ಇದೇ ಶುಕ್ರವಾರ ಗೌರಿ ಶಂಕರ್ (Gowrishankar) ನಾಯಕನಾಗಿ ನಟಿಸಿರುವ ಕಾಮನ್ ಮ್ಯಾನ್ (Common Man Movie) ಸಿನಿಮಾ ಬಿಡುಗಡೆ ಆಗಿದೆ. ರಾಜ್ಯಾದ್ಯಂತ ಹಲವಾರು ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದ್ದು, ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕೆರೆಬೇಟೆ ಸಿನಿಮಾದ ಮೂಲಕ ವಿಭಿನ್ನ ಪಾತ್ರ ಮಾಡಿದ್ದ ಗೌರಿ ಶಂಕರ್, ಈ ಸಿನಿಮಾದಲ್ಲಿ ಕಾಮನ್ ಮ್ಯಾನ್ ಆಗಿದ್ದವರು ಸಿಎಂ ಆಗಿದ್ದಾರೆ. ಜನಪರ ಕೆಲಸಗಳನ್ನು ಹೇಳುವ ಕೆಲಸ ಮಾಡಿದ್ದಾರೆ.
ಕನ್ನಡದ ಹಿರಿಯ ನಿರ್ದೇಶಕ ಓಂ ಸಾಯಿ ಪ್ರಕಾಶ್ ಅವರ ನಿರ್ದೇಶನದ 106ನೇ ಸಿನಿಮಾ ಇದಾಗಿದ್ದು, ಅವರ ಎಂದಿನ ಚಿತ್ರ ಶೈಲಿಯಲ್ಲೇ ಸಿನಿಮಾ ಮೂಡಿ ಬಂದಿದೆ. ಮತ್ತೆ ಅವರು ಚಿತ್ರಮಂದಿರಕ್ಕೆ ಫ್ಯಾಮಿಲಿ ಆಡಿಯನ್ಸ್ ಕರೆಯಿಸುವ ಪ್ರಯತ್ನ ಮಾಡಿದ್ದಾರೆ. ಎಲ್ಲಿಯೂ ಗಿಮಿಕ್ ಮಾಡದೇ ಸೀದಾ ಕಥೆಯನ್ನು ಹೇಳುವ ಪ್ರಯತ್ನ ಮಾಡಿದ್ದಾರೆ. ಹಾಗಾಗಿ, ಕುಟುಂಬ ಸಮೇತ ನೋಡುವಂಥ ಚಿತ್ರ ಇದಾಗಿದೆ. ಇದನ್ನೂ ಓದಿ: ಕೈಲಾಶ್ ಖೇರ್ ಹಾಡಿರುವ ಕಾಮನ್ ಮ್ಯಾನ್ ಸಿನಿಮಾ ‘ಖಾಕಿ ಕಾವಿ ಖಾದಿ’ ಸಾಂಗ್ ರಿಲೀಸ್

ಟ್ರೈಲರ್ ಮೂಲಕ ಸಾಕಷ್ಟು ಕುತೂಹಲ ಮೂಡಿಸಿತ್ತು ಕಾಮನ್ ಮ್ಯಾನ್ ಸಿನಿಮಾ. ಹಾಡುಗಳನ್ನು ಕೂಡ ಪ್ರೇಕ್ಷಕರು ಮೆಚ್ಚಿಕೊಂಡಿದ್ದರು. ಗೌರಿ ಶಂಕರ್ ಮತ್ತು ಓಂ ಸಾಯಿ ಪ್ರಕಾಶ್ ಕಾಂಬಿನೇಷನ್ ಬಗ್ಗೆ ನಿರೀಕ್ಷೆ ಇದ್ದೇ ಇತ್ತು. ಆ ನಿರೀಕ್ಷೆಯನ್ನು ಚಿತ್ರತಂಡ ತಲುಪಿದೆ. ಹಾಗಾಗಿ ಚಿತ್ರಮಂದಿರಕ್ಕೆ ಜನರು ಬರುವಂತಾಗಿದೆ.
ಸಾಮಾನ್ಯನೊಬ್ಬ ರಾಜ್ಯದ ಸಿಎಂ ಆದರೆ ಹೇಗೆ ಆಡಳಿತ ನಡೆಸಬಹುದು, ಏನೆಲ್ಲ ಸುಧಾರಣೆ ಮಾಡಬಹುದು, ಎದುರಿಸುವ ಸವಾಲುಗಳೇನು ಎನ್ನುವುದನ್ನು ಸಿನಿಮಾದುದ್ದಕ್ಕೂ ನಿರ್ದೇಶಕರು ಹೇಳುತ್ತಾ ಹೋಗಿದ್ದಾರೆ. ಎನ್.ನರಸಿಂಹ ಮೂರ್ತಿ ಅವರೇ ಕಥೆ ಬರೆದು ಸುರಭಿ ಫಿಲಂಸ್ ಅಡಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಗೌರಿಶಂಕರ್ ನಾಯಕನಾಗಿ ನಟಿಸಿದ್ದು, ಸೋನಾ ಲದ್ವಾ ನಾಯಕಿ ಪಾತ್ರ ನಿರ್ವಹಿಸಿದ್ದಾರೆ. ಇದನ್ನೂ ಓದಿ: ಕುತೂಹಲ ಮೂಡಿಸುವ ಗೌರಿ ಶಂಕರ್ ನಟನೆಯ ಕಾಮನ್ ಮ್ಯಾನ್ ಟ್ರೈಲರ್
ಹಿರಿಯ ನಟರಾದ ರಮೇಶ್ ಭಟ್, ಗಣೇಶರಾವ್ ಕೇಸರಕರ್, ಎಸ್ಕಾರ್ಟ್ ಶ್ರೀನಿವಾಸ್, ಪ್ರಕಾಶ್ ತುಮ್ಮಿನಾಡು ಅನುಭವಿ ಕಲಾವಿದರ ತಂಡವೇ ಸಿನಿಮಾದಲ್ಲಿದೆ. ವಿನಯ ಚಂದ್ರ ಅವರ ಸಂಗೀತ, ಜೆ.ಜಿ. ಕೃಷ್ಣ, ದೀಪಕ್ ಕುಮಾರ್ ಅವರ ಛಾಯಾಗ್ರಹಣ, ಥ್ರಿಲ್ಲರ್ ಮಂಜು ಅವರ ಸಾಹಸ ಈ ಚಿತ್ರಕ್ಕಿದೆ. ಚೈತ್ರಾ ಆಚಾರ್, ಕೈಲಾಶ್ ಖೇರ್, ಬಾಬಾ ಸೈಗಲ್ ರಂಥ ಗಾಯಕರು ಹಾಡುಗಳಿಗೆ ದನಿಯಾಗಿದ್ದಾರೆ.

