– ಬೆಂಗಳೂರಿನಲ್ಲಿ ವಿಲ್ಲಾ ಖರೀದಿಸಿದ ಗ್ಯಾನೇಂದ್ರ ಸಹೋದರ
– ಸಾಲದ ಕಥೆ ಕಟ್ಟಿ, ಹಗರಣಕ್ಕೆ ಲಿಂಕ್ ಇಲ್ಲ ಎಂದ ಯುವತಿ
ಬೆಂಗಳೂರು: ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣದಲ್ಲಿ ಲವ್ಸ್ಟೋರಿಯೊಂದು ಬಯಲಾಗಿದೆ. ಸೀಟ್ ಕೊಡಿಸುವುದಾಗಿ ಪಡೆದಿದ್ದ ಹಣವನ್ನು ಐಎಎಸ್ ಅಧಿಕಾರಿ ಗ್ಯಾನೇಂದ್ರ ಗೆಳತಿಗೆ ಗಿಫ್ಟ್ ಕೊಡುವ ರೂಪದಲ್ಲಿ ಹೂಡಿಕೆ ಮಾಡಿದ್ದ ಎಂಬ ವಿಷಯ ತನಿಖೆಯಲ್ಲಿ ಹೊರಬಿದ್ದಿದೆ.
KPSC ಪಶುವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ನಡೆದ ಅಕ್ರಮ ಪ್ರಕರಣದ ತನಿಖೆ ಮತ್ತಷ್ಟು ಚುರುಕುಗೊಂಡಿದೆ. ಅಭ್ಯರ್ಥಿಗಳಿಂದ ಲಕ್ಷ ಲಕ್ಷ ಬೇರೆಯವರ ಮೂಲಕ ಜೆಬಿಗಿಳಿಸಿಕೊಂಡಿದ್ದ ಆರೋಪಿಗಳು ಅದನ್ನ ಎಲ್ಲಿ ಹೂಡಿಕೆ ಮಾಡಿದ್ದಾರೆ ಎಂಬ ಪರಿಶೀಲನೆಗೆ ಅಧಿಕಾರಿಗಳು ಮುಂದಾಗಿದ್ದಾರೆ. ಈ ವೇಳೆ ಐಎಎಸ್ ಅಧಿಕಾರಿ ಗ್ಯಾನೇಂದ್ರ ಲವ್ ಸ್ಟೋರಿ ಹೊರ ಬಿದ್ದಿದೆ. ಅಕ್ರಮದ ಹಣದಲ್ಲಿ ತನ್ನ ಗೆಳತಿಗೆ ಲಕ್ಷ ಲಕ್ಷ ಮೌಲ್ಯದ ಜ್ಯುವೆಲ್ಲರಿ ಗಿಫ್ಟ್ ಕೊಡಿಸಿದ್ದ ಎನ್ನವ ಸ್ಫೋಟಕ ವಿಚಾರ ಹೊರಬಿದ್ದಿದೆ.
ಅಕ್ರಮದ ಹಣದಲ್ಲಿ ಗ್ಯಾನೇಂದ್ರ ಕುಮಾರ್ ಮೋಜುಮಸ್ತಿ ಮಾಡಿದ್ನಾ ಅನ್ನೋ ಅನುಮಾನ ಮೂಡಿದೆ. ತನಿಖೆ ವೇಳೆ ಗ್ಯಾನೇಂದ್ರಗೆ ಅಯೋಧ್ಯೆ ಮೂಲದ ಗೆಳತಿ ಇದ್ದು, ಆಕೆಗೆ ಅಕ್ರಮದ ಹಣದಲ್ಲಿ ಗೋಲ್ಡ್ ಜ್ಯುವೆಲ್ಸ್ ಗಿಫ್ಟ್ ಕೊಟ್ಟ ವಿಚಾರ ಬಯಲಾಗಿದೆ.
ಬೀದರ್ನ ಲಕ್ಷ್ಮಿ ಸೌಹಾರ್ದ ಕೋ ಆಪರೇಟಿವ್ ಬ್ಯಾಂಕ್ಗೆ ಬೇರೆ ಬೇರೆಯವರ ಹೆಸರಿನಲ್ಲಿ ಅಭ್ಯರ್ಥಿಗಳಿಂದ ಆರೋಪಿಗಳು ಹಣ ಹಾಕಿಸಿಕೊಳ್ಳುತ್ತಿದ್ದರು. ಬಸವರಾಜ್ ಹೆಸರಿನ ಅಕೌಂಟ್ಗೆ ಗ್ಯಾನೇಂದ್ರ ಅಭ್ಯರ್ಥಿಗಳಿಂದ ಹಣ ಹಾಕಿಸಿಕೊಂಡಿದ್ದ. ಬೆಂಗಳೂರಿನ ಡಿಕನ್ಸನ್ ರಸ್ತೆಯ ಪ್ರತಿಷ್ಠಿತ ಜ್ಯುವೆಲ್ಲರಿ ಶಾಪ್ಗೆ ಗರ್ಲ್ಫ್ರೆಂಡ್ ಕರೆದೊಯ್ದಿದ್ದ ಗ್ಯಾನೇಂದ್ರ ಜ್ಯುವೆಲ್ಸ್ ಕೊಡಿಸಿರೋದು ಗೊತ್ತಾಗಿದೆ. 26 ಲಕ್ಷ ಮೌಲ್ಯದ ಚಿನ್ನದ ಆಭರಣವನ್ನ ಗೆಳತಿಗೆ ಉಡುಗೊರೆ ನೀಡಿರುವ ಬಗ್ಗೆ ಆಭರಣ ಖರೀದಿ ರೆಸಿಪ್ಟ್ ಹಾಗೂ ಸಿಸಿಟಿವಿ ಫುಟೇಜ್ ಸಿಐಡಿಗೆ ಸಿಕ್ಕಿವೆ.
ಗ್ಯಾನೇಂದ್ರ ಗೆಳತಿಯ ಬಗ್ಗೆ ಮಾಹಿತಿ ಕಲೆ ಹಾಕಿದಾಗ ಅಯೋಧ್ಯ ಮೂಲದ ಯುವತಿ ಅಂತಾ ಗೊತ್ತಾಗಿದೆ. ಇನ್ನು ಈ ಸಂಬಂಧ ಆಕೆಗೆ ನೊಟೀಸ್ ಕೊಟ್ಟು ವಿಚಾರಣೆ ಕೂಡ ನಡೆಸಿದ್ದು, ವಿಚಾರಣೆ ವೇಳೆ ಸಾಲದ ಕಥೆ ಕಟ್ಟಿದ್ದಾಳೆ. ʻʻನಾನು ಅವ್ರಿಗೆ 25 ಲಕ್ಷ ಸಾಲ ಕೊಟ್ಟಿದ್ದೆ. ಆದ್ರೆ ಅವರು ಹಣದ ಬದಲು ಗೋಲ್ಡ್ ರಿಟರ್ನ್ ಕೊಟ್ಟಿದ್ದಾರೆ. ಹಗರಣಕ್ಕೂ ನನಗೂ ಯಾವ ಲಿಂಕ್ ಇಲ್ಲʼʼ ಎಂದು ವಿಚಾರಣೆ ವೇಳೆ ಯುವತಿ ಬಾಯ್ಬಿಟ್ಟಿದ್ದಾಳೆ. ಸದ್ಯ ಯುವತಿ ಹೇಳಿಕೆ ದಾಖಲಿಸಿ ಸಿಐಡಿ ತನಿಖೆ ಮುಂದುವರೆಸಿದೆ.ಇದನ್ನೂ ಓದಿ: ಕಣ್ಣೀರಿಟ್ಟ ಸೌಂದರ್ಯ ಶೆಟ್ಟಿ… ಸಿಕ್ಕಾಪಟ್ಟೆ ಟ್ರೋಲ್ – ಇನ್ಸ್ಟಂಟ್ ಕರ್ಮ ಎಂದ ನೆಟ್ಟಿಗರು, ಅಂಥದ್ದೇನಾಯ್ತು?
ಇನ್ನು ಇದೇ ಅಕ್ರಮದ ಹಣದಲ್ಲಿ ಐಎಎಸ್ ಗ್ಯಾನೇಂದ್ರ ಸಹೋದರ ಕಮಲಾಪತಿ ಹೆಸರಲ್ಲಿ ಬೆಂಗಳೂರಿನಲ್ಲಿ ವಿಲ್ಲಾ ಖರೀದಿ ಮಾಡಿದ್ದ ಅನುಮಾನ ಮೂಡಿದೆ. ಕೆಂಪೇಗೌಡ ವಿಮಾನ ನಿಲ್ದಾಣ ಸಮೀಪ ಕಮಲಾಪತಿ ಹೆಸರಿನಲ್ಲಿ ವಿಲ್ಲಾ ಖರೀದಿಸಿರೋದು ಸಿಐಡಿ ತನಿಖೆ ವೇಳೆ ಬೆಳಕಿಗೆ ಬಂದಿದ್ದು, ಅಕ್ರಮ ಹಣದಲ್ಲಿ ವಿಲ್ಲಾ ಖರೀದಿಸಿರೋ ಶಂಕೆ ವ್ಯಕ್ತವಾಗಿದೆ. ಈಗಾಗಲೇ ವಿಲ್ಲಾಗೆ ಭೇಟಿ ನೀಡಿ ಪರಿಶೀಲನೆ ನಡೆಸಿರೋ ಸಿಐಡಿ ತಂಡ ಹಣದ ಮೂಲವನ್ನು ಪತ್ತೆ ಹಚ್ಚುತ್ತಿದ್ದಾರೆ.ಇದನ್ನೂ ಓದಿ: ಕಸ್ತೂರಿರಂಗನ್ ವರದಿಗೆ ವಿರೋಧ – ಕಟ್ಟೆಯೊಡೆದ ರೈತರ ಆಕ್ರೋಶ; ಡಿಸಿ ಭರವಸೆ ಬಳಿಕ ಪ್ರತಿಭಟನೆ ಅಂತ್ಯ

