– ಅಗತ್ಯಬಿದ್ದರೆ ಚೀನಾವನ್ನ ಎದುರಿಸಲು ಸಿದ್ಧರಿದ್ದಾರೆ ಎಂದ ಸಚಿವ
ನವದೆಹಲಿ: ನಮಗೆ ಶಾಂತಿ ಬೇಕಿದೆ ನಿಜ, ಆದ್ರೆ ಭೂಪ್ರದೇಶ ಮತ್ತು ಸಾರ್ವಭೌಮ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ ಎಂದು ಭಾರತ ಚೀನಾ ಗಡಿ ಸಮಸ್ಯೆ ಕುರಿತು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು (Kiren Rijiju) ಖಡಕ್ ಮಾತುಗಳನ್ನಾಡಿದ್ದಾರೆ.
ಖಾಸಗಿ ವಾಹಿನಿಯೊಂದರ ಸಂದರ್ಶನದಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ (PM Modi) ಅವರು ಭಾರತ-ಚೀನಾ ಸಂಬಂಧಗಳನ್ನ ಸಾಮಾನ್ಯ ಸ್ಥಿತಿಗೆ ತರಬೇಕೆಂದು ಹಲವು ರೀತಿಯಲ್ಲಿ ಪ್ರಯತ್ನ ಮಾಡ್ತಿದ್ದಾರೆ ಎಂದರಲ್ಲದೇ, ದೇಶದ ಭೂಪ್ರದೇಶ ಮತ್ತು ಸಾರ್ವಭೌಮತ್ವ ರಕ್ಷಿಸುವ ವಿಚಾರದಲ್ಲಿ ಭಾರತ ದೃಢವಾಗಿರಲಿದೆ ಎಂದು ಅವರು ಒತ್ತಿ ಹೇಳಿದರು.

ಭೂಪ್ರದೇಶದ ವಿಚಾರದಲ್ಲಿ ರಾಜಿ ಇಲ್ಲ
ಮುಂದುವರಿದು… ಚೀನಾ ವಿಚಾರದಲ್ಲಿ ತಮಗೆ ಬಲವಾದ ಅಭಿಪ್ರಾಯಗಳಿವೆ. ಅರುಣಾಚಲ ಪ್ರದೇಶದ ಜನರು ಈ ಹಿಂದೆ ಚೀನಾವನ್ನು ಎದುರಿಸಿದ್ದಾರೆ, ಅಗತ್ಯವಿದ್ದರೆ ಮತ್ತೊಮ್ಮೆ ಎದುರಿಸಲು ಸಿದ್ಧರಾಗಿದ್ದಾರೆ. ಆದ್ರೆ ತಮ್ಮ ವೈಯಕ್ತಿಕ ಅಭಿಪ್ರಾಯಗಳನ್ನ ವಿವರಿಸಲು ಅವರು ನಿರಾಕರಿಸಿದರು. ತಾವು ನೀಡುವ ಹೇಳಿಕೆಗಳನ್ನ ಭಾರತದ ಅಧಿಕೃತ ನಿಲುವು ಎಂದು ತಪ್ಪಾಗಿ ಅರ್ಥೈಸುವ ಸಾಧ್ಯತೆಯಿದೆ ಎಂಬ ಕಾರಣಕ್ಕೆ ಹೆಚ್ಚಿನ ವಿವರ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಗಡಿ ಪ್ರದೇಶದಲ್ಲಿ ಮೂಲಸೌಕರ್ಯ ಬಲವರ್ಧನೆ
ಭಾರತವು ಗಡಿ ಪ್ರದೇಶಗಳಲ್ಲಿ ಮೂಲಸೌಕರ್ಯಗಳನ್ನ ವೇಗವಾಗಿ ಅಭಿವೃದ್ಧಿಪಡಿಸುತ್ತಿದೆ. ಚೀನಾ ಹೊಂದಿರುವ ಸಾಮರ್ಥ್ಯವನ್ನು ಭಾರತವೂ ತಲುಪಲಿದೆ ಎಂದು ಹೇಳಿದರು. ಈ ಮೂಲಕ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಚೀನಾ ಭಾರತಕ್ಕಿಂತ ಮುಂದಿದೆ ಎಂಬುದನ್ನ ಪರೋಕ್ಷವಾಗಿ ಒಪ್ಪಿಕೊಂಡರು.

ಅರುಣಾಚಲ ಪ್ರದೇಶದ ಹೆಸರು ಬದಲಾವಣೆ ವಿಚಾರ
ಅರುಣಾಚಲ ಪ್ರದೇಶದ ಹಲವು ಸ್ಥಳಗಳಿಗೆ ಚೀನಾ ಹೊಸ ಹೆಸರುಗಳನ್ನ ನೀಡುತ್ತಿರುವ ಕ್ರಮದ ಬಗ್ಗೆ ಪ್ರತಿಕ್ರಿಯಿಸಿ, ಇದೆಲ್ಲವೂ ಕುತಂತ್ರದ ಆಟಗಳು. ಅರುಣಾಚಲ ಪ್ರದೇಶವು ಚೀನಾದ ಇತಿಹಾಸ ಅಥವಾ ನಾಗರಿಕತೆಯ ಭಾಗವಲ್ಲ. ಭಾರತದ ಭೂಪ್ರದೇಶವನ್ನು ರಕ್ಷಿಸುವ ವಿಚಾರದಲ್ಲಿ ದೇಶ ಸದಾ ಸಿದ್ಧವಾಗಿದೆ ಎಂದು ಹೇಳಿದರು.
ಗಡಿ ಸಾಮರ್ಥ್ಯ ಹೆಚ್ಚಿಸಲು ಭಾರತದ ಪ್ರಯತ್ನ
ಚೀನಾದೊಂದಿಗೆ ಹೋಲಿಸಿದರೆ ಗಡಿ ಪ್ರದೇಶಗಳ ಮೂಲಸೌಕರ್ಯದಲ್ಲಿ ಭಾರತ ಇನ್ನಷ್ಟು ವೇಗವಾಗಿ ಮುಂದುವರಿಯಬೇಕಿದೆ. ಅದಕ್ಕಾಗಿ ಗಡಿ ಪ್ರದೇಶಗಳಲ್ಲಿ ರಸ್ತೆ, ಸಂಪರ್ಕ ವ್ಯವಸ್ಥೆ ಸೇರಿದಂತೆ ಮೂಲಸೌಕರ್ಯವನ್ನು ಬಲಪಡಿಸುವ ಮೂಲಕ ಭಾರತದ ಸಾಮರ್ಥ್ಯವನ್ನು ಹೆಚ್ಚಿಸಲಾಗುತ್ತಿದೆ. ಚೀನಾ ಹೊಂದಿರುವ ಮೂಲಸೌಕರ್ಯ ಸಾಮರ್ಥ್ಯಕ್ಕೆ ಭಾರತವೂ ತಕ್ಕ ಮಟ್ಟಿಗೆ ಸ್ಪರ್ಧಿಸಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

