– ಮಂಗಳೂರು ಬಂದರಿನಲ್ಲಿ ಮೀನುಗಾರರ ಸಮಸ್ಯೆ ಆಲಿಸಿದ ಡಿಕೆಶಿ
ಮಂಗಳೂರು: ಇಂದು ಬೆಳ್ಳಂಬೆಳಗ್ಗೆ ಮಂಗಳೂರು ಮೀನುಗಾರಿಕಾ ಬಂಧರಿಗೆ ಭೇಟಿ ನೀಡಿದ ಸಿಎಂ ಡಿಕೆ ಶಿವಕುಮಾರ್ (DK Shivakumar) ಮೀನುಗಾರರ ಸಮಸ್ಯೆಗಳನ್ನ ಆಲಿಸಿದರು. ಇದೇ ವೇಳೆ ಬಂದರಿನಲ್ಲಿನ ಮೀನು ವ್ಯಾಪಾರ ಬಂದ್ ಮಾಡಿಸಿದ್ದಕ್ಕೆ ಪೊಲೀಸ್ ಇಲಾಖೆ ಹಾಗೂ ಅಧಿಕಾರಿಗಳ ವಿರುದ್ಧ ಗರಂ ಆದರು.
ಶನಿವಾರ ಬೆಳಗ್ಗೆ ಮಂಗಳೂರು ಮೀನುಗಾರಿಕಾ ಬಂದರಿಗೆ (Mangaluru Port) ಭೇಟಿ ನೀಡಿದ ಸಿಎಂ ಡಿಕೆಶಿ, ಬಂದರಿನ ವ್ಯವಸ್ಥೆಗಳನ್ನು ಪರಿಶೀಲಿಸಿದರು. ಇದೇ ವೇಳೆ ಮೀನುಗಾರರೊಂದಿಗೆ ಮಾತುಕತೆ ನಡೆಸಿ, ಅವರ ಸಮಸ್ಯೆಗಳು ಹಾಗೂ ತುರ್ತು ಅಗತ್ಯಗಳ ಕುರಿತು ಮಾಹಿತಿ ಪಡೆದರು. ಇದೇ ವೇಳೆ ಫ್ರೆಶ್ ಮೀನು ಕೈಯಲ್ಲಿ ಹಿಡಿದು ನೋಡಿದರು.
ಕಡಲ ಮಕ್ಕಳ ರಕ್ಷಣೆಗೆ ಸರ್ಕಾರ ಬದ್ಧ
ಮಂಗಳೂರಿನ ಮೀನುಗಾರಿಕಾ ಬಂದರಿಗೆ ಇಂದು ಭೇಟಿ ನೀಡಿ, ಪ್ರಗತಿಯಲ್ಲಿರುವ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಿ, ಅಧಿಕಾರಿಗಳಿಂದ ಮಾಹಿತಿ ಪಡೆದುಕೊಳ್ಳಲಾಯಿತು. ಜೊತೆಗೆ ಮೀನುಗಾರರೊಂದಿಗೆ ಸಂವಾದ ನಡೆಸಿ, ಅವರ ಸಮಸ್ಯೆಗಳು, ಅಗತ್ಯತೆಗಳು ಹಾಗೂ ಜೀವನೋಪಾಯದ ಸ್ಥಿತಿಗತಿಗಳ ಕುರಿತು ಮಾಹಿತಿ ಪಡೆದು, ಅಗತ್ಯ… pic.twitter.com/szvfewfGEO
— DK Shivakumar (@DKShivakumar) September 19, 2026
ಮೀನು ವ್ಯಾಪಾರ ಬಂದ್
ಸಿಎಂ ಭೇಟಿ ಹಿನ್ನೆಲೆ ಭದ್ರತಾ ಕಾರಣಗಳನ್ನ ನೀಡಿ ಬಂದರಿನಲ್ಲಿನ ಮೀನು ವ್ಯಾಪಾರವನ್ನ ಬಂದ್ ಮಾಡಿಸಲಾಗಿತ್ತು. ಮುಖ್ಯಮಂತ್ರಿಗಳು ಸ್ಥಳಕ್ಕೆ ಭೇಟಿ ನೀಡಿದಾಗ ಈ ಬಗ್ಗೆ ಮೀನುಗಾರರು (Fishermen) ಅಳಲು ತೋಡಿಕೊಂಡರು. ಇದರಿಂದ ಅಸಮಾಧಾನಗೊಂಡ ಸಿಎಂ, ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿಗಳು ಹಾಗೂ ಜಿಲ್ಲಾಡಳಿತದ ಅಧಿಕಾರಿಗಳ ಬಳಿ ಈ ಕುರಿತು ಮಾಹಿತಿ ಕೇಳಿದರು.
ಮೀನುಗಾರರ ಸಮಸ್ಯೆ ಕೇಳಲು ನಾನು ಇಲ್ಲಿಗೆ ಬಂದಿದ್ದೇನೆ. ಅವರ ವ್ಯಾಪಾರ ಬಂದ್ ಮಾಡಲು ಯಾರು ಹೇಳಿದ್ದು? ಎಂದು ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡ ಸಿಎಂ, ತಾವು ವ್ಯಾಪಾರ ಸ್ಥಗಿತಗೊಳಿಸುವಂತೆ ಸೂಚನೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.

ಈ ವೇಳೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಪಡೆದ ಅವರು, ಭದ್ರತೆಯ ಹೆಸರಿನಲ್ಲಿ ಮೀನುಗಾರರ ವ್ಯಾಪಾರಕ್ಕೆ ತೊಂದರೆ ನೀಡಬಾರದು ಎಂದು ತಾಕೀತು ಮಾಡಿದರು. ʻʻನಿಮ್ಮ ಸೆಕ್ಯೂರಿಟಿ ಯಾರಿಗೆ ಬೇಕು? ಮೀನುಗಾರರ ವ್ಯಾಪಾರ ಬಂದ್ ಮಾಡಿಸಲು ಯಾರು ಹೇಳಿದ್ದು? ಯಾರಾದರೂ ಆರ್ಡರ್ ಮಾಡಿದ್ದರೆ ಅವರನ್ನ ಸಸ್ಪೆಂಡ್ ಮಾಡುತ್ತೇನೆ ಎಂದು ಸ್ಥಳದಲ್ಲೇ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಮುಖ್ಯಮಂತ್ರಿಗಳ ಭೇಟಿ ವೇಳೆ ಮಂಗಳೂರು ಮೀನುಗಾರಿಕಾ ಬಂದರಿನ ಮೀನುಗಾರರು ತಮ್ಮ ಹಲವು ತುರ್ತು ಬೇಡಿಕೆಗಳು ಹಾಗೂ ಸಮಸ್ಯೆಗಳನ್ನು ಅವರ ಮುಂದಿಟ್ಟರು. ಬಂದರಿನ ಮೂಲಸೌಕರ್ಯ, ವ್ಯಾಪಾರಕ್ಕೆ ಸಂಬಂಧಿಸಿದ ಸಮಸ್ಯೆಗಳು ಸೇರಿದಂತೆ ವಿವಿಧ ವಿಚಾರಗಳ ಕುರಿತು ಮೀನುಗಾರರು ಸಿಎಂ ಗಮನಕ್ಕೆ ತಂದರು.
ಮೀನುಗಾರರ ಸಮಸ್ಯೆಗಳನ್ನು ಖುದ್ದಾಗಿ ಆಲಿಸಿದ ಡಿ.ಕೆ. ಶಿವಕುಮಾರ್, ಬಂದರಿನಲ್ಲಿನ ವ್ಯವಸ್ಥೆಗಳ ಪರಿಶೀಲನೆಯನ್ನೂ ನಡೆಸಿದರು.

