ಬೆಂಗಳೂರು: 2028 ರಲ್ಲಿ (2028 Assembly Elections) ಕರ್ನಾಟಕದಲ್ಲಿ ಮತ್ತೊಮ್ಮೆ ಭಾರತೀಯ ಜನತಾ ಪಕ್ಷದ (BJP) ಸರ್ಕಾರವನ್ನು ರಚಿಸುವ ಸಂಕಲ್ಪ ಮತ್ತು ಗುರಿಯೊಂದಿಗೆ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಮತ್ತು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹರೀಶ್ ದ್ವಿವೇದಿ (Harish Dwivedi) ಅವರು ತಿಳಿಸಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಳೆದ ಸುಮಾರು ಮೂರೂವರೆ ವರ್ಷಗಳಲ್ಲಿ ಕಾಂಗ್ರೆಸ್ (Congress) ಸರ್ಕಾರವು ಭ್ರಷ್ಟಾಚಾರದಿಂದ ಹಿಡಿದು ಸಾಮಾನ್ಯ ಜನರ ಸಮಸ್ಯೆಗಳನ್ನು ಸಂಪೂರ್ಣವಾಗಿ ಕಡೆಗಣಿಸಿದೆ. ಕಾಂಗ್ರೆಸ್ ನಾಯಕರು, ಶಾಸಕರು, ಸಂಸದರು ಹಾಗೂ ಸಚಿವರು ಹೇಗೆ ಲೂಟಿ ಮಾಡುತ್ತಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿದೆ. ಹಾಲಿನ ದರದಲ್ಲಿ ಭಾರಿ ಪ್ರಮಾಣದ ಏರಿಕೆ ಮಾಡಲಾಗಿದೆ; ಸುಮಾರು ಎಂಟು ರೂಪಾಯಿ ಹೆಚ್ಚಿಸಿದ್ದಾರೆ, ಮೊಸರಿನ ದರವನ್ನೂ ಏರಿಸಿದ್ದಾರೆ ಎಂದು ಆಕ್ಷೇಪಿಸಿದರು. ಇದನ್ನೂ ಓದಿ: SIR ಪರ ಬಿಜೆಪಿ ಅಭಿಯಾನ – ದೇಶವಿರೋಧಿ ಶಕ್ತಿಗಳ ವಿರುದ್ಧ ಜಾಗೃತಿ: ವಿಜಯೇಂದ್ರ
ಕಾಂಗ್ರೆಸ್ಗೆ ಸಾಮಾನ್ಯ ಜನರ ಹಿತಾಸಕ್ತಿಯನ್ನು ಪರಿಗಣಿಸುತ್ತಿಲ್ಲ. ಕಾಂಗ್ರೆಸ್ ಪಕ್ಷವು ಕೇವಲ ತನ್ನ ನಾಯಕರ ಅಭಿವೃದ್ಧಿ ಹಾಗೂ ಗಾಂಧಿ ಪರಿವಾರದ ಹಿತರಕ್ಷಣೆಯ ಚಿಂತೆಯಲ್ಲೇ ಮುಳುಗಿದೆ. ನಾವು ಮುಂಬರುವ ದಿನಗಳಲ್ಲಿ ಸಾರ್ವಜನಿಕ ಹಿತಾಸಕ್ತಿಯ ಎಲ್ಲಾ ವಿಷಯಗಳನ್ನು ಮುಂಚೂಣಿಗೆ ತಂದು ಜನರ ಬಳಿಗೆ ಹೋಗಲಿದ್ದೇವೆ ಎಂದರು.
ಬಿಜೆಪಿ, ರಾಜ್ಯ ಉಸ್ತುವಾರಿಯನ್ನಾಗಿ ಪಕ್ಷವು ನನ್ನನ್ನು ನೇಮಿಸಿದೆ. ನಾನು ಮೊದಲ ಬಾರಿಗೆ ಕರ್ನಾಟಕಕ್ಕೆ ಬಂದಿದ್ದೇನೆ. ನಿನ್ನೆ ರಾಜ್ಯಾಧ್ಯಕ್ಷರೊಂದಿಗೆ ನಾವೆಲ್ಲರೂ ರಾಜ್ಯ ಪದಾಧಿಕಾರಿಗಳ ಸಭೆ ಹಾಗೂ ಕೋರ್ ಕಮಿಟಿ ಸಭೆ ನಡೆಸಿದೆವು. ಅದೊಂದು ಪರಿಚಯಾತ್ಮಕ ಸಭೆಯಾಗಿತ್ತು. ಆ ಸಭೆಯಲ್ಲಿ ನಮ್ಮ ಸಂಘಟನೆಯ ಬಗ್ಗೆ ಮಾಹಿತಿ ಪಡೆದುಕೊಳ್ಳುವುದು ಮತ್ತು ಸಂಘಟನೆಯನ್ನು ಮತ್ತಷ್ಟು ಸಕ್ರಿಯಗೊಳಿಸುವುದು ಸೇರಿದಂತೆ ಹಲವು ಪ್ರಮುಖ ವಿಷಯಗಳ ಕುರಿತು ಚರ್ಚೆ ನಡೆಸಿದ್ದೇವೆ ಎಂದು ವಿವರಿಸಿದರು.
ಇಂದು ನಮ್ಮೆಲ್ಲರ ನೆಚ್ಚಿನ, ಪಕ್ಷದ ಅತ್ಯಂತ ಹಿರಿಯ ನಾಯಕರು, ಮಾಜಿ ಮುಖ್ಯಮಂತ್ರಿಗಳು ಹಾಗೂ ಭಾರತೀಯ ಜನತಾ ಪಕ್ಷದ ಸಂಸದೀಯ ಮಂಡಳಿಯ ಸದಸ್ಯರಾದ ಬಿ.ಎಸ್. ಯಡಿಯೂರಪ್ಪನವರನ್ನು ಭೇಟಿಯಾಗಿದ್ದೇನೆ. ಅವರ ನೇತೃತ್ವದಲ್ಲಿ ಬಿಜೆಪಿ ಕರ್ನಾಟಕದಲ್ಲಿ ವರ್ಷಗಳಿಂದ ಆಡಳಿತ ಹಾಗೂ ವಿರೋಧ ಪಕ್ಷವಾಗಿ ಅತ್ಯಂತ ಪ್ರಭಾವಿ ರೀತಿಯಲ್ಲಿ ಕೆಲಸ ಮಾಡಿದೆ. ಅವರ ಮಾರ್ಗದರ್ಶನ ಪಡೆದುಕೊಂಡಿದ್ದೇವೆ. ಮುಂಬರುವ ದಿನಗಳಲ್ಲಿ ನಾವೆಲ್ಲರೂ ಒಟ್ಟಾಗಿ ಕರ್ನಾಟಕದಲ್ಲಿ ಕಾಂಗ್ರೆಸ್ನ ಈ ದುರಾಡಳಿತದಿಂದ ಜನರಿಗೆ ಹೇಗೆ ಮುಕ್ತಿ ಕೊಡಿಸಬೇಕು ಎಂಬುದರ ಕುರಿತು ಚರ್ಚಿಸಿದ್ದೇವೆ ಎಂದು ಹೇಳಿದರು.
ಮತದಾರರ ಪಟ್ಟಿಯ ಶುದ್ಧೀಕರಣಕ್ಕಾಗಿ ಎಸ್ಐಆರ್
ಎಸ್ಐಆರ್ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಎಸ್ಐಆರ್ ಕೇವಲ ಮೋದಿಯವರ ಅಧಿಕಾರಾವಧಿಯಲ್ಲಿ ಮಾತ್ರ ನಡೆಯುತ್ತಿಲ್ಲ. ಪಂಡಿತ್ ಜವಾಹರಲಾಲ್ ನೆಹರೂ ಅವರಿಂದ ಹಿಡಿದು ಇಂದಿರಾ ಗಾಂಧಿಯವರವರೆಗೂ ಕಾಲಕಾಲಕ್ಕೆ ಎಸ್ಐಆರ್ ನಡೆಯುತ್ತಲೇ ಬಂದಿದೆ. ಎಸ್ಐಆರ್ ಏಕೆ ಮಾಡಲಾಗುತ್ತದೆ? ಯಾರಾದರೂ ಮೃತಪಟ್ಟಿದ್ದರೆ ಅವರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲು, ಯಾರಾದರೂ ವಾಸಸ್ಥಳ ಬದಲಾಯಿಸಿದ್ದರೆ ಅಥವಾ ಒಂದೇ ವ್ಯಕ್ತಿಯ ಹೆಸರು ಎರಡು ಕಡೆ ಮತದಾರರ ಪಟ್ಟಿಯಲ್ಲಿದ್ದರೆ ಅದನ್ನು ಸರಿಪಡಿಸಲು ಮಾಡಲಾಗುತ್ತದೆ. ಅಂದರೆ ಮತದಾರರ ಪಟ್ಟಿಯ ಶುದ್ಧೀಕರಣಕ್ಕಾಗಿ ಎಸ್ಐಆರ್ ಮಾಡಲಾಗುತ್ತದೆ ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷ ಚುನಾವಣೆಯಲ್ಲಿ ಸೋತಾಗ ಆತ್ಮಾವಲೋಕನ ಮಾಡಿಕೊಳ್ಳುವ ಬದಲು, ಚುನಾವಣಾ ಆಯೋಗ, ಇವಿಎಂ ಹಾಗೂ ಸುಪ್ರೀಂ ಕೋರ್ಟ್ನ್ನು ದೂಷಿಸುತ್ತದೆ. ಕಾಂಗ್ರೆಸ್ ಪಕ್ಷ ಎಂದಿಗೂ ದೇಶದ ಸಾಂವಿಧಾನಿಕ ಸಂಸ್ಥೆಗಳನ್ನು ಗೌರವಿಸುವುದಿಲ್ಲ. ಗಾಂಧಿ ಪರಿವಾರವೇ ಸರ್ವಸ್ವ ಎಂದು ಅವರು ಭಾವಿಸುತ್ತಾರೆ. ಆದರೆ ದೇಶದ ಪ್ರಜ್ಞಾವಂತ ಮತದಾರರು ಎಲ್ಲವನ್ನೂ ಗಮನಿಸುತ್ತಿದ್ದಾರೆ. ಇತ್ತೀಚೆಗೆ ನಡೆದ ಕರ್ನಾಟಕದ ನಾಲ್ಕೂ ಎಂಎಲ್ಸಿ ಸ್ಥಾನಗಳಲ್ಲಿ ಪ್ರಜ್ಞಾವಂತ ಮತದಾರರು, ಶಿಕ್ಷಕರು ಮತ್ತು ಪದವೀಧರರು ಬಿಜೆಪಿ-ಎನ್ಡಿಎ ಅಭ್ಯರ್ಥಿಗಳನ್ನು ಭರ್ಜರಿ ಅಂತರದಿಂದ ಗೆಲ್ಲಿಸುವ ಮೂಲಕ ಸ್ಪಷ್ಟ ಸಂದೇಶ ನೀಡಿದ್ದಾರೆ ಎಂದು ತಿಳಿಸಿದರು.
ಬಿಜೆಪಿ-ಜೆಡಿಎಸ್ ಮೈತ್ರಿ ಮುಂದುವರಿಯಲಿದೆಯೇ? ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರಸ್ತುತ ಮೈತ್ರಿ ಮುಂದುವರಿದಿದೆ. ಮೈತ್ರಿಯ ನಿರ್ಧಾರಗಳನ್ನು ಪಕ್ಷದ ವರಿಷ್ಠರು ತೆಗೆದುಕೊಳ್ಳುತ್ತಾರೆ. ಆ ಬಗ್ಗೆ ನಿರ್ಧರಿಸಲು ನಾನಿಲ್ಲಿ ಅಧಿಕೃತನಲ್ಲ. ಸದ್ಯಕ್ಕೆ ಮೈತ್ರಿ ಉತ್ತಮವಾಗಿಯೇ ಸಾಗುತ್ತಿದೆ ಎಂದರು.
ಬಿ.ವೈ. ವಿಜಯೇಂದ್ರ ಅವರೇ ನಮ್ಮ ಅಧ್ಯಕ್ಷರಾಗಿದ್ದಾರೆ. ಇವರ ನಾಯಕತ್ವದಲ್ಲೇ ನಾವೆಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುತ್ತಿದ್ದೇವೆ. ಇವರು ಯುವ ನಾಯಕರಾಗಿದ್ದು, ಇವರ ನೇತೃತ್ವದಲ್ಲಿ ಪಕ್ಷದ ಸಂಘಟನೆ ಮುನ್ನಡೆಯುತ್ತಿದೆ ಎಂದು ಇನ್ನೊಂದು ಪ್ರಶ್ನೆಗೆ ಉತ್ತರಿಸಿದರು. ಇದನ್ನೂ ಓದಿ: ಖಾಲಿ ಮಾತನಾಡುವ ಗಿರಾಕಿ ಅಲ್ಲ, ರಾಜ್ಯದ ಪ್ರಜಾ ಸೇವಕನಾಗಿ ನುಡಿದಂತೆ ನಡೆಯುತ್ತೇನೆ: ಡಿಕೆಶಿ
