ವಿಘ್ನಗಳನ್ನು ನಿವಾರಿಸುವ, ಜ್ಞಾನದ ಅಧಿದೇವತೆ ಮತ್ತು ಶುಭಕಾರ್ಯಗಳಲ್ಲಿ ಮೊದಲ ಪೂಜ್ಯನಾದ ದೇವರು ಗಣೇಶ. ಯಾವುದೇ ಶುಭಕಾರ್ಯ ಆರಂಭಿಸುವ ಮುನ್ನ ಗಣಪತಿಯನ್ನು ಸ್ಮರಿಸುವುದು ಭಾರತೀಯ ಸಂಪ್ರದಾಯದಲ್ಲಿ ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಗಣೇಶನ ದರ್ಶನ, ಪೂಜೆ ಮತ್ತು ಸ್ಮರಣೆಯಿಂದ ಮನಸ್ಸಿಗೆ ನೆಮ್ಮದಿ ಹಾಗೂ ಜೀವನದಲ್ಲಿ ಶುಭಫಲ ದೊರೆಯುತ್ತದೆ ಎಂಬ ನಂಬಿಕೆ ಭಕ್ತರದ್ದು.
ಕೆಲವರು ಗಣೇಶ ಹಬ್ಬದ ದಿನ 21 ಗಣಪತಿ 101 ಗಣಪತಿಯನ್ನು ನೋಡಲು ಮನೆ ಮನೆಗೆ ತೆರಳಿ ನಮಸ್ಕರಿಸುವ ಪದ್ಧತಿ ಸಹ ಕೆಲವೆಡೆ ಇದೆ. ಗಣೇಶನ ದರ್ಶನದಿಂದ ಭಕ್ತರಿಗೆ ಏನೆಲ್ಲ ಫಲಗಳು ಲಭಿಸಲಿದೆ ಎಂದು ಇಲ್ಲಿ ತಿಳಿಸಲಾಗಿದೆ.
ಬುದ್ಧಿ, ಜ್ಞಾನದ ಸಂಕೇತ
ಗಣೇಶನ ದೊಡ್ಡ ತಲೆಯು ಜ್ಞಾನ ಮತ್ತು ವಿಶಾಲ ಚಿಂತನೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ವಿದ್ಯಾರ್ಥಿಗಳು ಗಣೇಶನನ್ನು ಓದಿನಲ್ಲಿ ಏಕಾಗ್ರತೆ, ನೆನಪಿನ ಶಕ್ತಿ ಮತ್ತು ಆತ್ಮವಿಶ್ವಾಸ ಹೆಚ್ಚಾಗಲು ಗಣೇಶನನ್ನು ಆರಾಧಿಸುತ್ತಾರೆ. ಗಣೇಶನ ದರ್ಶನದಿಂದ ಬುದ್ಧಿ ಚುರುಕಾಗುತ್ತದೆ ಎಂಬ ನಂಬಿಕೆ ಇದೆ.
ವಿಘ್ನ ನಿವಾರಕ
ಯಾವುದೇ ಕೆಲಸ ಆರಂಭಿಸುವ ಮೊದಲು ಗಣೇಶನನ್ನು ಸ್ಮರಿಸುವ ಸಂಪ್ರದಾಯಕ್ಕೆ ವಿಶೇಷ ಮಹತ್ವವಿದೆ. ಹೊಸ ಮನೆ, ಹೊಸ ಉದ್ಯೋಗ, ವ್ಯಾಪಾರ ಅಥವಾ ಯಾವುದೇ ಶುಭಕಾರ್ಯ ಆರಂಭಿಸುವಾಗ ಗಣಪತಿ ಪೂಜೆ ಮಾಡಲಾಗುತ್ತದೆ. ಇದರಿಂದ ಎದುರಾಗಬಹುದಾದ ವಿಘ್ನಗಳು ದೂರ ಆಗುತ್ತವೆ ಎಂಬ ನಂಬಿಕೆ ಇದೆ.
ಮನಸ್ಸಿಗೆ ನೆಮ್ಮದಿ
ಗಣೇಶನ ಮೂರ್ತಿಯ ಮುಂದೆ ಕೆಲ ಕ್ಷಣ ಶಾಂತವಾಗಿ ಕುಳಿತು ಪ್ರಾರ್ಥಿಸುವುದರಿಂದ ಮನಸ್ಸಿನ ಗೊಂದಲ ಕಡಿಮೆಯಾಗುತ್ತದೆ. ಭಕ್ತಿಯಿಂದ ದೇವರನ್ನು ನೆನೆಯುವುದು ನಮ್ಮೊಳಗೆ ಧೈರ್ಯ ಮತ್ತು ಸಕಾರಾತ್ಮಕ ಭಾವನೆಗಳನ್ನು ಮೂಡಿಸುತ್ತದೆ. ಹೀಗಾಗಿ ಗಣೇಶ ದರ್ಶನವು ಕೇವಲ ಧಾರ್ಮಿಕ ಆಚರಣೆಯಲ್ಲ; ಅದು ಮನಸ್ಸನ್ನು ಒಂದೆಡೆ ಕೇಂದ್ರೀಕರಿಸುವ ಒಂದು ಆಧ್ಯಾತ್ಮಿಕ ಅನುಭವವೂ ಆಗಿದೆ.
ಗಣೇಶ ದರ್ಶನದ ಫಲ
ಗಣೇಶ ಚೌತಿಯಂದು 10ಕ್ಕಿಂತ ಹೆಚ್ಚು ಗಣೇಶ ಮೂರ್ತಿಗಳ ದರ್ಶನ ಪಡೆದ್ರೆ ಶುಭ ಎನ್ನುತ್ತಾರೆ ಹಿರಿಯರು. ಹಾಗಾಗಿ ಗಣೇಶನ ದರ್ಶನಕ್ಕೆ ಭಕ್ತರು ದೇವಸ್ಥಾನಗಳಿಗೆ ಹೋಗುತ್ತಾರೆ. ಹೀಗೆ ಗಣೇಶನನ್ನು ದರ್ಶನ ಮಾಡುವುದರಿಂದ ನಮ್ಮ ಕೆಲಸಗಳಲ್ಲಿ ಎದುರಾಗುವ ಯಾವುದೇ ಅಡೆತಡೆಗಳು, ಅಡ್ಡಿ-ಆತಂಕಗಳು ಮತ್ತು ಕಷ್ಟಗಳು ದೂರವಾಗುತ್ತವೆ.
ಗಜಮುಖನ ದರ್ಶನ ಮಾಡುವುದರಿಂದ ಮನಸ್ಸಿನಲ್ಲಿದ್ದ ನಕಾರಾತ್ಮಕ ಆಲೋಚನೆಗಳು, ಭಯ ಮತ್ತು ಆತಂಕಗಳು ದೂರವಾಗಿ, ಸಕಾರಾತ್ಮಕ ಶಕ್ತಿ (Positive energy) ತುಂಬಿಕೊಳ್ಳುತ್ತದೆ. ಇದು ಮಾನಸಿಕ ಶಾಂತಿ ಮತ್ತು ನೆಮ್ಮದಿಯನ್ನು ನೀಡುತ್ತದೆ. ಗಣೇಶನ ಆರಾಧನೆಯು ಕೇವಲ ಜ್ಞಾನವನ್ನಷ್ಟೇ ಅಲ್ಲದೆ, ಜೀವನದಲ್ಲಿ ಸುಖ, ಶಾಂತಿ, ಸಂಪತ್ತು ಮತ್ತು ಅಷ್ಟೈಶ್ವರ್ಯಗಳನ್ನು ತರುತ್ತದೆ ಎಂಬ ನಂಬಿಕೆ ಇದೆ.

