ಬೆಳಗಾವಿ: ಆಸ್ತಿ ದಾಖಲೆ ಪಡೆಯಲು ಗ್ರಾಮ ಪಂಚಾಯಿತಿಗೆ (Belagavi) ಬಂದಿದ್ದ ತಂದೆ-ಮಗಳನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಅವರಾದಿ ಗ್ರಾಮದಲ್ಲಿ ನಡೆದಿದೆ.
ಮಾಜಿ ಯೋಧ ರುದ್ರಪ್ಪ ಕುಂದರಗಿ (67) ಹಾಗೂ ಅವರ ಪುತ್ರಿ ಶಶಿಕಲಾ ಕುಂದರಗಿ (26) ಹತ್ಯೆಯಾದ ದುರ್ದೈವಿ. ಘಟನೆಯಲ್ಲಿ ರುದ್ರಪ್ಪ ಅವರ ಕಾರು ಚಾಲಕನಿಗೂ ಗಂಭೀರ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ರುದ್ರಪ್ಪ ಹಾಗೂ ಅವರ ಅಣ್ಣತಮ್ಮಂದಿರ ನಡುವೆ ವ್ಯಾಜ್ಯವಿತ್ತು ಎನ್ನಲಾಗಿದೆ. ಆಸ್ತಿ ಪಾಲುದಾರಿಕೆಗೆ ಅರ್ಜಿ ಸಲ್ಲಿಸಲು ರುದ್ರಪ್ಪ ಗ್ರಾಮ ಪಂಚಾಯಿತಿಗೆ ಬಂದಿದ್ದ ವೇಳೆ ಈ ದಾಳಿ ನಡೆದಿದೆ ಎಂದು ಹೇಳಲಾಗಿದೆ.
ರುದ್ರಪ್ಪ ಗ್ರಾಮ ಪಂಚಾಯಿತಿಗೆ ಬಂದಿರುವ ವಿಚಾರ ತಿಳಿದು ಅವರ ಸಹೋದರರಾದ ಬಸಪ್ಪ ಕುಂದರಗಿ, ಸಂಗಪ್ಪ ಕುಂದರಗಿ ಹಾಗೂ ಸಂಗಪ್ಪ ಅವರ ಪುತ್ರ ಮಡಿವಾಳಪ್ಪ ಕುಂದರಗಿ ಸೇರಿ ದಾಳಿ ನಡೆಸಿದ್ದಾರೆ ಎನ್ನಲಾಗಿದೆ.
ಗ್ರಾಮ ಪಂಚಾಯಿತಿ ಒಳಗಡೆಯೇ ರುದ್ರಪ್ಪ ಅವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಲಾಗಿದೆ. ಈ ವೇಳೆ ತಂದೆಯನ್ನು ಬಿಡಿಸಲು ಮುಂದಾದ ಪುತ್ರಿ ಶಶಿಕಲಾ ಅವರ ಮೇಲೂ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆ ಮಾಡಲಾಗಿದೆ ಎನ್ನಲಾಗಿದೆ. ಇದನ್ನೂ ಓದಿ: ಪಪ್ಪಾಯ ಹಣ್ಣಿನಲ್ಲಿ ಮೂಡಿದ ಗಣೇಶಾಕೃತಿ – ರೈತ ಕುಟುಂಬದಲ್ಲಿ ಸಂತಸ
38 ಗುಂಟೆ ಆಸ್ತಿಗೆ ಸಂಬಂಧಿಸಿದಂತೆ ಮೂವರು ಸಹೋದರರ ನಡುವೆ ವ್ಯಾಜ್ಯವಿತ್ತು ಎನ್ನಲಾಗಿದೆ. ಆಸ್ತಿಯನ್ನು ಮೂವರಿಗೆ ಹಂಚಿಕೆ ಮಾಡುವಂತೆ ಕೋರ್ಟ್ ಆದೇಶ ನೀಡಿತ್ತು ಎನ್ನಲಾಗಿದೆ. ಆದರೆ, ರುದ್ರಪ್ಪ ಅವರಿಗೆ ಬಂದಿದ್ದ ಜಮೀನನ್ನು ಅವರು ಮೊದಲೇ ಮಾರಿಕೊಂಡಿದ್ದು, ಉಳಿದ ಜಮೀನಿನಲ್ಲೂ ತಮಗೆ ಪಾಲು ಬೇಕು ಎಂದು ಪಟ್ಟು ಹಿಡಿದಿದ್ದರು ಎನ್ನಲಾಗಿದೆ. ರುದ್ರಪ್ಪ ಅವರ ಹೆಸರಿನಲ್ಲಿ ಆಸ್ತಿ ಇರುವ ವಿಚಾರವೂ ಜಗಳಕ್ಕೆ ಕಾರಣವಾಗಿತ್ತು ಎನ್ನಲಾಗಿದೆ.
ಇಂದು ಜಮೀನು ದಾಖಲೆ ಮಾಡಿಸಲು ರುದ್ರಪ್ಪ ಗ್ರಾಮ ಪಂಚಾಯಿತಿಗೆ ಬಂದಿದ್ದರು. ಧಾರವಾಡದಿಂದ ಕಾರು ಬಾಡಿಗೆ ಪಡೆದು ಅವರು ಗ್ರಾಮಕ್ಕೆ ಬಂದಿರುವ ವಿಚಾರ ತಿಳಿದ ಬಳಿಕ ಸಹೋದರರು ಹಾಗೂ ಅವರ ಪುತ್ರ ಸೇರಿ ದಾಳಿ ನಡೆಸಿದ್ದಾರೆ ಎನ್ನಲಾಗಿದೆ.
ಕೊಡಲಿ, ಕುಡಗೋಲು ಸೇರಿದಂತೆ ಮಾರಕಾಸ್ತ್ರಗಳಿಂದ ರುದ್ರಪ್ಪ ಹಾಗೂ ಅವರ ಪುತ್ರಿ ಶಶಿಕಲಾ ಮೇಲೆ ದಾಳಿ ನಡೆದಿದ್ದು, ಇಬ್ಬರೂ ಮೃತಪಟ್ಟಿದ್ದಾರೆ. ಘಟನೆಯ ಕುರಿತು ಕಿತ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.ಇದನ್ನೂ ಓದಿ: ಹುಲಿಬೀರ ಟ್ರೈಲರ್ ಬಿಡುಗಡೆ ಮಾಡಿದ ಹಿರಿಯ ನಟ ಶಶಿಕುಮಾರ್

