ಹಾಸನ: ಲಾಡ್ಜ್ನಲ್ಲಿ (Lodge) ಯುವತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಹಾಸನ (Hassan) ಜಿಲ್ಲೆ ಸಕಲೇಶಪುರ (Sakleshpura) ತಾಲೂಕಿನ ವಳಲಹಳ್ಳಿ ಕೂಡಿಗೆಯಲ್ಲಿ ನಡೆದಿದೆ.
ವರ್ಷ (23) ಮೃತ ಯುವತಿ. ಬೆಂಗಳೂರಿನ ನಾಗಸಂದ್ರದ ನಿವಾಸಿ ವರ್ಷ ಶುಕ್ರವಾರ ಪ್ರಿಯಕರ ರಘು ಹಾಗೂ ಸ್ನೇಹಿತ ದರ್ಶನ್ ಜೊತೆ ಟ್ರಿಪ್ಗೆಂದು ಬಂದಿದ್ದಳು. ಈ ಮೂವರು ಶನಿವಾರ, ಭಾನುವಾರ ಹಾಗೂ ಸೋಮವಾರ ಬೆಟ್ಟದ ಭೈರವೇಶ್ವರ, ಮಜಗಹಳ್ಳಿ ಫಾಲ್ಸ್ ಸೇರಿದಂತೆ ಹಲವೆಡೆ ಸುತ್ತಾಡಿದ್ದರು. ಅಲ್ಲದೇ ವಳಲಹಳ್ಳಿ ಕೂಡಿಗೆಯಲ್ಲಿರುವ ಲಾಡ್ಜ್ನಲ್ಲಿ ಒಂದೇ ರೂಂನಲ್ಲಿ ಮೂವರು ತಂಗಿದ್ದರು. ಇದನ್ನೂ ಓದಿ: ಇತಿಹಾಸದಲ್ಲೇ ಮೊದಲ ಬಾರಿಗೆ ಮೆಕ್ಕಾದಲ್ಲಿ ವೈಮಾನಿಕ ದಾಳಿ ಎಚ್ಚರಿಕೆ- ಹೌತಿ ಡ್ರೋನ್ ಹೊಡೆದುರುಳಿಸಿದ ಸೌದಿ

ಮಂಗಳವಾರ ಲಾಡ್ಜ್ನಲ್ಲಿ ಸ್ನಾನಕ್ಕೆ ತೆರಳಿದ್ದ ವೇಳೆ ವರ್ಷ ಮೃತಪಟ್ಟಿದ್ದಾಳೆ. ಕೂಡಲೇ ರಘು ಹಾಗೂ ದರ್ಶನ್ ವರ್ಷಳನ್ನು ಸಕಲೇಶಪುರ ತಾಲೂಕು ಕ್ರಾಫರ್ಡ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಯುವತಿ ಮೃತಪಟ್ಟ ಕುರಿತು ಆಸ್ಪತ್ರೆ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಬೆಟ್ಟದಲ್ಲಿ ಅಡಗಿದ್ದ `ಸುಡೋ ನಕ್ಸಲ್’ ಕನಕಲಬಂಡೆ ವೆಂಕಟೇಶ್ ಬಂಧನ

