– ಕನಕಪುರಕ್ಕೆ ಏರ್ಪೋರ್ಟ್, ಟನಲ್ ರಸ್ತೆಗೆ ಇರುವ ಉತ್ಸಾಹ ರೈತರ ಕಡೆಗೂ ಇರಲಿ
– ಪ್ರದೀಪ್ ಈಶ್ವರ್ ವಿರುದ್ಧ ಕ್ರಮಕ್ಕೆ ವಿಜಯೇಂದ್ರ ಆಗ್ರಹ
ಬೆಂಗಳೂರು: ರಾಜ್ಯದ ಆರ್ಥಿಕ ಪರಿಸ್ಥಿತಿ ಅತ್ಯಂತ ಗಂಭೀರವಾಗಿರುವ ಬಗ್ಗೆ ಆರ್ಥಿಕ ಇಲಾಖೆಯೇ ಪತ್ರದ ಮೂಲಕ ಎಚ್ಚರಿಕೆ ನೀಡಿದೆ. ಇದು ಕಾಟಾಚಾರಕ್ಕೆ ಬರೆದಿರುವ ಪತ್ರವಲ್ಲ. ಸರ್ಕಾರದ ಹಣಕಾಸಿನ ವಾಸ್ತವ ಸ್ಥಿತಿಯನ್ನ ಪ್ರತಿಬಿಂಬಿಸುವ ಅತ್ಯಂತ ಗಂಭೀರ ದಾಖಲೆ. ಆದರೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಅವರು ಮಾತ್ರ ರಾಜ್ಯದ ಜನರ ಕಿವಿಗೆ ಹೂವು ಇಡುವ ರೀತಿಯಲ್ಲಿ ಮಾತನಾಡುತ್ತಿದ್ದಾರೆ. ಮುಖ್ಯಮಂತ್ರಿಗಳ ಮಾತುಗಳನ್ನು ಕೇಳಿದರೆ ರಾಜ್ಯದಲ್ಲಿ ಯಾವುದೇ ಆರ್ಥಿಕ ಸಮಸ್ಯೆಯೇ ಇಲ್ಲ ಎನ್ನುವಂತೆ ಭಾಸವಾಗುತ್ತದೆ. ಇದು ಜನರನ್ನ ದಾರಿ ತಪ್ಪಿಸುವ ಪ್ರಯತ್ನ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (BY Vijayendra) ಅವರು ಕಿಡಿಕಾರಿದ್ದಾರೆ
ಇಂದು ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಇಂತಹ ದರಿದ್ರ ಆರ್ಥಿಕ ಪರಿಸ್ಥಿತಿಯನ್ನು ನಮ್ಮ ರಾಜ್ಯ ಹಿಂದೆಂದೂ ಕಂಡಿರಲಿಲ್ಲ. ಸರ್ಕಾರಿ ನೌಕರರಿಗೆ ಸಂಬಳ ನೀಡಲು ಸರ್ಕಾರ ಪರದಾಡುತ್ತಿದೆ, ಬಡವರು ಮತ್ತು ವಿಕಲಚೇತನರಿಗೆ ನೀಡಬೇಕಾದ ಪಿಂಚಣಿಯನ್ನೂ ಸಮರ್ಪಕವಾಗಿ ನೀಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ವಿವಿಧ ಇಲಾಖೆಗಳ ಬಾಕಿ ಹಣ, ಯೋಜನೆಗಳ ಬಾಕಿ ಪಾವತಿ ಹಾಗೂ ಸರ್ಕಾರದ ಬದ್ಧತೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಇದು ಆಡಳಿತದ ವೈಫಲ್ಯ ಮಾತ್ರವಲ್ಲ, ಸರ್ಕಾರದ ಹಣಕಾಸು ನಿರ್ವಹಣೆ ಎತ್ತ ಸಾಗುತ್ತಿದೆ ಎಂಬುದಕ್ಕೆ ಗಂಭೀರ ಎಚ್ಚರಿಕೆಯಾಗಿದೆ.
ಗ್ಯಾರಂಟಿಗಳ ಹೆಸರಿನಲ್ಲಿ ರಾಜ್ಯದ ಖಜಾನೆ ಖಾಲಿ
ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳ (Guarantee Scheme) ಹಣಕಾಸು ನಿರ್ವಹಣೆಯ ಪರಿಣಾಮವಾಗಿ ಅಭಿವೃದ್ಧಿ ಯೋಜನೆಗಳಿಗೆ, ರೈತರಿಗೆ ಹಾಗೂ ಇತರ ಅಗತ್ಯ ಕ್ಷೇತ್ರಗಳಿಗೆ ಹಣದ ಕೊರತೆ ಎದುರಾಗುತ್ತಿದೆ ಎಂಬ ಆರೋಪಗಳು ನಿರಂತರವಾಗಿ ಕೇಳಿಬರುತ್ತಿವೆ. ಕಾಂಗ್ರೆಸ್ ಆಡಳಿತವಿರುವ ಇತರ ರಾಜ್ಯಗಳಲ್ಲಿಯೂ ಗ್ಯಾರಂಟಿ ಯೋಜನೆಗಳಿಂದ ಹಣಕಾಸಿನ ಒತ್ತಡ ಉಂಟಾಗಿರುವ ಬಗ್ಗೆ ಅಲ್ಲಿನ ಮುಖ್ಯಮಂತ್ರಿಗಳೇ ಮಾತನಾಡುತ್ತಿದ್ದಾರೆ.
ಹಿಮಾಚಲ ಪ್ರದೇಶದಲ್ಲಿ ಹಣಕಾಸಿನ ಒತ್ತಡದ ಹಿನ್ನೆಲೆ ದೇವಾಲಯಗಳ ಹುಂಡಿ ಹಣದ ಬಳಕೆಯ ವಿಚಾರವೂ ಚರ್ಚೆಗೆ ಬಂದಿದೆ. ಕರ್ನಾಟಕದಲ್ಲೂ ಪರಿಸ್ಥಿತಿ ಬೇರೆಯಾಗಿಲ್ಲ. ರಾಜ್ಯದ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರೇ ಸರ್ಕಾರಕ್ಕೆ ಪತ್ರ ಬರೆದು ಶಕ್ತಿ ಯೋಜನೆಯಡಿ ಸರ್ಕಾರದಿಂದ ಬರಬೇಕಿರುವ ಬಾಕಿ ಹಣವನ್ನ ಬಿಡುಗಡೆ ಮಾಡುವಂತೆ ಕೇಳಿದ್ದಾರೆ ಎಂಬುದು ಸರ್ಕಾರದ ಹಣಕಾಸು ನಿರ್ವಹಣೆಯ ವಾಸ್ತವ ಸ್ಥಿತಿಯನ್ನು ತೋರಿಸುತ್ತದೆ ಎಂದಿದ್ದಾರೆ.
ಟನಲ್ ರಸ್ತೆಗೆ ಇರುವ ಉತ್ಸಾಹ ರೈತರ ಕಡೆಗೂ ಇರಲಿ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಕನಕಪುರದಲ್ಲಿ ಏರ್ಪೋರ್ಟ್ ಮಾಡುವ ಉತ್ಸಾಹವಿದೆ. ಟನಲ್ ರಸ್ತೆ ಯೋಜನೆಗಳ ಬಗ್ಗೆ ತೋರಿಸುವ ಆಸಕ್ತಿಯಿದೆ. ಆದರೆ ರಾಜ್ಯದ ರೈತರು ಸಂಕಷ್ಟದಲ್ಲಿರುವಾಗ ಅವರ ನೆರವಿಗೆ ಧಾವಿಸುವ ಉತ್ಸಾಹ ಮಾತ್ರ ಏಕೆ ಕಾಣಿಸುತ್ತಿಲ್ಲ? ಕನಕಪುರದ ಅಭಿವೃದ್ಧಿಗೂ ಹಣ ಬೇಕು; ಕರ್ನಾಟಕದ ರೈತನ ಬದುಕಿಗೂ ಹಣ ಬೇಕು. ರೈತರ ಬೆಳೆ ನಷ್ಟಕ್ಕೆ ಪರಿಹಾರ, ಸಾಲದ ಒತ್ತಡದಿಂದ ಬಳಲುತ್ತಿರುವ ರೈತರಿಗೆ ನೆರವು, ಬರ ಪರಿಹಾರ, ಜಾನುವಾರುಗಳ ರಕ್ಷಣೆ – ಇವು ಸರ್ಕಾರದ ತಕ್ಷಣದ ಆದ್ಯತೆಯಾಗಬೇಕು. ಕೇಂದ್ರದ ನೆರವು ಬರುವವರೆಗೆ ಕಾಯುತ್ತೇವೆ ಎಂಬ ನೆಪದಲ್ಲಿ ರಾಜ್ಯ ಸರ್ಕಾರ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳಬಾರದು.
ಸದನ ಕರೆದಾಗಲೇ ಹಣೆಬರಹ ಗೊತ್ತಾಯಿತು
ವಿಶೇಷ ಅಧಿವೇಶನ ಕರೆಯುವ ಪರಿಸ್ಥಿತಿ ಬಂದಾಗಲೇ ಸರ್ಕಾರದ ಆಡಳಿತದ ಸ್ಥಿತಿ ಏನೆಂಬುದು ಜನರಿಗೆ ಅರ್ಥವಾಯಿತು. ಬರದ ಸಂಕಷ್ಟ, ರೈತರ ಆತ್ಮಹತ್ಯೆ, ಆರ್ಥಿಕ ಅಸಮರ್ಥತೆ, ಯೋಜನೆಗಳ ಬಾಕಿ ಹಣ ಎಲ್ಲವನ್ನೂ ಎದುರಿಸುವ ಬದಲು ಸರ್ಕಾರ ರಾಜಕೀಯ ಹೇಳಿಕೆಗಳಲ್ಲೇ ಕಾಲ ಕಳೆಯುತ್ತಿದೆ. ಹಿಂದೆ ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಪ್ರಕೃತಿ ವಿಕೋಪ ಎದುರಾದ ಸಂದರ್ಭದಲ್ಲಿ ಕೇಂದ್ರದ ನೆರವಿಗಾಗಿ ಕಾಯದೆ ರಾಜ್ಯ ಸರ್ಕಾರದಿಂದಲೇ ತಕ್ಷಣ ಪರಿಹಾರ ಘೋಷಿಸಿ ಜನರ ನೆರವಿಗೆ ಧಾವಿಸಿದ್ದರು. ಪಕ್ಕದ ಮಹಾರಾಷ್ಟ್ರದಲ್ಲೂ ರಾಜ್ಯ ಸರ್ಕಾರ ರೈತರ ನೆರವಿಗೆ ನೇರವಾಗಿ ಕ್ರಮಗಳನ್ನ ಕೈಗೊಂಡಿದೆ. ಕರ್ನಾಟಕ ಸರ್ಕಾರವೂ ಇದೇ ರೀತಿಯ ತುರ್ತು ಸ್ಪಂದನೆ ತೋರಿಸಬೇಕು ಎಂದು ಒತ್ತಾಯಿಸಿದರು.
ಚಿತ್ರದುರ್ಗಕ್ಕೆ ಹೋಗಿ ಶಹಬ್ಬಾಸ್ಗಿರಿ ಪಡೆಯುವುದಲ್ಲ; ರೈತರ ನೋವು ಕೇಳಬೇಕು
ಮುಖ್ಯಮಂತ್ರಿಗಳು ಚಿತ್ರದುರ್ಗಕ್ಕೆ ತೆರಳಿ ರೈತರಿಂದ ಸನ್ಮಾನ ಸ್ವೀಕರಿಸಲು ಹೊರಟಿದ್ದಾರೆ. ಭದ್ರಾ ಮೇಲ್ದಂಡೆ ಯೋಜನೆಗೆ ಭಾಗಿನ ಅರ್ಪಿಸಿ ದೊಡ್ಡ ಕಾರ್ಯಕ್ರಮ ನಡೆಸುವ ಉದ್ದೇಶವೂ ಇದೆ. ಆದರೆ ಈ ಯೋಜನೆಗೆ ಯಾರಿಗೆ ಅಭಿನಂದನೆ ಸಲ್ಲಿಸಬೇಕು ಎಂಬುದನ್ನು ಮುಖ್ಯಮಂತ್ರಿ ಮರೆಯಬಾರದು.
ಭದ್ರಾ ಮೇಲ್ದಂಡೆ ಯೋಜನೆಗೆ ಚಾಲನೆ ನೀಡಿದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಸರ್ಕಾರದ ಪಾತ್ರವನ್ನ ಮರೆಯಲಾಗದು. ನಂತರದ ಸರ್ಕಾರಗಳೂ ಯೋಜನೆಯನ್ನು ಮುಂದುವರಿಸಿವೆ. ಯೋಜನೆಯ ಒಟ್ಟು ವೆಚ್ಚವೇ ಈಗ ಸಾವಿರಾರು ಕೋಟಿ ರೂಪಾಯಿಗಳನ್ನು ದಾಟಿದೆ. ಕೇಂದ್ರದ ದಾಖಲೆಗಳ ಪ್ರಕಾರ ಯೋಜನೆಯು ತುಂಗಾ ನದಿಯಿಂದ 17.40 TMC ನೀರನ್ನು ಭದ್ರಾ ಜಲಾಶಯಕ್ಕೆ ಎತ್ತುವ ಉದ್ದೇಶ ಹೊಂದಿದೆ. ಆದ್ದರಿಂದ, ಹೋಗಿ ಶಹಬ್ಬಾಸ್ಗಿರಿ ಪಡೆಯುವುದಕ್ಕಿಂತ ಯೋಜನೆಗೆ ಸಂಬಂಧಿಸಿದ ಬಾಕಿ ಕಾಮಗಾರಿಗಳನ್ನು ಪೂರ್ಣಗೊಳಿಸಿ, ರೈತರಿಗೆ ನೀರು ತಲುಪಿಸುವ ಕೆಲಸವನ್ನು ಸರ್ಕಾರ ಮಾಡಲಿ.
ರೈತರ ಜಮೀನು ಕಸಿದುಕೊಳ್ಳುವ ಅಧಿಕಾರ ಸರ್ಕಾರಕ್ಕಿಲ್ಲ
ಶಿಕಾರಿಪುರದ ಶಿರಾಳಕೊಪ್ಪದಲ್ಲಿ ರಿಂಗ್ರೋಡ್ ಹೆಸರಿನಲ್ಲಿ ರೈತರ ಜಮೀನು ಪಡೆಯಲು ಸರ್ಕಾರ ಮುಂದಾಗಿದೆ. ರೈತರ ಗಮನಕ್ಕೂ ತರದೆ ಅವರ ಜಮೀನನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಯತ್ನ ನಡೆಯುತ್ತಿದೆ ಎಂಬ ದೂರುಗಳು ಬಂದಿವೆ. ಅದೇ ರೀತಿ ಬಿಡದಿಯಲ್ಲೂ ರೈತರು ತಮ್ಮ ಜಮೀನು ಉಳಿಸಿಕೊಳ್ಳಲು ಪ್ರತಿಭಟನೆ ನಡೆಸುತ್ತಿದ್ದಾರೆ. ಅಭಿವೃದ್ಧಿಯ ಹೆಸರಿನಲ್ಲಿ ರೈತರ ಜಮೀನನ್ನು ಬಲವಂತವಾಗಿ ಕಸಿದುಕೊಳ್ಳಲು ಸಾಧ್ಯವಿಲ್ಲ. ರೈತರೊಂದಿಗೆ ಸಮಾಲೋಚನೆ ನಡೆಸಿ, ಅವರ ಹಿತಾಸಕ್ತಿಯನ್ನು ರಕ್ಷಿಸಿ ಯಾವುದೇ ಯೋಜನೆ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಶಾಸಕರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ
ಪ್ರದೀಪ್ ಈಶ್ವರ್ ಅವರು ಪ್ರತಾಪ್ ಸಿಂಹ ಅವರ ವಿರುದ್ಧ ಹಾಗೂ ಬಿಜೆಪಿ ನಾಯಕರ ವಿರುದ್ಧ ಬಳಸಿರುವ ಭಾಷೆ ಖಂಡನೀಯ. ಅಧಿಕಾರದ ಮದದಲ್ಲಿ ಮಾತನಾಡುವ ಜನಪ್ರತಿನಿಧಿಗಳಿಗೆ ಸಂವಿಧಾನಬದ್ಧ ಹೊಣೆಗಾರಿಕೆ ಇದೆ ಎಂಬುದನ್ನು ಮರೆಯಬಾರದು. ಬಿ.ಪಿ. ಹರೀಶ್ ಸೇರಿದಂತೆ ಬಿಜೆಪಿ ನಾಯಕರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವುದು ಹಾಗೂ ಪ್ರತಾಪ್ ಸಿಂಹ, ಮಲ್ಲಿಕಾರ್ಜುನ ಅವರ ವಿರುದ್ಧ ಬಳಸಿರುವ ಆಕ್ಷೇಪಾರ್ಹ ಪದಗಳ ಬಗ್ಗೆ ಈಗಾಗಲೇ ಆಕ್ರೋಶ ವ್ಯಕ್ತವಾಗಿದೆ. ಗೃಹ ಸಚಿವರು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ, ಸಂಬಂಧಪಟ್ಟವರ ವಿರುದ್ಧ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ಅಧಿಕಾರದಲ್ಲಿದ್ದೇವೆ ಎಂಬ ಕಾರಣಕ್ಕೆ ಏನು ಬೇಕಾದರೂ ಮಾತನಾಡಬಹುದು ಎಂಬ ಮನೋಭಾವವನ್ನು ಸರ್ಕಾರ ಪ್ರೋತ್ಸಾಹಿಸಬಾರದು.
ಬರ ಘೋಷಣೆ ಮಾಡಿ ಕೈತೊಳೆದುಕೊಳ್ಳುವುದು ಪರಿಹಾರವಲ್ಲ
ನನ್ನ ಕ್ಷೇತ್ರವೂ ಸೇರಿದಂತೆ ಹಲವು ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಆದರೆ ಬರಪೀಡಿತ ತಾಲೂಕು ಎಂದು ಘೋಷಣೆ ಮಾಡಿ ಕೈತೊಳೆದುಕೊಳ್ಳುವುದರಿಂದ ರೈತನ ಸಮಸ್ಯೆ ಬಗೆಹರಿಯುವುದಿಲ್ಲ. ಬರ ಘೋಷಣೆಯ ನಂತರ ಸರ್ಕಾರ ತಕ್ಷಣವೇ ತನ್ನ ಪಾಲಿನ ಪರಿಹಾರ ಹಣವನ್ನು ಬಿಡುಗಡೆ ಮಾಡಬೇಕು. ಬೆಳೆ ನಷ್ಟದ ವೈಜ್ಞಾನಿಕ ಸಮೀಕ್ಷೆ ನಡೆಸಬೇಕು. ರೈತರಿಗೆ ಬೆಳೆ ಪರಿಹಾರ, ಜಾನುವಾರುಗಳಿಗೆ ನೆರವು, ಕುಡಿಯುವ ನೀರು, ಉದ್ಯೋಗ ಹಾಗೂ ಸಾಲ ಮರುಪಾವತಿ ಸಂಬಂಧಿತ ಪರಿಹಾರ ಕ್ರಮಗಳನ್ನು ತಕ್ಷಣ ಜಾರಿಗೊಳಿಸಬೇಕು. ರಾಜ್ಯದಲ್ಲಿ ಬರಪೀಡಿತ ತಾಲೂಕುಗಳ ಸಂಖ್ಯೆ ಹಂತ ಹಂತವಾಗಿ ಹೆಚ್ಚುತ್ತಿದೆ. ಸೆಪ್ಟೆಂಬರ್ 22ರಂದು ಸರ್ಕಾರ 53 ಹೆಚ್ಚುವರಿ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದ್ದು, ಅವುಗಳಲ್ಲಿ 51 ತಾಲೂಕುಗಳನ್ನು ತೀವ್ರ ಬರಪೀಡಿತ ಎಂದು ವರ್ಗೀಕರಿಸಲಾಗಿದೆ. ಇಂತಹ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ನೆರವಿಗಾಗಿ ಪತ್ರ ಬರೆಯುವುದು ಮಾತ್ರ ಸಾಕಾಗುವುದಿಲ್ಲ. ರಾಜ್ಯ ಸರ್ಕಾರ ತನ್ನ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಬಾರದು ಎಂದು ಕುಟುಕಿದರು.
‘ಚಾಲಾಕ್ ಮುಖ್ಯಮಂತ್ರಿ’ ಎಂಬ ಪ್ರಚಾರವಲ್ಲ, ಸಂಕಷ್ಟದ ಸಮಯದಲ್ಲಿ ಕಾರ್ಯ ಬೇಕು
ಮುಖ್ಯಮಂತ್ರಿಗಳು ತಮ್ಮನ್ನು ಚಾಲಾಕ್ ಮುಖ್ಯಮಂತ್ರಿ ಎಂದು ಬಿಂಬಿಸಿಕೊಳ್ಳುವುದಕ್ಕಿಂತ, ಸಂಕಷ್ಟದಲ್ಲಿರುವ ರೈತರ ಬದುಕಿಗೆ ನೆರವಾಗುವ ಮುಖ್ಯಮಂತ್ರಿ ಎಂಬುದನ್ನು ಕಾರ್ಯದ ಮೂಲಕ ಸಾಬೀತುಪಡಿಸಲಿ. ಕೇಂದ್ರ ಸರ್ಕಾರಕ್ಕೆ ಬರ ಪರಿಹಾರಕ್ಕಾಗಿ ಮನವಿ ಮಾಡಿರುವುದು ಬೇರೆ ವಿಷಯ. ಆದರೆ ರಾಜ್ಯ ಸರ್ಕಾರ ತನ್ನಲ್ಲಿರುವ ಸಂಪನ್ಮೂಲದಿಂದ ತಕ್ಷಣವೇ ರೈತರಿಗೆ ನೆರವು ನೀಡುವುದನ್ನು ಆರಂಭಿಸಬೇಕು. ಇಂದು ರೈತನಿಗೆ ಬೇಕಿರುವುದು ಭಾಷಣವಲ್ಲ, ಪರಿಹಾರ; ಭರವಸೆಯಲ್ಲ, ಹಣ; ಘೋಷಣೆಯಲ್ಲ, ಅನುಷ್ಠಾನ.
ಸರ್ಕಾರದ ಬಳಿ ಗ್ಯಾರಂಟಿಗಳಿಗೆ ಹಣವಿದ್ದರೆ, ರೈತರ ಬದುಕಿನ ಗ್ಯಾರಂಟಿಗೂ ಹಣ ಇರಬೇಕು.
* ರೈತರಿಗೆ ಬದುಕಿನ ಗ್ಯಾರಂಟಿ ಕೊಡಿ.
* ರೈತರ ಸಾಲದ ಪರಿಹಾರದ ಗ್ಯಾರಂಟಿ ಕೊಡಿ.
* ಬೆಳೆ ನಷ್ಟಕ್ಕೆ ಪರಿಹಾರದ ಗ್ಯಾರಂಟಿ ಕೊಡಿ.
* ಬರದಿಂದ ಸಂಕಷ್ಟಕ್ಕೊಳಗಾದ ಕುಟುಂಬಗಳಿಗೆ ಬದುಕಿನ ಭರವಸೆಯ ಗ್ಯಾರಂಟಿ ಕೊಡಿ.
* ರಾಜ್ಯದ ಖಜಾನೆಯ ನಿಜವಾದ ಆದ್ಯತೆ ಜನರ ಬದುಕಾಗಬೇಕು… ಇದೇ ಬಿಜೆಪಿ ಆಗ್ರಹ ಎಂದರು.

