ಕಾಲಿವುಡ್ ಸ್ಟಾರ್ ಜೋಡಿ ಸೂರ್ಯ ಹಾಗೂ ಜ್ಯೋತಿಕ ಉತ್ತಮ ದಾಂಪತ್ಯಕ್ಕೆ ಉದಾಹರಣೆಯಾಗಿ ನಿಲ್ಲುವ ದಂಪತಿ. ಇದೀಗ ಸೆಪ್ಟಂಬರ್ 11 ರಂದು ಈ ದಂಪತಿ 20 ವರ್ಷದ ಮದುವೆ ವಾರ್ಷಿಕೋತ್ಸವದ ಖುಷಿಯಲ್ಲಿ ಮತ್ತೊಮ್ಮೆ ಮದುವೆಯ ಸಂಭ್ರಮವನ್ನ ರೀಕಾಲ್ ಮಾಡಿಕೊಂಡಿದ್ದಾರೆ. ಸ್ಕಾಟ್‌ಲ್ಯಾಂಡ್ ದೇಶದಲ್ಲಿ ಕ್ರಿಶ್ಚಿಯನ್ ಸಂಪ್ರದಾಯದಂತೆ ವಿವಾಹ ಪ್ರತಿಜ್ಞೆ ರಿನೀವಲ್ ಮಾಡಿದ್ದಾರೆ.
ಕ್ರಿಶ್ಚಿಯನ್ ವಧು ವರನ ಪೋಷಾಕಿನಲ್ಲಿ ಮಕ್ಕಳು ಹಾಗೂ ಕುಟುಂಬಸ್ಥರ ಸಮ್ಮುಖದಲ್ಲಿ ಜ್ಯೋತಿಕಾ, ಸೂರ್ಯ ಚರ್ಚ್ವೊಂದರಲ್ಲಿ ಮತ್ತೊಮ್ಮೆ ದಾಂಪತ್ಯದ ಪ್ರತಿಜ್ಞಾ ವಿಧಿ ತೆಗೆದುಕೊಂಡಿದ್ದಾರೆ. ತಂದೆ ತಾಯಿಯನ್ನ ಮಕ್ಕಳೇ ವಧು ವರರಾಗಿ ಸಿಂಗರಿಸಿ ಚರ್ಚ್ಗೆ ಕರೆದುಕೊಂಡು ಹೋಗಿರೋದು ವಿಶೇಷ. ಈ ಸಂದರ್ಭದಲ್ಲಿ ಸೂರ್ಯ ಸಹೋದರ ಕಾರ್ತಿ ಕೂಡ ಇದ್ದರು. 2006ರ ಸೆಪ್ಟಂಬರ್ 6ರಂದು ಜ್ಯೋತಿಕ ತಮ್ಮ ವೃತ್ತಿ ಬದುಕಿನ ಪೀಕ್‌ನಲ್ಲಿದ್ದಾಗಲೇ ಸೂರ್ಯರನ್ನು ಕೈ ಹಿಡಿದರು. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಇದೀಗ ಎರಡು ದಶಕ ಪೂರೈಸಿರೋ ಮಾದರಿ ದಂಪತಿ ಇಲ್ಲಿಂದ ಮದುವೆ ಪ್ರತಿಜ್ಞಾ ವಿಧಿಯನ್ನು ನವೀಕರಣ ಮಾಡಿಕೊಂಡಿದ್ದಾರೆ.
ಇತ್ತೀಚೆಗೆ ಟ್ರೆಂಡ್‌ಗೆ ಬಂದಿರುವ ಸಂಪ್ರದಾಯ ಇದಾಗಿದ್ದು ಇದನ್ನು `ವಿವಾಹದ ಪ್ರತಿಜ್ಞೆಗಳನ್ನು ನವೀಕರಿಸಿಕೊಳ್ಳುವಿಕೆ’ ಎನ್ನುತ್ತಾರೆ. ಸೂರ್ಯ , ಜ್ಯೋತಿಕ ಹೀಗೆ ವೋವ್ ರಿನೀವಲ್ ಮಾಡಿಸಿಕೊಳ್ಳುವ ಮೂಲಕ ಟ್ರೆಂಡ್‌ಗೆ ಇನ್ನಷ್ಟು ಹೈಪ್ ಕೊಟ್ಟಿದ್ದಂತೂ ನಿಜ. ವೋವ್ ರಿನೀವಲ್ ವೀಡಿಯೋವನ್ನ ಪೋಸ್ಟ್ ಮಾಡಿರುವ ಜ್ಯೋತಿಕ ಈ ಬಗ್ಗೆ ಸುದೀರ್ಘವಾಗಿ ಬರಹದ ಮೂಲಕ ಮಾಹಿತಿ ಕೊಟ್ಟಿದ್ದಾರೆ.

ವೋವ್ ರಿನೀವಲ್ ಕುರಿತು ಜ್ಯೋತಿಕ ಹೇಳಿದ್ದೇನು?
ನಮ್ಮ 20 ವರ್ಷಗಳ ಪ್ರೀತಿ ಮತ್ತು ಜಗಳದ ಸಂಭ್ರಮದಲ್ಲಿ, ನಮ್ಮ ವಿವಾಹದ ಪ್ರತಿಜ್ಞೆಗಳನ್ನು ನವೀಕರಿಸಿಕೊಳ್ಳುವ ಕ್ಷಣವಿದು. ಇದು ಪರಿಪೂರ್ಣ ದಾಂಪತ್ಯದ ಸಂಭ್ರಮವಲ್ಲ, ಬದಲಿಗೆ ಇದು ಅಪರಿಪೂರ್ಣತೆಗಳು, ಹೊಂದಾಣಿಕೆಗಳು, ಪರಸ್ಪರ ತಿಳುವಳಿಕೆ, ತ್ಯಾಗ ಮತ್ತು ನಿಸ್ವಾರ್ಥ ಪ್ರೀತಿಯ ಸಂಭ್ರಮ. ಇದು `ನಮ್ಮ’ ಸಂಭ್ರಮ ಅಂದರೆ, ಒಬ್ಬರಿಗೊಬ್ಬರು ನಾವು ರೂಪಿಸಿಕೊಂಡಿರುವ ವ್ಯಕ್ತಿತ್ವಗಳ ಸಂಭ್ರಮ. ಎಂಥಹ ವಿಪರ್ಯಾಸ ಅಲ್ಲವೇ? ವಾಸ್ತವದಿಂದ ಬಹುದೂರವೆಂದು ಭಾವಿಸಿದ್ದ ಕನಸೊಂದು, ಈಗ ನನ್ನ ಇಡೀ ಜೀವನವನ್ನೇ ಅದರಲ್ಲಿ ಕಳೆಯಲು ಬಯಸುವಂತಹ ಸುಂದರ ವಾಸ್ತವವಾಗಿದೆ. ಹಾಗಾಗಿ, ನನ್ನ ಪ್ರತಿಜ್ಞೆಗಳು ಹೀಗಿವೆ, ನಾನು ಸಂತೋಷವಾಗಿರಲು ಪ್ರತಿಜ್ಞೆ ಮಾಡುತ್ತೇನೆ, ಏಕೆಂದರೆ ಜೀವನದ ಸಕಾರಾತ್ಮಕ ಅಂಶಗಳನ್ನು ಮಾತ್ರ ನೋಡಲು ನಾನು ಆಯ್ಕೆ ಮಾಡಿಕೊಂಡಿದ್ದೇನೆ. ನಾನು ಜೀವನವನ್ನು ಸಂಭ್ರಮಿಸಲು ಪ್ರತಿಜ್ಞೆ ಮಾಡುತ್ತೇನೆ. ಏಕೆಂದರೆ, ತನ್ನನ್ನು ತಾನು ಪ್ರೀತಿಸಿಕೊಳ್ಳುವುದಕ್ಕಿಂತ ಹೆಚ್ಚಾಗಿ ನಿಮ್ಮನ್ನು ಗೌರವಿಸುವ ವ್ಯಕ್ತಿ ಜೊತೆಗಿದ್ದಾಗ, ಜೀವನವೇ ಒಂದು ಸುಂದರ ಉಡುಗೊರೆಯಾಗಿರುತ್ತದೆ.

ನನ್ನ ಸೂರ್ಯನಿಗೋಸ್ಕರ ಪ್ರತಿಜ್ಞೆ ಮಾಡುತ್ತೇನೆ. ನನ್ನ ಸೂರ್ಯನಿಗಾಗಿ ನಾನು ಯಾವಾಗಲೂ ಆ `ಅಪರಿಪೂರ್ಣ’ ಪತ್ನಿಯಾಗಿಯೇ ಉಳಿಯಲು ಪ್ರತಿಜ್ಞೆ ಮಾಡುತ್ತೇನೆ. ಜಗಳವಾಡಿ, ಮತ್ತೆ ರಾಜಿ ಮಾಡಿಕೊಂಡು, ಪ್ರತಿ ಬಾರಿಯೂ ನಿನ್ನೊಂದಿಗೆ ಇನ್ನಷ್ಟು ಹತ್ತಿರವಾಗುವ ಪತ್ನಿಯಾಗಿರುತ್ತೇನೆ. ನಮ್ಮ ಸ್ನೇಹವನ್ನು ಎಲ್ಲಕ್ಕಿಂತ ಹೆಚ್ಚಾಗಿ ಗೌರವಿಸಲು ನಾನು ಪ್ರತಿಜ್ಞೆ ಮಾಡುತ್ತೇನೆ. ಏಕೆಂದರೆ ಸಮಾನ ಮನಸ್ಕರು, ಆಪ್ತರು, ಹರಟೆ ಹೊಡೆಯುವ ಸಂಗಾತಿ ಮತ್ತು ಅತ್ಯುತ್ತಮ ಸ್ನೇಹಿತ, ಇವೆಲ್ಲವೂ ಒಬ್ಬನೇ ವಿಶೇಷ ವ್ಯಕ್ತಿಯಲ್ಲಿ ಸಿಗುವುದು ಅಪರೂಪ. ಆ ವ್ಯಕ್ತಿಯೇ ನನ್ನ ಪತಿ ಮತ್ತು ನನ್ನ ಮಕ್ಕಳ ತಂದೆ. ಹಾಗಾಗಿ, ನಮ್ಮ ಮುಂದಿನ ಇಪ್ಪತ್ತು ವರ್ಷಗಳಿಗೆ ಶುಭವಾಗಲಿ, ಅಪರಿಪೂರ್ಣರಾದ ನಾವು ಪರಿಪೂರ್ಣ ತಿಳುವಳಿಕೆಯೊಂದಿಗೆ ಮುಂದೆ ಸಾಗುತ್ತೇವೆ ಎಂದು ಪ್ರತಿಜ್ಞೆ ಮಾಡುತ್ತೇನೆ ಎಂದು ಜ್ಯೋತಿಕಾ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

