ರೋಮ್: ಇಟಲಿಯ(Italy) ಶಾಲೆಗಳಲ್ಲಿ ಮುಖ ಮುಚ್ಚುವ ಬುರ್ಖಾ(Burqa) ಮತ್ತು ನಿಖಾಬ್ ಧರಿಸುವುದನ್ನು ನಿಷೇಧಿಸಲು ಹಾಗೂ ಪ್ರತಿ ತರಗತಿಯಲ್ಲಿ ವಿದೇಶಿ ವಿದ್ಯಾರ್ಥಿಗಳ ಗರಿಷ್ಠ ಸಂಖ್ಯೆಗೆ ಮಿತಿ ಹೇರಲು ಪ್ರಧಾನಿ ಜಾರ್ಜಿಯಾ ಮೆಲೋನಿ ನೇತೃತ್ವದ ಸರ್ಕಾರ ಹೊಸ ಕರಡು ಪ್ರಸ್ತಾವನೆಯನ್ನು ಸಿದ್ಧಪಡಿಸಿದೆ.
ತಮ್ಮ ‘ಬ್ರದರ್ಸ್ ಆಫ್ ಇಟಲಿ’ (Brothers of Italy) ಪಕ್ಷದ ಯುವ ಘಟಕದ ವಾರ್ಷಿಕ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ಜಾರ್ಜಿಯಾ ಮೆಲೋನಿ(Giorgia Meloni) ಶೀಘ್ರದಲ್ಲೇ ಈ ಪ್ರಸ್ತಾವನೆಯನ್ನು ಸಂಪುಟ ಸಭೆಯ ಮುಂದೆ ಮಂಡಿಸಲಾಗುವುದು ಎಂದು ಘೋಷಿಸಿದರು.
ಶಾಲೆಗಳಿಗೆ ಬರುವ ವಿದ್ಯಾರ್ಥಿನಿಯರು ಮುಖವನ್ನು ಸಂಪೂರ್ಣವಾಗಿ ಮುಚ್ಚಿಕೊಂಡು ಬರಲು ಅವಕಾಶವಿಲ್ಲ. ಪ್ರತಿಯೊಬ್ಬರೂ ತೆರೆದ ಮುಖದೊಂದಿಗೆ ಶಾಲೆಗೆ ಬರಬೇಕು. ಸಂಪ್ರದಾಯದ ಹೆಸರಿನಲ್ಲಿ ಯುವತಿಯರು ಮುಖ ಮರೆಸಿಕೊಳ್ಳುವುದನ್ನು ಇಟಲಿಯಲ್ಲಿ ಒಪ್ಪಲಾಗದು ಎಂದು ಮೆಲೋನಿ ಸ್ಪಷ್ಟಪಡಿಸಿದ್ದಾರೆ.
ಈ ನಿಯಮವು ಮುಖ ಮುಚ್ಚುವ ಬುರ್ಖಾ ಮತ್ತು ನಿಖಾಬ್ಗೆ ಮಾತ್ರ ಅನ್ವಯಿಸಲಿದ್ದು, ತಲೆಕೂದಲು ಮಾತ್ರ ಮುಚ್ಚುವ ಹಿಜಾಬ್ಗೆ ಇದು ಅನ್ವಯಿಸುವುದಿಲ್ಲ.

ಶಾಲೆಯ ಪ್ರತಿ ತರಗತಿಯಲ್ಲಿ ವಿದೇಶಿ ವಿದ್ಯಾರ್ಥಿಗಳ ಗರಿಷ್ಠ ಸಂಖ್ಯೆಯನ್ನು ಕಾನೂನುಬದ್ಧವಾಗಿ ಸೀಮಿತಗೊಳಿಸಲು ಸರ್ಕಾರ ತೀರ್ಮಾನಿಸಿದೆ. ಸ್ಥಳೀಯ ಇಟಾಲಿಯನ್ ಭಾಷೆ ತಿಳಿಯದ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾದರೆ ಕಲಿಕೆ ಮತ್ತು ಸಾಮಾಜಿಕ ಹೊಂದಾಣಿಕೆ ಕಷ್ಟವಾಗುತ್ತದೆ ಎಂಬ ಕಾರಣಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ. ಇದನ್ನೂ ಓದಿ: ಅಮೆರಿಕ ಸಂಕಷ್ಟದ ಸುಳಿಯಿಂದ ಹೊರಬರಲು ಬಯಸಿದ್ರೆ..: ಟ್ರಂಪ್ಗೆ 7 ಷರತ್ತು ವಿಧಿಸಿದ ಇರಾನ್
ಫ್ರಾನ್ಸ್, ಬೆಲ್ಜಿಯಂ, ಡೆನ್ಮಾರ್ಕ್ ಮತ್ತು ನೆದರ್ಲ್ಯಾಂಡ್ಸ್ ಸೇರಿದಂತೆ ಹಲವು ಯುರೋಪಿಯನ್ ರಾಷ್ಟ್ರಗಳು ಈಗಾಗಲೇ ಸಾರ್ವಜನಿಕ ಸ್ಥಳಗಳಲ್ಲಿ ಅಥವಾ ಶಿಕ್ಷಣ ಸಂಸ್ಥೆಗಳಲ್ಲಿ ಮುಖ ಮುಚ್ಚುವ ವಸ್ತ್ರಗಳ ಮೇಲೆ ನಿಷೇಧ ಅಥವಾ ನಿರ್ಬಂಧ ಹೇರಿವೆ. ಇದೀಗ ಇಟಲಿ ಕೂಡ ತನ್ನ ವಲಸೆ ನೀತಿ ಹಾಗೂ ಸಾಂಸ್ಕೃತಿಕ ಹೊಂದಾಣಿಕೆ ಕಠಿಣಗೊಳಿಸುವ ಭಾಗವಾಗಿ ಶಿಕ್ಷಣ ಕ್ಷೇತ್ರದಲ್ಲೂ ಈ ಮಹತ್ವದ ಬದಲಾವಣೆಗಳಿಗೆ ಮುಂದಾಗಿದೆ.

