– 70 ಕೆಜಿ ಮಾಂಸ, ಬಂದೂಕು ಜಪ್ತಿ
ಚಿಕ್ಕಮಗಳೂರು: ಲಕ್ಕವಳ್ಳಿ (Lakkavalli) ವಲಯದ ಎಂ.ಸಿ.ಹಳ್ಳಿ ಶಾಖಾ ವ್ಯಾಪ್ತಿಯಲ್ಲಿ ಕಡವೆ (Sambar Deer) ಬೇಟೆಯಾಡಿ, ಮಾಂಸವನ್ನು ಕತ್ತರಿಸುತ್ತಿದ್ದ ವೇಳೆ ಅರಣ್ಯ ಇಲಾಖೆ (Forest Department) ಅಧಿಕಾರಿಗಳು ದಾಳಿ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಎಂಸಿ ಹಳ್ಳಿಯ ಕಿರಣ್, ಗೋವಿಂದರಾಜು ಹಾಗೂ ಭದ್ರಾವತಿಯ ಮಣಿಕಂಠ ಬಂಧಿತ ಆರೋಪಿಗಳು. ಬಂಧಿತ ಮೂವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ನಾಲ್ವರು ಪರಾರಿಯಾಗಿದ್ದು, ಅವರ ಪತ್ತೆಗೆ ಅಧಿಕಾರಿಗಳು ಬಲೆ ಬೀಸಿದ್ದಾರೆ. ಈ ಸಂಬಂಧ ಎಂಸಿ ಹಳ್ಳಿ ಕ್ವಾಟ್ರಸ್ನ ಪ್ರವೀಣ್, ಪ್ರಭು ಸೇರಿದಂತೆ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಹೊಸನಗರ | ಜಿಂಕೆ ಮಾಂಸ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳು ಅರೆಸ್ಟ್
ದಾಳಿ ವೇಳೆ, ಸುಮಾರು 70 ಕೆಜಿ ಕಡವೆ ಮಾಂಸ, ತಲೆ ಹಾಗೂ ಕಾಲುಗಳ ಸಮೇತ ವಶಪಡಿಸಿಕೊಳ್ಳಲಾಗಿದೆ. ಜೊತೆಗೆ ಒಂದು ನಾಡ ಬಂದೂಕು, ಒಂದು ದ್ವಿಚಕ್ರ ವಾಹನ, ಬೇಟೆಗೆ ಬಳಸಿದ್ದ ಕತ್ತಿ, ಚಾಕು, ಚೂರಿ ಹಾಗೂ ಹೆಡ್ಲೈಟ್ ಸೇರಿದಂತೆ ವಿವಿಧ ವಸ್ತುಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಕಾರ್ಯಾಚರಣೆಯಲ್ಲಿ ಲಕ್ಕವಳ್ಳಿ ವಲಯದ, ವಲಯ ಅರಣ್ಯಾಧಿಕಾರಿ ಇಂದು ಜಿ.ಎಸ್, ಎಂ.ಸಿ.ಹಳ್ಳಿ ಶಾಖೆಯ ಉಪ ವಲಯ ಅರಣ್ಯಾಧಿಕಾರಿ ಚನ್ನೇಗೌಡ ಜಿ.ಟಿ, ಲಕ್ಕವಳ್ಳಿ ಶಾಖೆಯ ಉಪ ವಲಯ ಅರಣ್ಯಾಧಿಕಾರಿ ಮನೋಜ್ ಕೆ.ಎಸ್, ಎಂ.ಸಿ.ಹಳ್ಳಿ ಗಸ್ತಿನ ಗಸ್ತು ಅರಣ್ಯ ಪಾಲಕ ಸಂತೋಷ್ ಎಂ.ಬಿ, ಲಕ್ಕವಳ್ಳಿ ಗಸ್ತಿನ ಗಸ್ತು ಅರಣ್ಯ ಪಾಲಕರಾದ ಬಾಲರಾಜ್, ಪುನೀತ್, ವಿಶ್ವನಾಥ್, ಅರಣ್ಯ ವೀಕ್ಷಕಿ ಕುಮಾರಿ ಶೋಭಾ ಸೇರಿದಂತೆ ಲಕ್ಕವಳ್ಳಿ ವಲಯದ ಸಿಬ್ಬಂದಿ ಭಾಗಿಯಾಗಿದ್ದರು. ಇದನ್ನೂ ಓದಿ: ವಿದ್ಯುತ್ ಹಾಯಿಸಿ ಎರಡು ಜಿಂಕೆಗಳ ಬೇಟೆ – ಮೂವರು ಆರೋಪಿಗಳು ಅರೆಸ್ಟ್

