-10 ಬಾರಿ ಚಾಂಪಿಯನ್ ಆಗಿದ್ದ ದ.ಕೋರಿಯಾ ಮಣಿಸಿದ ಭಾರತ
ನಗೋಯಾ: ಏಷ್ಯನ್ ಕ್ರೀಡಾಕೂಟದಲ್ಲಿ (Asian Games) ಮಹಿಳೆಯರ ರಿಕರ್ವ್ ಆರ್ಚರಿಯಲ್ಲಿ (Recurve Archery) ಭಾರತ ತಂಡವು ದೇಶದ ಇತಿಹಾಸದಲ್ಲೇ ಮೊದಲ ಚಿನ್ನದ ಪದಕವನ್ನು ಗೆದ್ದು ಇತಿಹಾಸ ನಿರ್ಮಿಸಿದೆ.
ಐಚಿ ನಗೋಯಾದಲ್ಲಿ ನಡೆಯುತ್ತಿರುವ 20ನೇ ಏಷ್ಯನ್ ಗೇಮ್ಸ್‌ನ ಮಹಿಳೆಯರ ರಿಕರ್ವ್ ಆರ್ಚರಿ ವಿಭಾಗದಲ್ಲಿ ಭಾರತ ತಂಡವು 10 ಬಾರಿ ಚಾಂಪಿಯನ್ ಆಗಿದ್ದ ದಕ್ಷಿಣ ಕೋರಿಯಾವನ್ನು (South Korea) 5-3 ಅಂತರದಿಂದ ಸೋಲಿಸಿ, ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿದೆ. ಈ ಮೂಲಕ ಭಾರತ 11ನೇ ಚಿನ್ನದ ಪದಕಕ್ಕೆ ಮುತ್ತಿಕ್ಕಿದೆ. ಇದನ್ನೂ ಓದಿ: Asian Games: ಭಾರತಕ್ಕೆ ಕುಸ್ತಿಯಲ್ಲಿ ಬೆಳ್ಳಿ ಗೆದ್ದುಕೊಟ್ಟ ನಿತೇಶ್; ಸ್ಕ್ವ್ಯಾಷ್ ತಂಡಕ್ಕೆ ಕಂಚು
ಅಂಕಿತಾ ಭಕತ್, ಕೀರ್ತಿ ಶರ್ಮಾ ಮತ್ತು ಕುಮ್ಕುಮ್ ಅನಿಲ್ ಮೊಹದ್ ಅವರನ್ನು ಒಳಗೊಂಡ ಭಾರತೀಯ ತಂಡವು ಮಹಿಳಾ ರಿಕರ್ವ್ ವಿಭಾಗದಲ್ಲಿ ದೇಶಕ್ಕೆ ಮೊಟ್ಟಮೊದಲ ಬಂಗಾರದ ಪದಕವನ್ನು ತಂದುಕೊಟ್ಟಿದೆ. ಮಹಿಳೆಯರ ರಿಕರ್ವ್ ಆರ್ಚರಿ ವಿಭಾಗದಲ್ಲಿ ಭಾರತ ಇದೇ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿ, ಚಿನ್ನ ಗೆದ್ದಿರುವುದು ವಿಶೇಷ.
ಈ ಮೂಲಕ ಭಾರತದ ಒಟ್ಟು ಪದಕಗಳ ಸಂಖ್ಯೆ 67ಕ್ಕೆ ಏರಿಕೆಯಾಗಿದೆ. ಇದರಲ್ಲಿ 11 ಚಿನ್ನ, 23 ಬೆಳ್ಳಿ ಹಾಗೂ 33 ಕಂಚಿನ ಪದಕಗಳು ಸೇರಿವೆ.
ಇನ್ನೂ ಬಾಕ್ಸಿಂಗ್‌ನಲ್ಲಿ ಲವ್ಲಿನಾ, ಪ್ರವೀಣ್ ಮತ್ತು ಅಂಕುಶ್ ಅವರು ಚಿನ್ನಕ್ಕಾಗಿ ಸೆಣಸಾಡಲಿದ್ದಾರೆ. ಅಲ್ಲದೆ, ಮಹಿಳಾ ಹಾಗೂ ಪುರುಷರ ಹಾಕಿ ಫೈನಲ್‌ನಲ್ಲಿ ಚಿನ್ನಕ್ಕಾಗಿ ಬೇಟೆಯಾಡಲಿವೆ. ಕುಸ್ತಿ ಹಾಗೂ ಕ್ರಿಕೆಟ್‌ನಲ್ಲಿಯೂ ಚಿನ್ನದ ಪದಕ ಬರುವ ನಿರೀಕ್ಷೆಯಿದೆ. ಇದನ್ನೂ ಓದಿ: Asian Games Hockey: ಪಾಕ್ ವಿರುದ್ಧ ಗೆದ್ದು ಫೈನಲ್‌ಗೆ ಭಾರತ ಎಂಟ್ರಿ

