– ಭಾರತ ಮಾಲಾ ಯೋಜನೆಯಡಿ ನಿರ್ಮಾಣವಾಗುತ್ತಿರುವ ಸೇತುವೆ
ಪಾಟ್ನಾ: ಸೇತುವೆ ನಿರ್ಮಾಣ ಕಾಮಗಾರಿ ವೇಳೆ ಬೀಮ್ ಲಾಂಚರ್ ಹಾಗೂ ಕಾಂಕ್ರೀಟ್ ಸ್ಲ್ಯಾಬ್ ಕುಸಿದು (Beam Launcher Collapse) ಕನಿಷ್ಠ 8 ಕಾರ್ಮಿಕರು ಗಾಯಗೊಂಡಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿರುವ ಘಟನೆ ಬಿಹಾರದ (Bihar) ವೈಶಾಲಿ ಜಿಲ್ಲೆಯಲ್ಲಿ ನಡೆದಿದೆ.
ವೈಶಾಲಿ ಜಿಲ್ಲೆಯ ಲಾಲ್‌ಗಂಜ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ವತಿಯಿಂದ ಭಾರತಮಾಲಾ ಯೋಜನೆಯಡಿ ನಿರ್ಮಿಸಲಾಗುತ್ತಿರುವ ಎನ್‌ಹೆಚ್-139 ಚತುಷ್ಪಥ ಹೆದ್ದಾರಿ ಕಾಮಗಾರಿ ವೇಳೆ ದುರಂತ ಸಂಭವಿಸಿದೆ. ಇದನ್ನೂ ಓದಿ: ಶಿರೂರು | ಅಪಘಾತದ ವಾಹನ ತೆರವು ನೋಡುತ್ತಿದ್ದವನಿಗೆ ಲಾರಿ ಡಿಕ್ಕಿ – ವ್ಯಕ್ತಿ ಸಾವು
ಸೇತುವೆ ನಿರ್ಮಾಣಕ್ಕೆ ಬಳಸಲಾಗುತ್ತಿದ್ದ ಲಾಂಚರ್ ಅನ್ನು ಸ್ಥಳಾಂತರಿಸುತ್ತಿದ್ದ ವೇಳೆ ಏಕಾಏಕಿ ಕುಸಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪರಿಣಾಮ, ಕಾಮಗಾರಿ ಸ್ಥಳದಲ್ಲಿದ್ದ ಹಲವು ಕಾರ್ಮಿಕರು ಅವಶೇಷಗಳಡಿ ಸಿಲುಕಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಕ್ಷಣ ಲಾಲ್‌ಗಂಜ್ ರೆಫರಲ್ ಆಸ್ಪತ್ರೆಗೆ ದಾಖಲಿಸಲಾಯಿತು. ಆರು ಕಾರ್ಮಿಕರಿಗೆ ಆಸ್ಪತ್ರೆಯಲ್ಲೇ ಚಿಕಿತ್ಸೆ ನೀಡಲಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮತ್ತೊಂದು ಆಸ್ಪತ್ರೆಗೆ ರವಾನಿಸಲಾಗಿದೆ. ಇದನ್ನೂ ಓದಿ: ತಂತ್ರಜ್ಞಾನ ಬಳಸಿ, ಖುದ್ದು ಹಾಜರಾತಿ ಸಮಸ್ಯೆಯಾಗುತ್ತೆ – ಸೆ.16ಕ್ಕೆ ವಿಚಾರಣೆ ಮುಂದೂಡಿದ ಹೈಕೋರ್ಟ್
ಘಟನೆಯ ಬಳಿಕ ನಿರ್ಮಾಣ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಹಾಗೂ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಈ ವೇಳೆ ಓರ್ವ ಯುವಕ ಭಾರೀ ಕಬ್ಬಿಣದ ರಚನೆಯಡಿ ಸಿಲುಕಿಕೊಂಡಿದ್ದ. ಆತನ ಕಾಲು ಕಬ್ಬಿಣದ ರಚನೆಯಡಿ ಸಿಲುಕಿದ್ದರಿಂದ ಹೊರಬರಲು ಸಾಧ್ಯವಾಗಿರಲಿಲ್ಲ. ಬಳಿಕ ರಕ್ಷಣಾ ಸಿಬ್ಬಂದಿ ಸಿಲುಕಿದ್ದ ಯಂತ್ರೋಪಕರಣದ ಭಾಗಗಳನ್ನು ಕತ್ತರಿಸಿ ಯುವಕನನ್ನು ಸುರಕ್ಷಿತವಾಗಿ ಹೊರತೆಗೆದಿದ್ದಾರೆ. ಗಾಯಾಳುಗಳನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಕುರಿತು ಅಧಿಕಾರಿಗಳು ಸ್ಥಳದಲ್ಲಿ ಪರಿಶೀಲನೆ ನಡೆಸುತ್ತಿದ್ದು, ತನಿಖೆ ಮುಂದುವರಿದಿದೆ. ಇದನ್ನೂ ಓದಿ: ಬಳ್ಳಾರಿಯಲ್ಲಿ ಬಿಜೆಪಿ ಸಮಾವೇಶ ಆರಂಭ – ಯಡಿಯೂರಪ್ಪ, ಜೋಶಿ ಸೇರಿ ಅನೇಕ ಗಣ್ಯರು ಭಾಗಿ

