ಮಾಸ್ಕೋ: ಪೂರ್ವ ಭಾಗದಲ್ಲಿ ತರಬೇತಿ ಕಾರ್ಯಾಚರಣೆಯ ವೇಳೆ ರಷ್ಯಾದ (Russia) ಪರಮಾಣು ಸಾಮರ್ಥ್ಯದ ‘Tu-95’ ಕಾರ್ಯತಂತ್ರದ ಬಾಂಬರ್ ವಿಮಾನವೊಂದು (Russian Tu-95 Bomber) ಪತನಗೊಂಡಿದ್ದು, ಆರು ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
ಆಮುರ್ ಪ್ರದೇಶದ ಜನವಸತಿಯಿಲ್ಲದ ಭಾಗವೊಂದರಲ್ಲಿ ಆ ಬಾಂಬರ್ ವಿಮಾನವು ಪತನಗೊಂಡಿದೆ ಎಂದು ಸಚಿವಾಲಯವು ಹೇಳಿಕೆಯಲ್ಲಿ ತಿಳಿಸಿದೆ. ಅಪಘಾತದಲ್ಲಿ ಸಿಬ್ಬಂದಿಯೊಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದು, ಗಾಯಗೊಂಡಿರುವ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಮ್ಯಾನ್ಮಾರ್ನಲ್ಲಿ ಮಿಲಿಟರಿ ವಾಯುದಾಳಿಗೆ 49 ಮಂದಿ ಬಲಿ, 58 ಜನರಿಗೆ ಗಾಯ
ಅಪಘಾತ ಸಂಭವಿಸಿದಾಗ ವಿಮಾನದಲ್ಲಿ ಯಾವುದೇ ಶಸ್ತ್ರಾಸ್ತ್ರಗಳಿರಲಿಲ್ಲ. ಅಪಘಾತಕ್ಕೆ ಕಾರಣವೇನೆಂದು ಪತ್ತೆಹಚ್ಚಲು ತನಿಖಾಧಿಕಾರಿಗಳನ್ನು ಆ ಪ್ರದೇಶಕ್ಕೆ ಕಳುಹಿಸಲಾಗಿದೆ.
ಚೀನಾ ಗಡಿಯ ಸಮೀಪವಿರುವ ಝೇಯಾ ನದಿಯ ದಡದಲ್ಲಿರುವ ಕ್ರಾಸ್ನೊಯಾರೊವೊ ಗ್ರಾಮದ ಬಳಿ ವಿಮಾನ ಪತನಗೊಂಡಿದೆ ಎಂದು ಪ್ರಾದೇಶಿಕ ಆಡಳಿತ ತಿಳಿಸಿದೆ. ವಿಮಾನವನ್ನು ವಸತಿ ಕಟ್ಟಡಗಳಿಂದ ದೂರಕ್ಕೆ ಕೊಂಡೊಯ್ಯಲು ಪೈಲಟ್ಗಳು ತಮ್ಮಿಂದಾದ ಎಲ್ಲ ಪ್ರಯತ್ನಗಳನ್ನೂ ಮಾಡಿದ್ದರು ಎಂದು ಹೇಳಿದೆ. ಇದನ್ನೂ ಓದಿ: ಕಕ್ಷೆ ತಲುಪಿ ಇತಿಹಾಸ ಬರೆದ ಬೆನ್ನಲ್ಲೇ ದುರಂತ: ಪೆಸಿಫಿಕ್ ಸಾಗರದಲ್ಲಿ ಸ್ಫೋಟಗೊಂಡ ಸ್ಟಾರ್ಶಿಪ್
Tu-95 ಪರಮಾಣು ಶಸ್ತ್ರಾಸ್ತ್ರಗಳನ್ನು ಹೊತ್ತೊಯ್ಯುವ ಸಾಮರ್ಥ್ಯವಿರುವ ನಾಲ್ಕು-ಎಂಜಿನ್ ಟರ್ಬೊಪ್ರೊಪ್ ತಂತ್ರಗಾರಿಕೆಯ ಬಾಂಬರ್ (strategic bomber) ಆಗಿದ್ದು, ಶೀತಲ ಸಮರದ ಕಾಲದಿಂದಲೂ ಸೇವೆಯಲ್ಲಿದೆ. ನಾಲ್ಕೂವರೆ ವರ್ಷಗಳಿಗೂ ಹೆಚ್ಚು ಕಾಲ ನಡೆದ ಸಂಘರ್ಷದ ಅವಧಿಯಲ್ಲಿ, ಉಕ್ರೇನಿಯನ್ ಗುರಿಗಳ ಮೇಲೆ ಸಾಂಪ್ರದಾಯಿಕ ಶಸ್ತ್ರಾಸ್ತ್ರಗಳನ್ನು ಹೊಂದಿರುವ ಕ್ರೂಸ್ ಕ್ಷಿಪಣಿಗಳನ್ನು ಉಡಾಯಿಸಲು ರಷ್ಯಾ ಈ ವಿಮಾನವನ್ನು ವ್ಯಾಪಕವಾಗಿ ಬಳಸಿದೆ.

