ರಾಮನಗರ: ರಾಜ್ಯದ ಜನತೆಗೆ ಕರ್ನಾಟಕ ಸರ್ಕಾರದ ಪರವಾಗಿ ಹಾಗೂ ವೈಯಕ್ತಿಕವಾಗಿ ಗೌರಿ-ಗಣೇಶ ಹಬ್ಬದ ಶುಭಾಶಯಗಳನ್ನು ಕೋರಿದ ಸಿಎಂ ಡಿ.ಕೆ. ಶಿವಕುಮಾರ್ (DK Shivakumar), ಈ ವರ್ಷ ರಾಜ್ಯದಲ್ಲಿ ಭೀಕರ ಬರಗಾಲವಿದ್ದು ಎಲ್ಲ ವಿಘ್ನಗಳನ್ನು ಆ ಗಣಪತಿ ನಿವಾರಿಸಲಿ ಎಂದು ಪ್ರಾರ್ಥಿಸಿದ್ದಾರೆ.
ಈ ಕುರಿತು ಕನಕಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದ ಅನೇಕ ಕಡೆ ಖುದ್ದಾಗಿ ಭೇಟಿ ನೀಡಿ ಪರಿಶೀಲಿಸಿದ್ದು, ಸುಮಾರು 200ಕ್ಕೂ ಹೆಚ್ಚು ತಾಲೂಕುಗಳಲ್ಲಿ ತೀವ್ರ ಬರಗಾಲ ಆವರಿಸಿದೆ. ಅಂತರ್ಜಲ ಮಟ್ಟ ಭಾರಿ ಪ್ರಮಾಣದಲ್ಲಿ ಕುಸಿದಿದ್ದು, ಬೆಳೆಗಳು ಸಂಪೂರ್ಣ ನಾಶವಾಗಿವೆ. ಇದರ ಜೊತೆಗೆ ವಿದ್ಯುತ್ ಅಭಾವವೂ ಎದುರಾಗುವ ಆತಂಕವಿದೆ. ಹೀಗಾಗಿ ಪ್ರತಿ ಯೂನಿಟ್ಗೆ 11 ರಿಂದ 13 ರೂಪಾಯಿ ಪಾವತಿಸಿ ವಿದ್ಯುತ್ ಖರೀದಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಈ ಬಗ್ಗೆ ನೆರೆ ರಾಜ್ಯಗಳೊಂದಿಗೆ ಮಾತುಕತೆ ನಡೆಸುವಂತೆ ಇಂಧನ ಸಚಿವರಿಗೆ ಸೂಚನೆ ನೀಡಲಾಗಿದೆ ಎಂದರು. ಇದನ್ನೂ ಓದಿ: ತಾವರೆಕೆರೆ ಮೆಟ್ರೋ ನಿಲ್ದಾಣಕ್ಕೆ ‘ಬಿಸ್ಮಿಲ್ಲಾ ನಗರ’ ಅಂತ ನಾಮಕರಣಕ್ಕೆ ಮನವಿ
ಹಿಂದೆ ತಮ್ಮ ಅಧಿಕಾರಾವಧಿಯಲ್ಲಿ ಸಾಕಷ್ಟು ವಿದ್ಯುತ್ ಉತ್ಪಾದನೆ ಮಾಡಲಾಗಿತ್ತು ಹಾಗೂ ಯಾವುದೇ ಲೋಡ್ ಶೆಡ್ಡಿಂಗ್ ಎದುರಾಗಿರಲಿಲ್ಲ. ಆದರೆ, ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ವಿದ್ಯುತ್ ಉತ್ಪಾದನೆ ಆಗಲಿಲ್ಲ ಮತ್ತು ಖಾಸಗಿಯವರಿಗೂ ಶಕ್ತಿ ತುಂಬುವ ಕೆಲಸ ಮಾಡಲಿಲ್ಲ, ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಇಂಧನ ಸಚಿವ ಕೆ.ಜೆ.ಜಾರ್ಜ್ ಹೊಸ ಮಾದರಿಯ ಯೋಜನೆಗಳನ್ನು ಕೈಗೆತ್ತಿಕೊಂಡಿದ್ದಾರೆ. ಸ್ಥಗಿತಗೊಂಡಿದ್ದ ಕಲ್ಲಿದ್ದಲು ವಿದ್ಯುತ್ ಉತ್ಪಾದನೆಯನ್ನು ಮರುಪ್ರಾರಂಭಿಸಲಾಗುತ್ತಿದೆ. ಪ್ರಸ್ತುತ ಒನ್ ನೇಷನ್ ಒನ್ ಗ್ರಿಡ್ ವ್ಯವಸ್ಥೆ ಇರುವುದರಿಂದ ಬೇರೆ ಕಡೆಯಿಂದಲೂ ವಿದ್ಯುತ್ ತರಲು ಸಾಧ್ಯವಿದ್ದು, ಟ್ರಾನ್ಸ್ ಮಿಷನ್ ವೆಚ್ಚದ ಬಗ್ಗೆ ಚಿಂತಿಸುವುದಿಲ್ಲ. ನೀರು ಮತ್ತು ವಿದ್ಯುತ್ ಇಲ್ಲದೆ ಬದುಕಲು ಸಾಧ್ಯವಿಲ್ಲವಾದ್ದರಿಂದ ಈ ಬಗ್ಗೆ ಅಧಿಕಾರಿಗಳೊಂದಿಗೂ ಚರ್ಚೆ ನಡೆಸಲಾಗಿದೆ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಶಿಕ್ಷಣ ಇಲಾಖೆ ಪ್ಲ್ಯಾನ್; ಶೀಘ್ರವೇ ಬೆಂಗಳೂರಿನಲ್ಲಿ ಸರ್ಕಾರಿ ಶಾಲೆಗಳ ಸಮಯ ಬದಲು
ರಾಜ್ಯದಲ್ಲಿ ಬಂಡವಾಳ ಹೂಡಿಕೆ ಮಾಡಲು ಅನೇಕರು ಮುಂದೆ ಬರುತ್ತಿದ್ದಾರೆ. ಇಡೀ ದೇಶವೇ ಕರ್ನಾಟಕದತ್ತ ನೋಡುತ್ತಿದೆ. ಹೂಡಿಕೆದಾರರು ಬೆಂಗಳೂರಿನಲ್ಲಿ ಭೂಮಿ, ನೀರು ಹಾಗೂ ವಿದ್ಯುತ್ಗಾಗಿ ಬೇಡಿಕೆ ಇಡುತ್ತಿದ್ದಾರೆ. ಹಬ್ಬದ ಈ ಸಂದರ್ಭದಲ್ಲಿ ಆ ಬಗ್ಗೆ ಹೆಚ್ಚಿನ ಚರ್ಚೆ ಮಾಡುವುದಿಲ್ಲ, ಸಂಕಷ್ಟಗಳೆಲ್ಲವೂ ದೂರವಾಗಲಿ ಎಂದು ವಿಘ್ನನಿವಾರಕನಲ್ಲಿ ಪ್ರಾರ್ಥಿಸೋಣ ಎಂದು ನುಡಿದರು. ಇದನ್ನೂ ಓದಿ: ಹುಟ್ಟೂರು ದೊಡ್ಡಾಲಹಳ್ಳಿಗೆ ಸಿಎಂ ಡಿಕೆಶಿ ಭೇಟಿ – ಕುಟುಂಬ ಸಮೇತ ಹಿರಿಯರ ಸಮಾಧಿಗೆ ಪೂಜೆ

