– ಖಾಲಿ ಬೋಗಿಯಲ್ಲಿ ಸಿಗರೇಟ್ ಎಸೆದಿದ್ದ ದುಷ್ಟ
ಬೆಂಗಳೂರು: ಮೆಜೆಸ್ಟಿಕ್ನ ರೈಲ್ವೆ ನಿಲ್ದಾಣದಲ್ಲಿ (Majestic Train) ಖಾಲಿ ನಿಂತಿದ್ದ ಬೋಗಿಗೆ ಬೆಂಕಿ ತಗುಲಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಓರ್ವ ವ್ಯಕ್ತಿಯನ್ನ ರೈಲ್ವೆ ಪೊಲೀಸರು ಬಂಧಿಸಿದ್ದಾರೆ. ಗಾಂಜಾ ನಶೆಯಲ್ಲಿ ಆಸಾಮಿ ಈ ಕೃತ್ಯ ಎಸಗಿದ್ದಾನೆ.
ಮೆಜೆಸ್ಟಿಕ್ ರೈಲು ನಿಲ್ದಾಣದಲ್ಲಿ ಖಾಲಿ ಬೋಗಿಗೆ ಬೆಂಕಿ ಬಿದ್ದಿತ್ತು. ಇದೇ ಪ್ರಕರಣವನ್ನು ಬೆನ್ನತ್ತಿದ ಪೊಲೀಸರು ಅವಘಡದ ಹಿಂದಿನ ರಹಸ್ಯ ಭೇದಿಸಿದ್ದಾರೆ. ಹಳೆಯ ರೈಲು ಬೋಗಿಯಲ್ಲಿ ಬೆಂಕಿ ಕಾಣಿಸಿಕೊಂಡ ಪ್ರಕರಣ ಸಂಬಂಧ ಓರ್ವ ಆರೋಪಿಯನ್ನ ರೈಲ್ವೆ ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಈರುಳ್ಳಿ ಪ್ರಿಯರಿಗೆ ಗುಡ್ನ್ಯೂಸ್ – ಹಾಫ್ರೇಟ್ನಲ್ಲಿ ಮಾರಾಟ
ಮಹಾರಾಷ್ಟ್ರದ ನಾಶಿಕ್ ಜಿಲ್ಲೆಯ ರವಿ ಗೋರಖ್ ತಿರ್ವ ಎಂಬ ವ್ಯಕ್ತಿ ಮಲಗಲು ಖಾಲಿ ಬೋಗಿಗೆ ಹೋಗಿದ್ದ. ಗಾಂಜಾ ನಶೆಯಲ್ಲಿದ್ದ ಆಸಾಮಿ, ಸಿಗರೇಟ್ ಸೇದಿ ರೈಲಿನ ಬೋಗಿಯಲ್ಲಿ ಬಿಸಾಡಿದ್ದಾನೆ. ಅದು ಸಣ್ಣ ಕಿಡಿಯಾಗಿ, ನಿಧಾನಕ್ಕೆ ದೊಡ್ಡ ಪ್ರಮಾಣದಲ್ಲಿ ಬೆಂಕಿ ಹೊತ್ತಿಕೊಂಡಿದೆ. ತಕ್ಷಣ ರೈಲಿನಿಂದ ಇಳಿದ ವ್ಯಕ್ತಿ ಅಲ್ಲಿಂದ ಪರಾರಿಯಾಗಿದ್ದಾನೆ.
ಬೆಂಗಳೂರಿನಲ್ಲಿ ಈ ಘಟನೆ ಸಂಬಂಧ ಆರ್ಪಿಎಫ್ ಹಾಗೂ ನಗರ ರೈಲ್ವೆ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದರು. ಸಿಸಿಟಿವಿಗಳನ್ನ ಪರಿಶೀಲಿಸಿ ಆರೋಪಿಯನ್ನ ಬಂಧಿಸಿದ್ದಾರೆ. ಬಂಧಿತ ಆರೋಪಿ ಪೇಂಟರ್ ವೃತ್ತಿಯಲ್ಲಿದ್ದು, ಕಲ್ಯಾಣ ಮಂಟಪ, ಸಾರ್ವಜನಿಕ ಸ್ಥಳಗಳಲ್ಲಿ ಮಲಗುತ್ತಿದ್ದ ಎನ್ನಲಾಗಿದೆ. ಅದೇ ರೀತಿ ಭಾನುವಾರ ತಡರಾತ್ರಿ ಖಾಲಿ ಬೋಗಿಯಲ್ಲಿ ಆತ ಮಲಗಲು ಬಂದು ಸಿಗರೇಟ್ ಬಿಸಾಡಿ ಕಿತಾಪತಿ ಮಾಡಿದ್ದಾನೆ. ಆರೋಪಿಗೆ ಕೆಸಿ ಜನರಲ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿ, ನ್ಯಾಯಧೀಶರ ಮುಂದೆ ಹಾಜರುಪಡಿಸಲಾಗಿದೆ. ಇದನ್ನೂ ಓದಿ: ಬೆಂಗಳೂರಲ್ಲಿ ಮುಂದುವರೆದ ವಲಸಿಗರ ದರ್ಪ – ಪೌರಕಾರ್ಮಿಕನ ಮೇಲೆ ಕೇರಳದ ಯುವತಿಯಿಂದ ಹಲ್ಲೆ

