ಕಾಲು ನೋವು ಕಾಣಿಸಿಕೊಂಡ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದ ಬಿಗ್ ಬಾಸ್ ಸೀಸನ್ 13ರ (Bigg Boss Kannada Season 13) ಸ್ಪರ್ಧಿ ಹಾಗೂ ನಿರ್ದೇಶಕ ಓಂ ಪ್ರಕಾಶ್ ರಾವ್ ಬಿಗ್ ಬಾಸ್ ಮನೆಯಲ್ಲಿ ಅರ್ಧಕ್ಕೆ ಆಟ ನಿಲ್ಲಿಸಿ ಮನೆಯಿಂದ ಹೊರಬಂದಿದ್ದಾರೆ. ಈ ಬೆನ್ನಲ್ಲೇ ಬಿಗ್ ಬಾಸ್ ತಂಡದ ವಿರುದ್ಧ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
`ಪಬ್ಲಿಕ್ ಟಿವಿʼ (Public TV) ಜೊತೆಗಿನ ಸಂದರ್ಶನದಲ್ಲಿ ಮಾತನಾಡಿದ ಓಂ ಪ್ರಕಾಶ್ ರಾವ್ (Om Prakash Rao) ಅವರು, ಊಟ ತಿಂಡಿಯಿಂದ ನನ್ನ ಆರೋಗ್ಯ ಹಾಳಾಯ್ತು. ಯಾಕೆ ಹೀಗೆ ಮಾಡಿದ್ರು ಗೊತ್ತಿಲ್ಲ. ಹೆಚ್ಚು ಕಡಿಮೆಯಾಗಿದ್ರೆ ಸ್ಟ್ರೋಕ್ ಆಗುವ ಸಾಧ್ಯತೆ ಇತ್ತು ಅಂತ ಬಿಗ್ ಬಾಸ್ ತಂಡದ ವಿರುದ್ಧ ಬೇಸರ ವ್ಯಕ್ತಪಡಿಸಿದರು.

ನಾನು ಕಾರ್ಯಕ್ರಮಕ್ಕೆ ಹೋಗುವ ಮುಂಚೆಯೇ ತಂಡಕ್ಕೆ ಹೇಳಿದ್ದೆ. ಶುಗರ್ ಇದೆ, ಊಟ ತಿಂಡಿ ವಿಚಾರವಾಗಿ ಸರಿ ಇರಬೇಕು ಅಂತ. ಆದರೆ ಯಾಕೆ ಹೀಗೆ ಮಾಡಿದ್ರು ಗೊತ್ತಿಲ್ಲ. ಹೆಚ್ಚು ರೈಸನ್ನೇ ಕೊಟ್ಟರು. ಶುಗರ್ ಜಾಸ್ತಿ ಆಯ್ತು. ಶುಗರ್ 400 ದಾಟಿದೆ, ಬಿಪಿ 180/90 ಗೆ ಹೋಗಿದೆ. ಹೆಚ್ಚು ಕಡಿಮೆಯಾಗಿದ್ರೆ ಸ್ಟ್ರೋಕ್ ಆಗ್ತಿತ್ತು ಅಂತ ವೈದ್ಯರು ಹೇಳಿದ್ರು ಅಂತ ʻಪಬ್ಲಿಕ್ ಟಿವಿʼಗೆ ತಿಳಿಸಿದ್ರು.
ನಮಗೆ ಹೆಚ್ಚು ಕಡಿಮೆಯಾಗಿದ್ರೆ ಯಾರು ಜವಾಬ್ದಾರರು? ಈ ವಿಚಾರವಾಗಿ ನನಗೆ ಬೇಜಾರಿದೆ. ಎರಡೇ ವಾರಕ್ಕೆ ವಾಪಸ್ ಬಂದೇ ಅನ್ನೋ ಬೇಸರ ಕೂಡ ಇದೆ. ಒಳಗೆ ಆರೋಗ್ಯ ಸ್ವಲ್ಪ ಏರು ಪೇರಾಯ್ತು. ಕೂಡಲೇ ಆಸ್ಪತ್ರೆಗೆ ಕರೆ ತಂದರು. ಬಳಿಕ ಫ್ಯಾಮಿಲಿ ಡಾಕ್ಟರ್ ಜೊತೆ ಮಾತನಾಡಿ ಇಲ್ಲಿಗೆ ಶಿಫ್ಟ್ ಆದೆ. 15 ದಿನ ಚಿಕಿತ್ಸೆ ಗೆ ಹೇಳಿದ್ದಾರೆ. 15 ದಿನ ಆದ್ಮೇಲೆ ಆರೋಗ್ಯ ಬಗ್ಗೆ ವೈದ್ಯರ ಸಲಹೆ ಪಡೆದು, ಮತ್ತೆ ಅವಕಾಶ ಬಂದರೆ ಏನ್ ಮಾಡೋದು ಅಂತ ಯೋಚನೆ ಮಾಡುತ್ತೇನೆ ಅಂತ ತಿಳಿಸಿದ್ರು.
ನನ್ನೊಬ್ಬನಿಗೆ ಪ್ರತೇಕ ಆಹಾರ ಕಳುಹಿಸೋದು ಬಿಗ್ ಬಾಸ್ ತಂಡಕ್ಕೆ ಕಷ್ಟ ಆಗಿರಬಹುದು. ಆದ್ರೆ ನಾನು ನನ್ನ ಆರೋಗ್ಯ ಆಹಾರದ ಬಗ್ಗೆ ಮುಂಚೆಯೇ ಹೇಳಿದ್ದೆ. ಆದರೂ ಹೀಗೆ ಮಾಡಿದ್ದು, ಬೇಸರವಾಗಿದೆ. ಜನರ ಬೇಡಿಕೆಯಿಂದಲೇ ನಾನು ಒಳಗೆ ಹೋದೆ, ಆದರೆ ಆರೋಗ್ಯ ಕೈಕೊಟ್ಟು ಆಚೆ ಬರಬೇಕಾಯ್ತು. ಸುದೀಪ್ ಸರ್ ಕೂಡ ಬೆಳಗ್ಗೆ ಕರೆ ಮಾಡಿದ್ರು. ನಾನು ಚೆಕಪ್‌ಗೆ ಹೋಗಿದ್ದೆ ಮಾತನಾಡೋಕೆ ಆಗ್ಲಿಲ್ಲ. ಮತ್ತೆ ಅವರ ಜೊತೆ ಮಾತನಾಡುತ್ತೇನೆ ಎಂದು ಹೇಳಿದ್ರು.

