ಹಿಂದೂ ಧರ್ಮದಲ್ಲಿ(Hindu Religion) ಗಣೇಶನನ್ನು ಬುದ್ಧಿ ಮತ್ತು ಜ್ಞಾನದ ದೇವರಾಗಿ(Knowledge God) ಎಂದು ಪೂಜಿಸಲಾಗುತ್ತದೆ. ಗಣೇಶನನ್ನು(Ganapathi) ಆರಾಧಿಸುವುದರಿಂದ ಬುದ್ಧಿಶಕ್ತಿ ಹೆಚ್ಚುತ್ತದೆ ಎಂಬ ನಂಬಿಕೆಯ ಹಿಂದೆ ಹಲವು ಪೌರಾಣಿಕ ಕಥೆ, ಆಧ್ಯಾತ್ಮಿಕ ಕಾರಣಗಳಿವೆ
ಗಣೇಶನ ದೇಹದ ಪ್ರತಿಯೊಂದು ಭಾಗವೂ ಬುದ್ಧಿವಂತಿಕೆಯನ್ನು ಸಂಕೇತಿಸುತ್ತದೆ. ದೊಡ್ಡ ತಲೆ ವಿಶಾಲವಾದ ಆಲೋಚನೆ, ಗಹನವಾದ ಜ್ಞಾನ ಮತ್ತು ಉನ್ನತ ಬುದ್ಧಿಶಕ್ತಿಯನ್ನು ಸೂಚಿಸುತ್ತದೆ.
ದೊಡ್ಡ ಕಿವಿಗಳು ಒಬ್ಬ ಒಳ್ಳೆಯ ಜ್ಞಾನಿಯಾಗಲು ಮೊದಲು ಒಳ್ಳೆಯ ಕೇಳುಗನಾಗಬೇಕು ಎಂಬುದನ್ನು ಇದು ತಿಳಿಸುತ್ತದೆ. ಏಕಾಗ್ರತೆ ಮತ್ತು ಸೂಕ್ಷ್ಮವಾಗಿ ಗಮನಿಸುವ ಶಕ್ತಿಯನ್ನು ಸಣ್ಣ ಕಣ್ಣುಗಳು ಪ್ರತಿನಿಧಿಸುತ್ತದೆ.
ಒಳ್ಳೆಯದು ಮತ್ತು ಕೆಟ್ಟದ್ದನ್ನು ವಿವೇಚಿಸುವ ಹಾಗೂ ಯಾವುದೇ ಪರಿಸ್ಥಿತಿಗೆ ಹೊಂದಿಕೊಳ್ಳುವ ಬುದ್ಧಿವಂತಿಕೆಯನ್ನು ಉದ್ದನೆಯ ಸೊಂಡಿಲು ತೋರಿಸುತ್ತದೆ.

ಪೌರಾಣಿಕ ಕಥೆಗಳ ಪ್ರಕಾರ, ಗಣೇಶನ ಪತ್ನಿಯರು ಬುದ್ಧಿ (ವಿವೇಕ) ಮತ್ತು ಸಿದ್ಧಿ (ಯಶಸ್ಸು). ಬುದ್ಧಿ ಇರುವಲ್ಲಿ ಮಾತ್ರ ಸಿದ್ಧಿ ಅಥವಾ ಯಶಸ್ಸು ಸಾಧ್ಯ. ಹಾಗಾಗಿ ಗಣೇಶನನ್ನು ಪೂಜಿಸಿದಾಗ ನಮಗೆ ಸದ್ಬುದ್ಧಿ ಮತ್ತು ಕಾರ್ಯಸಿದ್ಧಿ ಎರಡೂ ಲಭಿಸುತ್ತವೆ ಎಂಬುದು ನಂಬಿಕೆ.
ಆಧ್ಯಾತ್ಮಿಕವಾಗಿ ಮತ್ತು ಯೋಗಶಾಸ್ತ್ರದ ಪ್ರಕಾರ, ಗಣೇಶನು ಮಾನವ ದೇಹದ ಮೂಲಾಧಾರ ಚಕ್ರದ ಅಧಿಪತಿ. ಈ ಚಕ್ರವು ಮನುಷ್ಯನ ಬುದ್ಧಿಶಕ್ತಿ, ಜ್ಞಾನ ಮತ್ತು ಮಾನಸಿಕ ಸ್ಥಿರತೆಗೆ ಅಡಿಪಾಯವಾಗಿದೆ. ಗಣೇಶನ ಆರಾಧನೆಯಿಂದ ಈ ಚಕ್ರ ಜಾಗೃತಗೊಂಡು ಮಾನಸಿಕ ಏಕಾಗ್ರತೆ ಹೆಚ್ಚುತ್ತದೆ.
ಗಣೇಶನನ್ನು ವಿದ್ಯಾರಂಭದ ದೇವತೆ ಎನ್ನಲಾಗುತ್ತದೆ. ಯಾವುದೇ ಶುಭ ಕಾರ್ಯ ಅಥವಾ ವಿದ್ಯಾಭ್ಯಾಸವನ್ನು ಪ್ರಾರಂಭಿಸುವ ಮುನ್ನ “ಶ್ರೀ ಗಣೇಶಾಯ ನಮಃ” ಎಂದು ಹೇಳಲಾಗುತ್ತದೆ. ಬುದ್ಧಿಗೆ ಬರುವ ಅಜ್ಞಾನ ಮತ್ತು ಅಹಂಕಾರದಂತಹ ಅಡೆತಡೆಗಳನ್ನು ನಿವಾರಿಸಿ, ಸ್ಪಷ್ಟವಾಗಿ ಆಲೋಚಿಸುವ ಶಕ್ತಿಯನ್ನು ಆತ ಕರುಣಿಸುತ್ತಾನೆ. ಇದನ್ನೂ ಓದಿ: Ganesh Chaturthi 2026 – ಗಣೇಶ ದರ್ಶನದಿಂದ ಸಿಗೋ ಶುಭ ಫಲಗಳು

ಗಣೇಶನ ಬುದ್ಧಿಮತ್ತೆಗೆಗೆ ಪುರಾಣದಲ್ಲಿ ಹಲವು ಕತೆಗಳು ಸಿಗುತ್ತವೆ. ಮಹಾಭಾರತ ಮಹಾಕಾವ್ಯವನ್ನು ಬರೆಯಲು ವೇದವ್ಯಾಸರಿಗೆ ಒಬ್ಬರೇ ಸಮರ್ಥರಾದ ಲೇಖಕರು ಬೇಕಾಗಿದ್ದಾಗ, ಅವರು ಆರಿಸಿಕೊಂಡಿದ್ದು ಗಣೇಶನನ್ನು. ಈ ಸಂದರ್ಭದಲ್ಲಿ ಗಣೇಶನು ಒಂದು ಷರತ್ತನ್ನು ವಿಧಿಸುತ್ತಾನೆ.
“ನೀವು ಶ್ಲೋಕಗಳನ್ನು ಹೇಳುವಾಗ ಎಲ್ಲೂ ನಿಲ್ಲಿಸಬಾರದು, ಸತತವಾಗಿ ಹೇಳಬೇಕು”. ಅದಕ್ಕೆ ವ್ಯಾಸರು, “ನಾನು ಹೇಳುವ ಪ್ರತಿಯೊಂದು ಶ್ಲೋಕದ ಅರ್ಥವನ್ನು ಗ್ರಹಿಸಿ ಆಮೇಲಷ್ಟೇ ನೀನು ಬರೆಯಬೇಕು” ಎಂಬ ಪ್ರತಿ ಷರತ್ತನ್ನಿಟ್ಟರು. ವ್ಯಾಸರು ಅತ್ಯಂತ ಕಠಿಣವಾದ ಶ್ಲೋಕಗಳನ್ನು ಹೇಳಿದಾಗಲೂ, ಗಣೇಶನು ತನ್ನ ತೀಕ್ಷ್ಣ ಬುದ್ಧಿಶಕ್ತಿಯಿಂದ ಅವುಗಳ ಅರ್ಥವನ್ನು ಕ್ಷಣಾರ್ಧದಲ್ಲಿ ಗ್ರಹಿಸಿ, ವೇಗವಾಗಿ ಬರೆದು ಮುಗಿಸಿದನು. ಇದು ಗಣೇಶನ ಅಪ್ರತಿಮ ಗ್ರಹಿಕಾ ಶಕ್ತಿಗೆ ಸಾಕ್ಷಿ.
ಒಮ್ಮೆ ನಾರದ ಮಹರ್ಷಿಯು ಶಿವ ಮತ್ತು ಪಾರ್ವತಿಯರಿಗೆ ಒಂದು ದಿವ್ಯವಾದ ಜ್ಞಾನದ ಹಣ್ಣನ್ನು ನೀಡುತ್ತಾನೆ. ಶಿವ-ಪಾರ್ವತಿಯರು ತಮಗೆ ಸಿಕ್ಕ ಜ್ಞಾನದ ಹಣ್ಣನ್ನು ಯಾರಿಗೆ ನೀಡಬೇಕೆಂದು ನಿರ್ಧರಿಸಲು ಕಾರ್ತಿಕೇಯ ಮತ್ತು ಗಣೇಶನಿಗೆ ಒಂದು ಸ್ಪರ್ಧೆ ಇಡುತ್ತಾರೆ. ಆ ಹಣ್ಣನ್ನು ಗಣೇಶ ಅಥವಾ ಕಾರ್ತಿಕೇಯರಲ್ಲಿ ಯಾರಿಗೆ ನೀಡುವುದು ಎಂಬ ಗೊಂದಲ ಉಂಟಾದಾಗ, ಶಿವ-ಪಾರ್ವತಿಯರು ಬ್ರಹ್ಮಾಂಡವನ್ನು ಯಾರು ಮೊದಲು ಮೂರು ಬಾರಿ ಸುತ್ತಿ ಬರುತ್ತಾರೋ ಅವರಿಗೆ ಈ ಹಣ್ಣು ಸಿಗುತ್ತದೆ ಎಂದು ಸವಾಲು ಹಾಕುತ್ತಾರೆ.
ಕಾರ್ತಿಕೇಯನು ತಕ್ಷಣ ತನ್ನ ವಾಹನವಾದ ನವಿಲನ್ನೇರಿ ಬ್ರಹ್ಮಾಂಡದ ಸುತ್ತ ಸಂಚರಿಸಲು ಹೊರಟನು. ಆದರೆ ಗಣೇಶನು ತನ್ನ ವಾಹನವಾದ ಮೂಷಿಕವನ್ನು (ಇಲಿ) ಏರಿ ಇಡೀ ಜಗತ್ತನ್ನು ಸುತ್ತುವುದು ಅಸಾಧ್ಯವೆಂದು ತಿಳಿದು, ತನ್ನ ಬುದ್ಧಿವಂತಿಕೆಯನ್ನು ಬಳಸಿದನು. ಹೆತ್ತ ತಂದೆ-ತಾಯಿಯೇ ಇಡೀ ಜಗತ್ತಿಗೆ ಸಮಾನ ಎಂದು ಭಾವಿಸಿ, ಶಿವ-ಪಾರ್ವತಿಯರಿಗೆ ಮೂರು ಬಾರಿ ಪ್ರದಕ್ಷಿಣೆ ಹಾಕಿದನು. ಗಣೇಶನ ಈ ಸಮಯಪ್ರಜ್ಞೆ ಮತ್ತು ಧರ್ಮಸೂಕ್ಷ್ಮತೆಗೆ ಮೆಚ್ಚಿ ಆತನಿಗೆ ಜ್ಞಾನದ ಹಣ್ಣನ್ನು ನೀಡಲಾಯಿತು.
ನಿಜವಾದ ಜ್ಞಾನ ಮತ್ತು ಬುದ್ಧಿವಂತಿಕೆಯು ಕೇವಲ ಶ್ರಮ ಅಥವಾ ವೇಗದಲ್ಲಲ್ಲ, ಪರಿಸ್ಥಿತಿಯನ್ನು ಗ್ರಹಿಸುವ ಮತ್ತು ಹಿರಿಯರನ್ನು ಗೌರವಿಸುವ ಸದಾಚಾರದಲ್ಲಿದೆ ಎಂಬುದನ್ನು ಈ ಕಥೆ ತಿಳಿಸುತ್ತದೆ. ಈ ಎಲ್ಲಾ ಕಾರಣಕ್ಕೆ ಗಣಪತಿಯನ್ನು ಜ್ಞಾನದ ಮತ್ತು ವಿವೇಕದ ದೇವರಾಗಿ ಪೂಜಿಸಲಾಗುತ್ತದೆ.

