ್ಮಾಪಕರು ಸಿಕ್ಕಿದ್ದಾರೆ. ಈ ಸಿನಿಮಾದ ಮೇಲೆ ನನಗೆ ನೂರಕ್ಕೆ ನೂರರಷ್ಟು ನಂಬಿಕೆ ಇದೆ ಎಂದು ಅಜಯ್ ರಾವ್ ಹೇಳಿದ್ದಾರೆ.
ನಾಯಕಿ ಬೃಂದಾ ಆಚಾರ್ಯ ಕೂಡ ‘ಪಾರ್ಟ್ನರ್’ ತಂಡದ ಬಾಂಡಿಂಗ್ ಬಗ್ಗೆ ಮಾತನಾಡಿದ್ದಾರೆ. ಸಿನಿಮಾ ಮಾಡುವಾಗ ಎಲ್ಲರ ನಡುವೆ ಒಳ್ಳೆಯ ಬಾಂಡಿಂಗ್ ಇತ್ತು. ಅದು ತುಂಬಾ ಮುಖ್ಯವಾಗಿತ್ತು ಎಂದಿದ್ದಾರೆ. ಇದನ್ನೂ ಓದಿ: ಎರಡನೇ ಮಗುವಿನ ನಿರೀಕ್ಷೆಯಲ್ಲಿ ಕಿಯಾರಾ-ಸಿದ್ಧಾರ್ಥ್ ಜೋಡಿ
ಅಜಯ್ ರಾವ್ ಆರಂಭದಲ್ಲಿ ಯಾರೊಂದಿಗೂ ಹೆಚ್ಚು ಮಾತನಾಡುತ್ತಿರಲಿಲ್ಲ. ಸಿಡುಕುಮೂತಿ ಸಿದ್ದಪ್ಪನ ಥರ ಇದ್ದರು. ಆದರೆ ದಿನಗಳು ಕಳೆದಂತೆ ಸ್ವೀಟ್ ಸಿದ್ದಪ್ಪ ಆಗಿಬಿಟ್ಟರು ಎಂದು ಬೃಂದಾ ಆಚಾರ್ಯ ನಗುತ್ತಲೇ ಅಜಯ್ ರಾವ್ ಅವರನ್ನು ಹೊಗಳಿದ್ದಾರೆ. ಹಾಡುಗಳ ಸಮಯದಲ್ಲಿ ಅಜಯ್ ಅವರು ಸಾಕಷ್ಟು ಹೇಳಿಕೊಟ್ಟಿದ್ದಾರೆ ಎಂದು ಅವರು ಹೇಳಿದ್ದಾರೆ.
ಹೆಚ್.ಪಿ.ಆರ್. ಎಂಟರ್‌ಪ್ರೈಸಸ್ ಬ್ಯಾನರ್ ಅಡಿ ಹರೀಶ್ ದೇವಿತಂದ್ರೆ ಅವರು ‘ಪಾರ್ಟ್ನರ್’ ಚಿತ್ರವನ್ನು ನಿರ್ಮಿಸಿದ್ದಾರೆ. ಸುಜ್ಞಾನ್ ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಸಂಕಲನ ಚಿತ್ರಕ್ಕಿದೆ. ಇದೀಗ ‘ಲವಲವಿಕೆ’ ಹಾಡು ರಿಲೀಸ್ ಆಗಿದ್ದು, ಸಿನಿಮಾ ಮೇಲಿನ ನಿರೀಕ್ಷೆಯೂ ಹೆಚ್ಚಾಗಿದೆ.

