ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ(Renukaswamy Murder Case) ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ಗೆ (Darshan) ಹೈಕೋರ್ಟ್ನಲ್ಲಿ ಮತ್ತೊಮ್ಮೆ ತೀವ್ರ ಹಿನ್ನಡೆಯಾಗಿದೆ. ಪ್ರಕರಣದ 14ನೇ ಆರೋಪಿ ಪ್ರದೋಷ್ ಮಾಫಿ ಸಾಕ್ಷಿ (Approver) ಆಗಿರುವುದನ್ನು ಪ್ರಶ್ನಿಸಿ, ದರ್ಶನ್ ಪರವಾಗಿ ಅವರ ಪತ್ನಿ ವಿಜಯಲಕ್ಷ್ಮಿ(Vijayalakshmi) ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಸೆಷನ್ಸ್ ಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ಸುದೀರ್ಘ ವಿಚಾರಣೆ ನಡೆಸಿದ ಹೈಕೋರ್ಟ್(High Court) ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರಿದ್ದ ಏಕಸದಸ್ಯ ಪೀಠವು ಈ ಮಹತ್ವದ ತೀರ್ಪು ಪ್ರಕಟಿಸಿದೆ. ವಿಚಾರಣಾ ನ್ಯಾಯಾಲಯದ ಆದೇಶದಲ್ಲಿ ಹಸ್ತಕ್ಷೇಪ ಮಾಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದ ನ್ಯಾಯಪೀಠ, ಅರ್ಜಿದಾರರ ಮನವಿಯನ್ನು ತಿರಸ್ಕರಿಸಿದೆ.
ಮಾಫಿ ಸಾಕ್ಷಿ ವಿಚಾರದಲ್ಲಿ ಸಹ ಆರೋಪಿಗಳಿಗೆ ಅದನ್ನು ನೇರವಾಗಿ ಪ್ರಶ್ನಿಸುವ ಯಾವುದೇ ಕಾನೂನುಬದ್ಧ ಹಕ್ಕಿರುವುದಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿತು. ಆರೋಪಿ ಹಾಗೂ ನ್ಯಾಯಾಲಯದ ನಡುವೆ ನಡೆಯುವ ಪ್ರಕ್ರಿಯೆ ಇದಾಗಿದ್ದು, ಪ್ರಾಸಿಕ್ಯೂಷನ್ ಈ ಪ್ರಕ್ರಿಯೆಯ ಮಾಲೀಕ ಎಂದು ನ್ಯಾಯಮೂರ್ತಿಗಳು ತಿಳಿಸಿದರು.
ಮಾಫಿ ಸಾಕ್ಷಿಯಾಗಿರುವ ಪ್ರದೋಷ್ನನ್ನು ವಿಚಾರಣೆ ವೇಳೆ ಪಾಟೀ ಸವಾಲು ನಡೆಸಲು ನಿಮಗೆ ಸಂಪೂರ್ಣ ಹಕ್ಕಿದೆ. ವಿಚಾರಣೆ ಸಂದರ್ಭದಲ್ಲಿ ನಿಮ್ಮ ಕಕ್ಷಿದಾರರು (ದರ್ಶನ್) ಹಾಜರಿರಲು ಈಗಾಗಲೇ ಅನುಮತಿ ನೀಡಲಾಗಿದೆ. ನೀವು ಯಾವ ರೀತಿಯ ಪ್ರಶ್ನೆಗಳನ್ನು ಬೇಕಾದರೂ ಕೇಳಬಹುದು. ಅದನ್ನು ಟ್ರಯಲ್ ಕೋರ್ಟ್ ಎದುರು ಪ್ರಸ್ತುತಪಡಿಸಿ ಎಂದು ದರ್ಶನ್ ಪರ ವಕೀಲರಿಗೆ ಹೈಕೋರ್ಟ್ ಸೂಚಿಸಿತು.
ಪ್ರದೋಷ್ ಜೈಲಿನಲ್ಲಿ ಅಕ್ರಮವಾಗಿ ಮೊಬೈಲ್ ಬಳಸಿ ಬೇರೆಯವರೊಂದಿಗೆ ಸಂಪರ್ಕ ಸಾಧಿಸಿ, ಒತ್ತಡಕ್ಕೆ ಒಳಗಾಗಿ ಮಾಫಿ ಸಾಕ್ಷಿಯಾಗಿದ್ದಾರೆ, ಈ ಬಗ್ಗೆ ತನಿಖೆ ಮುಗಿಯುವವರೆಗೆ ಹೇಳಿಕೆ ದಾಖಲಿಸಬಾರದು ಎಂಬ ದರ್ಶನ್ ಪರ ವಕೀಲರ ವಾದವನ್ನು ಕೋರ್ಟ್ ಒಪ್ಪಲಿಲ್ಲ. ಪ್ರಾಥಮಿಕ ಮಾಹಿತಿಯಂತೆ ಪ್ರದೋಷ್ ಪತ್ನಿ ಜೊತೆ ಮಾತನಾಡಿದ್ದಾರೆ. ಅದರಲ್ಲಿ ಯಾವುದೇ ರಹಸ್ಯ ಅಥವಾ ಅಪರಾಧ ಕಾಣಿಸುತ್ತಿಲ್ಲ ಎಂದು ನ್ಯಾಯಪೀಠ ಹೇಳಿತು. ಅಲ್ಲದೆ ಪ್ರಾಸಿಕ್ಯೂಷನ್ ಮಾಫಿ ಸಾಕ್ಷಿಗೆ ಮರುದಿನವೇ ಒಪ್ಪಿಗೆ ನೀಡಿದ್ದರಲ್ಲಿ ಯಾವುದೇ ತಪ್ಪು ಹುಡುಕಲಾಗದು ಎಂದು ಕೋರ್ಟ್ ಅಭಿಪ್ರಾಯಪಟ್ಟಿತು.
ದರ್ಶನ್ ಪರ ಹಿರಿಯ ವಕೀಲ ಹಷ್ಮತ್ ಪಾಷಾ ಹಾಜರಾಗಿ, ” ಪ್ರಕರಣದಲ್ಲಿ 17 ಆರೋಪಿಗಳಿದ್ದು, 14ನೇ ಆರೋಪಿ ಪ್ರದೋಷ್ ಸ್ವಯಂಪ್ರೇರಿತವಾಗಿ ಆಗಿ ಮಾಫಿ ಸಾಕ್ಷಿಗೆ ಅರ್ಜಿ ಸಲ್ಲಿಸಿದ್ದಾನೆ. ಆತನ ವಿರುದ್ಧ ಜೈಲಿನಲ್ಲಿ ಮೊಬೈಲ್ ದುರ್ಬಳಕೆ ಆರೋಪವಿದ್ದು, ತನಿಖೆ ನಡೆಯುತ್ತಿದೆ. ಕೆಲವರ ಸಂಪರ್ಕ ಮತ್ತು ಒತ್ತಡದ ಹಿನ್ನೆಲೆಯಲ್ಲಿ ಆತ ಮಾಫಿ ಸಾಕ್ಷಿಯಾಗಿದ್ದಾನೆ. ಅಪ್ರೂವರ್ ಇಲ್ಲದೆ ಶಿಕ್ಷೆ ನೀಡಲಾಗದು ಎಂದು ಪ್ರಾಸಿಕ್ಯೂಷನ್ ಸಾಬೀತುಪಡಿಸಬೇಕು. ಹೀಗಾಗಿ ಆತನ ವಿರುದ್ಧದ ತನಿಖೆ ಮುಗಿಯುವವರೆಗೆ ಮಾಫಿ ಸಾಕ್ಷಿಯ ಹೇಳಿಕೆ ದಾಖಲಿಸಬಾರದು” ಎಂದು ವಾದಿಸಿದರು.
ಪ್ರಾಸಿಕ್ಯೂಷನ್ ಪರ ಎಸ್ಪಿಪಿ ಪ್ರಸನ್ನ ಕುಮಾರ್,”ಪ್ರದೋಷ್ ಯಾವುದೇ ಅಕ್ರಮ ಮೊಬೈಲ್ ಬಳಕೆ ಮಾಡಿಲ್ಲ, ಅಧಿಕೃತ ಲ್ಯಾಂಡ್ಲೈನ್ ಮೂಲಕ ಮಾತನಾಡಿದ್ದು, ಅದು ಕೂಡ ತನ್ನ ಪತ್ನಿ ಜೊತೆ ಮಾತ್ರ. ಇದರಲ್ಲಿ ಯಾವುದೇ ದುರುದ್ದೇಶವಿಲ್ಲ. ದರ್ಶನ್ ಪರವಾಗಿ ಅವರ ಪತ್ನಿ ವಿಜಯಲಕ್ಷ್ಮಿ ಅವರು ಅರ್ಜಿ ಸಲ್ಲಿಸಿ ವಿಚಾರಣೆಗೆ ಅಡ್ಡಿಪಡಿಸುತ್ತಿದ್ದಾರೆ” ಎಂದು ವಾದಿಸಿದರು.
ವಿಜಯಲಕ್ಷ್ಮಿ ಅವರ ಅರ್ಜಿ ಸಲ್ಲಿಕೆ ಬಗ್ಗೆ ಎಸ್ಪಿಪಿ ಆಕ್ಷೇಪ ವ್ಯಕ್ತಪಡಿಸಿದಾಗ ಮಧ್ಯಪ್ರವೇಶಿಸಿದ ನ್ಯಾಯಮೂರ್ತಿ ಶ್ರೀಶಾನಂದ ಅವರು, “ನ್ಯಾಯದ ಘಂಟೆಯನ್ನು ಯಾರಾದರೂ ಬಾರಿಸಲಿ ಬಿಡಿ. ಬೇರೆ ಯಾರೋ ಅರ್ಜಿ ಹಾಕಿಲ್ಲ, ಅವರ ಪತ್ನಿಯೇ ಹಾಕಿದ್ದಾರೆ. ಪತಿ ವಾಪಸ್ ಬರಲಿ ಎಂದು ಪತ್ನಿ ಒದ್ದಾಡುತ್ತಿದ್ದಾರೆ, ದೇವಸ್ಥಾನಗಳಲ್ಲಿ ಪ್ರಾರ್ಥಿಸುತ್ತಿದ್ದಾರೆ. ಹೀಗಿರುವಾಗ ಅವರ ಹಕ್ಕಿನ ಬಗ್ಗೆ ಆಕ್ಷೇಪಿಸುವುದು ಬೇಡ” ಎಂದು ಮಾನವೀಯ ನೆಲೆಯಲ್ಲಿ ಅಭಿಪ್ರಾಯಪಟ್ಟರು.
ಪ್ರದೋಷ್ ಪರ ವಕೀಲ ದಿವಾಕರ್, ದರ್ಶನ್ ಕಡೆಯವರು ಪದೇ ಪದೇ ಅರ್ಜಿಗಳನ್ನು ಸಲ್ಲಿಸಿ ವಿಚಾರಣೆಯನ್ನು ವಿಳಂಬ ಮಾಡುತ್ತಿದ್ದಾರೆ. ಪ್ರದೋಷ್ ಕೇವಲ ತನ್ನ ಹೆಂಡತಿಯೊಂದಿಗೆ ಮಾತನಾಡಿದ್ದು, ಬೇರೆ ಯಾವುದೇ ತಪ್ಪು ಕೆಲಸ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.
ಎಲ್ಲಾ ವಾದ-ಪ್ರತಿವಾದಗಳನ್ನು ಆಲಿಸಿದ ಹೈಕೋರ್ಟ್ ಪೀಠ, ಪ್ರದೋಷ್ನನ್ನು ಮಾಫಿ ಸಾಕ್ಷಿಯನ್ನಾಗಿ ಪರಿಗಣಿಸಿದ ಸೆಷನ್ಸ್ ಕೋರ್ಟ್ ಆದೇಶವು ಕಾನೂನುಬಾಹಿರ ಎನ್ನಲು ಯಾವುದೇ ಸೂಕ್ತ ಆಧಾರಗಳಿಲ್ಲ ಎಂದು ತೀರ್ಮಾನಿಸಿ ದರ್ಶನ್ ಪತ್ನಿ ವಿಜಯಲಕ್ಷ್ಮಿ ಸಲ್ಲಿಸಿದ್ದ ಅರ್ಜಿಯನ್ನು ಸಂಪೂರ್ಣವಾಗಿ ವಜಾಗೊಳಿಸಿತು.

