ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ (Vijay) ಅವರ 4 ದಿನಗಳ ಬ್ರಿಟನ್ ಪ್ರವಾಸದ ವೇಳೆ ರಾಜ್ಯಕ್ಕೆ ಸುಮಾರು 12,300 ಕೋಟಿ ರೂ. ಮೌಲ್ಯದ ಹೂಡಿಕೆ ಬದ್ಧತೆಗಳು ಲಭಿಸಿವೆ. ಈ ಯೋಜನೆಗಳ ಮೂಲಕ ಉತ್ಪಾದನೆ, ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸುಮಾರು 10,000 ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ ಎಂದು ಸೋಮವಾರ ತಮಿಳುನಾಡು ಸರ್ಕಾರ ತಿಳಿಸಿದೆ.
ವಿಜಯ್ ಅವರ ಬ್ರಿಟನ್ ಪ್ರವಾಸದ (UK Trip) ಉದ್ದೇಶ ಮತ್ತು ಪ್ರವಾಸದ ವೇಳಾಪಟ್ಟಿಯನ್ನ ಪ್ರತಿಪಕ್ಷಗಳು ಪ್ರಶ್ನಿಸುತ್ತಿರುವ ನಡುವೆಯೇ ಈ ಹೂಡಿಕೆ ಒಪ್ಪಂದಗಳು ಘೋಷಣೆಯಾಗಿವೆ.

ವಿಶೇಷವಾಗಿ ನಟ ಅಜಿತ್ ಕುಮಾರ್ (Ajit Kumar) ಭಾಗವಹಿಸಿದ್ದ ʻಲೆ ಮ್ಯಾನ್ಸ್ ಕಪ್ʼ ಕಾರ್ಯಕ್ರಮ ನಡೆದ ಸಿಲ್ವರ್‌ಸ್ಟೋನ್ ಸರ್ಕ್ಯೂಟ್‌ನಲ್ಲಿ ವಿಜಯ್ ಮತ್ತು ನಟಿ ತ್ರಿಷಾ ಕಾಣಿಸಿಕೊಂಡಿದ್ದ ಫೋಟೋಗಳು ಬಹಿರಂಗವಾದ ಬಳಿಕ ಪ್ರತಿಪಕ್ಷಗಳ ಟೀಕೆ ಮತ್ತಷ್ಟು ತೀವ್ರಗೊಂಡಿತ್ತು.
11,000 ಕೋಟಿ ಹೂಡಿಕೆ ಮಾಡಲಿರುವ ಮದರ್ಸನ್ ಸಂಸ್ಥೆ
ಅತಿದೊಡ್ಡ ಹೂಡಿಕೆಯು ಸಮ್ವರ್ಧನಾ ಮದರ್ಸನ್ ಇಂಟರ್‌ನ್ಯಾಷನಲ್ ಲಿಮಿಟೆಡ್‌ನಿಂದ ಬಂದಿದೆ. ಸಂಸ್ಥೆಯು ಗೈಡನ್ಸ್ ತಮಿಳುನಾಡು ಹಾಗೂ ತನ್ನ ಯುರೋಪ್ ಮತ್ತು ಬ್ರಿಟನ್ ಮೂಲದ ಜಂಟಿ ಉದ್ಯಮ ಸಂಸ್ಥೆಗಳೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ.
ಮುಂದಿನ ಐದು ವರ್ಷಗಳಲ್ಲಿ ತಮಿಳುನಾಡಿನಲ್ಲಿ ಸಮಗ್ರ ವಿನ್ಯಾಸ, ಎಂಜಿನಿಯರಿಂಗ್, ಉತ್ಪಾದನೆ, ಅಸೆಂಬ್ಲಿ ಮತ್ತು ಲಾಜಿಸ್ಟಿಕ್ಸ್ ಸೌಲಭ್ಯಗಳನ್ನು ಸ್ಥಾಪಿಸಲು ಸಂಸ್ಥೆ ಸುಮಾರು 11,000 ಕೋಟಿ ಹೂಡಿಕೆ ಮಾಡಲಿದೆ. ಈ ಯೋಜನೆಯಿಂದ ಸುಮಾರು 7,000 ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ.

ಗ್ಲೋಬಲ್ ಕ್ಯಾಪಬಿಲಿಟಿ ಸೆಂಟರ್‌ಗೆ 1,000 ಕೋಟಿ
ಬ್ರಿಟನ್ ಪ್ರಧಾನ ಕಚೇರಿ ಹೊಂದಿರುವ ಜಾಗತಿಕ ಸಂವಹನ ಕಂಪನಿಯೊಂದು ತಮಿಳುನಾಡಿನಲ್ಲಿ ಗ್ಲೋಬಲ್ ಕ್ಯಾಪಬಿಲಿಟಿ ಸೆಂಟರ್ ಸ್ಥಾಪಿಸಲು ಗೈಡನ್ಸ್ ತಮಿಳುನಾಡಿನೊಂದಿಗೆ ಮತ್ತೊಂದು ಒಪ್ಪಂದಕ್ಕೆ ಸಹಿ ಹಾಕಿದೆ.
ಸರ್ಕಾರದ ಪ್ರಕಟಣೆಯಲ್ಲಿ ಕಂಪನಿಯ ಹೆಸರನ್ನು ಬಹಿರಂಗಪಡಿಸಲಾಗಿಲ್ಲ. ಆದರೆ ಈ ಕೇಂದ್ರಕ್ಕಾಗಿ ಸುಮಾರು 1,000 ಕೋಟಿ ಹೂಡಿಕೆ ಮಾಡಲಿದ್ದು, 2,000 ಕ್ಕೂ ಹೆಚ್ಚು ಉದ್ಯೋಗಗಳು ಸೃಷ್ಟಿಯಾಗಲಿವೆ. ಚೆನ್ನೈನ ಮೌಂಟ್ ಪೂನಮಲ್ಲಿ ರಸ್ತೆ ಮಾರ್ಗದಲ್ಲಿ ಇತ್ತೀಚೆಗೆ ಘೋಷಿಸಲಾದ GCC ಕಾರಿಡಾರ್‌ನಲ್ಲಿ ಈ ಕೇಂದ್ರ ಸ್ಥಾಪನೆಯಾಗಲಿದೆ.
ಚೆನ್ನೈ, ತಿರುಚಿರಾಪಳ್ಳಿಯಲ್ಲಿ ಸಿಗ್ಮಾ ಟೆಕ್ನಾಲಜಿ ವಿಸ್ತರಣೆ
ಸ್ವೀಡನ್ ಮೂಲದ ಸಿಗ್ಮಾ ಟೆಕ್ನಾಲಜಿ ಗ್ರೂಪ್ ತನ್ನ ಭಾರತೀಯ ಘಟಕ ಶ್ರೀಯಾ ಸೊಲ್ಯೂಷನ್ಸ್ ಮೂಲಕ ಚೆನ್ನೈ ಮತ್ತು ತಿರುಚಿರಾಪಳ್ಳಿಯಲ್ಲಿರುವ ಗ್ಲೋಬಲ್ ಕ್ಯಾಪಬಿಲಿಟಿ ಸೆಂಟರ್‌ಗಳನ್ನು ವಿಸ್ತರಿಸಲು ಮತ್ತೊಂದು ಒಪ್ಪಂದ ಮಾಡಿಕೊಂಡಿದೆ.
‘ಪ್ರತಿ ಹೂಡಿಕೆಯೂ ಆರ್ಥಿಕತೆಯನ್ನ ಬಲಪಡಿಸುತ್ತದೆ’
ತಮಿಳುನಾಡಿನ ಕೈಗಾರಿಕಾ ಮತ್ತು ತಂತ್ರಜ್ಞಾನ ಆಧಾರವನ್ನ ವಿಸ್ತರಿಸುವ ಸರ್ಕಾರದ ಪ್ರಯತ್ನದ ಭಾಗವಾಗಿಯೇ ಈ ಹೂಡಿಕೆಗಳು ಬಂದಿವೆ. ಪ್ರತಿಯೊಂದು ಹೂಡಿಕೆಯೂ ನಮ್ಮ ಆರ್ಥಿಕತೆಯನ್ನು ಬಲಪಡಿಸುತ್ತದೆ. ಪ್ರತಿಯೊಂದು ಉದ್ಯೋಗವೂ ಒಂದು ಕುಟುಂಬವನ್ನು ಬಲಪಡಿಸುತ್ತದೆ. ಪ್ರತಿಯೊಂದು ಹೊಸ ಸಾಮರ್ಥ್ಯವೂ ತಮಿಳುನಾಡನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ಕೈಗಾರಿಕಾ ಸಚಿವೆ ಎಸ್. ಕೀರ್ತನಾ ಎಕ್ಸ್‌ನಲ್ಲಿ ತಿಳಿಸಿದ್ದಾರೆ.

