ಮಂಗಳೂರು: ತುಳು ಭಾಷೆಗೆ ರಾಜ್ಯದ ಎರಡನೇ ಅಧಿಕೃತ ಭಾಷಾ ಸ್ಥಾನ ನೀಡಿದ ಸಚಿವ ಸಂಪುಟ ಸಭೆಯಲ್ಲಿ ಅಂಗೀಕರಿಸಿ ನಿರ್ಧಾರ ಪ್ರಕಟಿಸಿದ ಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಹಾಗೂ ಸಚಿವ ಸಂಪುಟದ ಎಲ್ಲಾ ಮಂತ್ರಿಗಳಿಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಧನ್ಯವಾದ ತಿಳಿಸಿದ್ದಾರೆ.
ಕಳೆದ ಚುನಾವಣೆ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದಂತೆ ತುಳು ಭಾಷೆಗೆ ಅಧಿಕೃತ ಮಾನ್ಯತೆಯನ್ನು ನೀಡುವ ಮೂಲಕ ಸರ್ಕಾರ ನುಡಿದಂತೆ ನಡೆದಿದೆ ಎಂದು ತಾರಾನಾಥ ಗಟ್ಟಿ ಕಾಪಿಕಾಡ್ ಅವರ ಸಂತಸ ವ್ಯಕ್ತಪಡಿಸಿದ್ದಾರೆ.
ತುಳು ಭಾಷೆಗೆ ಅಧಿಕೃತ ಮಾನ್ಯತೆ ಲಭಿಸುವ ನಿಟ್ಟಿನಲ್ಲಿ ತುಳುವರ ಪರವಾಗಿ ಕಾಳಜಿ ವಹಿಸಿದ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ಸಚಿವ ಶಿವರಾಜ್ ತಂಗಡಗಿ ಅವರಿಗೆ, ಸರ್ಕಾರದ ಮುಂದೆ ವಿಷಯವನ್ನು ನಿರಂತರವಾಗಿ ಮಂಡಿಸಿದ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್, ಪುತ್ತೂರಿನ ಶಾಸಕ ಅಶೋಕ್ ರೈ ಹಾಗೂ ಕರಾವಳಿಯ ಎಲ್ಲಾ ಶಾಸಕರನ್ನು ಮತ್ತು ಸರ್ಕಾರದ ಮೇಲೆ ಒತ್ತಾಯ, ಆಗ್ರಹಗಳನ್ನು ನಿರಂತರವಾಗಿ ತಂದ ದೇಶ-ವಿದೇಶದ ಎಲ್ಲಾ ತುಳು ಸಂಘ ಸಂಸ್ಥೆಗಳಿಗೂ ಅಭಿನಂದನೆ ಸಲ್ಲಿಸಿರುತ್ತಾರೆ.
ಸಮಸ್ತ ತುಳುವರಿಗೆ ಇದೊಂದು ಚಾರಿತ್ರಿಕ ದಿನವಾಗಿದ್ದು, ಜಗತ್ತಿನಾದ್ಯಂತ ನೆಲೆಸಿರುವ ತುಳು ಭಾಷಿಗರಲ್ಲಿ ಆತ್ಮ ವಿಶ್ಮಾಸವನ್ನು ಪುಟಿದೆಬ್ಬಿಸಿದ ದಿನವಾಗಿದೆ. ತುಳು ಭಾಷೆಯ ಸಮಗ್ರ ಬೆಳವಣಿಗೆಯ ನಿಟ್ಟಿನಲ್ಲಿ ಇದೊಂದು ಐತಿಹಾಸಿಕ ಕ್ರಮವಾಗಿದೆ. ಸುಮಾರು 3 ಸಾವಿರ ವರ್ಷಗಳ ಚಾರಿತ್ರಿಕ ಹಿನ್ನಲೆಯನ್ನು ಹೊಂದಿರುವ ತುಳು ಭಾಷೆಗೆ ಒದಗಿದ ಮಹತ್ವದ ಕೊಡುಗೆಯಾಗಿದೆ ಎಂದು ಹೇಳಿದ್ದಾರೆ.
ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಡಾ. ಎಂ.ಮೋಹನ್ ಆಳ್ವ ಅವರು ಸಲ್ಲಿಸಿರುವ ವರದಿಯ ಬಳಿಕ ಸಿದ್ದರಾಮಯ್ಯ ಸರ್ಕಾರವು ರಚಿಸಿದ ಆಂಧ್ರ ಪ್ರದೇಶದ ಅಧ್ಯಯನ ವರದಿಯ ಹಿನ್ನಲೆಯಲ್ಲಿ ಸಿಎಂ ಡಿ.ಕೆ.ಶಿವಕುಮಾರ್ ಅವರು ದಿಟ್ಟ ನಿರ್ಧಾರ ಕೈಗೊಂಡು ತುಳು ಭಾಷೆಗೆ ರಾಜ್ಯದ ಅಧಿಕೃತ ಭಾಷೆಯ ಮಾನ್ಯತೆ ನೀಡುವ ಮೂಲಕ ಐತಿಹಾಸಿಕ ಕ್ರಮ ಕೈಗೊಂಡಿರುವುದು ಸಮಸ್ತ ತುಳುವರಿಗೆ ಹೆಮ್ಮೆಯ ವಿಚಾರವಾಗಿರುತ್ತದೆ ಎಂದು ಕಾಪಿಕಾಡ್ ಅಭಿಪ್ರಾಯಪಟ್ಟಿದ್ದಾರೆ.
ಸರ್ಕಾರ ನೇಮಿಸಿದ ಆಂಧ್ರ ಪ್ರದೇಶ ಅಧ್ಯಯನ ಸಮಿತಿಯ ಸದಸ್ಯನಾಗಿ ಆಂಧ್ರ ಪ್ರದೇಶದಲ್ಲಿ ಉರ್ದು ಭಾಷೆಯನ್ನು ಅಧಿಕೃತ ಭಾಷೆಯಾಗಿ ಘೋಷಣೆ ಮಾಡಿರುವ ವಿಧಿವಿಧಾನ ಹಾಗೂ ಕಾನೂನು ಪ್ರಕ್ರಿಯೆಗಳ ಮಾಹಿತಿಯನ್ನು ವರದಿಯ ಮೂಲಕ ಸರ್ಕಾರಕ್ಕೆ ಸಲ್ಲಿಸುವ ಸೇವೆಗೈಯಲು ಅವಕಾಶವಾಯಿತು ಹಾಗೂ ಆಂಧ್ರ ಪ್ರದೇಶ ಅಧ್ಯಯನ ವರದಿಯು ತುಳುವನ್ನು ಅಧಿಕೃತ ಭಾಷೆಯಾಗಿ ಘೋಷಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರಕ್ಕೆ ಮಹತ್ವದ ದಾಖಲೆಗಳನ್ನು ಹಾಗೂ ನಿರೂಪಣೆಗಳನ್ನು ಒದಗಿಸಿಕೊಟ್ಟಿತ್ತು ಎಂಬುದನ್ನು ಅವರು ಈ ಸಂದರ್ಭದಲ್ಲಿ ಉಲ್ಲೇಖಿಸಿದ್ದಾರೆ.
ಸಂವಿಧಾನದ 8 ನೇ ಪರಿಚ್ಛೇದಕ್ಕೆ ತುಳು ಸೇರ್ಪಡೆಯಾಗಬೇಕೆಂಬ ತುಳುವರ ಮಹತ್ವದ ಇನ್ನೊಂದು ಬೇಡಿಕೆ ಈಡೇರುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರದ ಇಂದಿನ ಈ ಚಾರಿತ್ರಿಕ ನಿರ್ಧಾರವು ಪೂರಕ ಬಲವನ್ನು ತಂದುಕೊಟ್ಟಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

