ಅಹಮದಾಬಾದ್: ಗುಜರಾತ್‌ನ ಅಹಮದಾಬಾದ್ (Bomb Threat) ಮತ್ತು ವಡೋದರಾ ನಗರಗಳ ಕನಿಷ್ಠ 28 ಶಾಲೆಗಳಿಗೆ ಬಾಂಬ್ ಬೆದರಿಕೆ ಇಮೇಲ್‌ಗಳು ಬಂದಿವೆ. ಈ ಹಿನ್ನೆಲೆ ತಕ್ಷಣ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಿ ಖಾಲಿ ಮಾಡಿಸಿ, ಪೊಲೀಸರು ಶೋಧ ಕಾರ್ಯಾ ನಡೆಸಿದ್ದಾರೆ.
ಅಹಮದಾಬಾದ್‌ನ 15ಕ್ಕೂ ಹೆಚ್ಚು ಶಾಲೆಗಳಿಗೆ ಬಾಂಬ್ ಬೆದರಿಕೆ ಇಮೇಲ್‌ಗಳು ಬಂದಿವೆ ಎಂದು ಜಿಲ್ಲಾ ಶಿಕ್ಷಣ ಅಧಿಕಾರಿ ರೋಹಿತ್ ಚೌಧರಿ ತಿಳಿಸಿದ್ದಾರೆ. ಎಲ್ಲಾ ಶಾಲೆಗಳಿಗೆ ಕೂಡಲೇ ಸ್ಥಳೀಯ ಪೊಲೀಸ್ ಠಾಣೆಗಳಿಗೆ ಮಾಹಿತಿ ನೀಡಲಾಗಿದೆ.
ಇನ್ನು ವಡೋದರಾದ ವಿವಿಧ ಪ್ರದೇಶಗಳಲ್ಲಿರುವ 13 ಶಾಲೆಗಳಿಗೆ ಬೆದರಿಕೆ ಇಮೇಲ್‌ಗಳು ಬಂದಿವೆ.
ಶಾಲೆಗಳಲ್ಲಿ ಪೊಲೀಸರ ತಪಾಸಣೆ
ಮಾಹಿತಿ ತಿಳಿದ ತಕ್ಷಣ ಸ್ಥಳೀಯ ಪೊಲೀಸರು, ವಿಶೇಷ ಕಾರ್ಯಾಚರಣೆ ಗುಂಪು (SOG), ಅಪರಾಧ ಶಾಖೆ ಹಾಗೂ ಬಾಂಬ್ ಪತ್ತೆ ಮತ್ತು ವಿಲೇವಾರಿ ದಳ (BDDS) ಸಿಬ್ಬಂದಿ ಶಾಲೆಗಳಿಗೆ ತೆರಳಿ ತಪಾಸಣೆ ನಡೆಸಿದ್ದಾರೆ.
ವಿದ್ಯಾರ್ಥಿಗಳು ಹಾಗೂ ಶಿಕ್ಷಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಿ, ಶಾಲಾ ಆವರಣಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗಿದೆ. ವಡೋದರಾದ ಒಂಬತ್ತು ಶಾಲೆಗಳ ತಪಾಸಣೆ ಈಗಾಗಲೇ ಪೂರ್ಣಗೊಂಡಿದ್ದು, ಉಳಿದ ಶಾಲೆಗಳಲ್ಲೂ ಪರಿಶೀಲನೆ ಮುಂದುವರಿದಿದೆ.ಇದನ್ನೂ ಓದಿ: ಶಿರೂರು | ಅಪಘಾತದ ವಾಹನ ತೆರವು ನೋಡುತ್ತಿದ್ದವನಿಗೆ ಲಾರಿ ಡಿಕ್ಕಿ – ವ್ಯಕ್ತಿ ಸಾವು
ಇದುವರೆಗೆ ಯಾವುದೇ ಅನುಮಾನಾಸ್ಪದ ವಸ್ತು ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಕೆಲವು ಶಾಲೆಗಳ ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಲಾಗಿದೆ.
ಇಮೇಲ್ ಮೂಲ ಪತ್ತೆಗೆ ತನಿಖೆ
ಈ ಬೆದರಿಕೆ ಇಮೇಲ್‌ಗಳ ಮೂಲ ಹಾಗೂ ಕಳುಹಿಸಿದವರ ಗುರುತು ಪತ್ತೆಹಚ್ಚಲು ಸೈಬರ್ ಕ್ರೈಂ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಇಮೇಲ್‌ಗಳ ಹಿಂದಿರುವ ವ್ಯಕ್ತಿಗಳನ್ನು ಪತ್ತೆಹಚ್ಚಲು ಪ್ರಯತ್ನಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದೇ ವರ್ಷದ ಜನವರಿ 23ರಂದು ಅಹಮದಾಬಾದ್‌ನ ಹಲವು ಶಾಲೆಗಳಿಗೂ ಇದೇ ರೀತಿಯ ಬಾಂಬ್ ಬೆದರಿಕೆ ಇಮೇಲ್‌ಗಳು ಬಂದಿದ್ದವು. ಬಳಿಕ ಅವು ಹುಸಿ ಬೆದರಿಕೆಗಳು ಎಂಬುದು ತಿಳಿದುಬಂದಿತ್ತು.ಇದನ್ನೂ ಓದಿ: ಕೊಡಗು | ಕುಶಾಲನಗರದ ಕೆರೆಗಳಿಗೆ ಕಂಟಕ – 139 ರಲ್ಲಿ 68 ಕೆರೆಗಳು ಒತ್ತುವರಿ ಆರೋಪ

