ನವದೆಹಲಿ: ನೀಟ್ ಪ್ರತಿಭಟನೆಯಲ್ಲಿ(NEET Protest) ಭಾಗವಹಿಸಿದ ವಿದ್ಯಾರ್ಥಿಗಳ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ಸ್ಪಷ್ಟ ಆದೇಶವಿದ್ದರೂ ವಿದ್ಯಾರ್ಥಿಯೊಬ್ಬನಿಗೆ ನೋಟಿಸ್ ನೀಡಿದ ಗ್ರೇಟರ್ ನೋಯ್ಡಾ ಮ್ಯಾಜಿಸ್ಟ್ರೇಟ್ ಕ್ರಮಕ್ಕೆ ಸುಪ್ರೀಂ ಕೋರ್ಟ್(Supreme Court) ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
“ನಮ್ಮ ಆದೇಶವನ್ನು ಉಲ್ಲಂಘಿಸಿ ನೋಟಿಸ್ ನೀಡಲು ಮ್ಯಾಜಿಸ್ಟ್ರೇಟ್‌ಗೆ ಎಷ್ಟು ಧೈರ್ಯ? ವಿದ್ಯಾರ್ಥಿಗಳ ವಿರುದ್ಧ ಯಾವುದೇ ದಂಡನಾತ್ಮಕ ಕ್ರಮ ಕೈಗೊಳ್ಳಬಾರದು ಎಂದು ನಾವು ಮೊದಲೇ ಆದೇಶ ನೀಡಿದ್ದೇವೆ. ದೇಶದ ಯುವಜನರ ವಿರುದ್ಧ ಇಂತಹ ಕ್ರಮ ಕೈಗೊಳ್ಳುವ ಪ್ರಶ್ನೆಯೇ ಇಲ್ಲ,” ಎಂದು ಭಾರತದ ಮುಖ್ಯ ನ್ಯಾಯಮೂರ್ತಿ (CJI) ಸೂರ್ಯ ಕಾಂತ್, ನ್ಯಾಯಮೂರ್ತಿಗಳಾದ ಜೋಯ್ಮಾಲ್ಯ ಬಾಗ್ಚಿ ಮತ್ತು ವಿ. ಮೋಹನಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ತೀವ್ರ ಆಕ್ರೋಶ ಹೊರಹಾಕಿದೆ.
ನೀಟ್ (NEET) ಅಕ್ರಮಗಳ ವಿರುದ್ಧ ಸಿಜೆಪಿ (CJP) ಜಂತರ್ ಮಂತರ್‌ನಲ್ಲಿ ನಡೆಸಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಗೌತಮ್ ಬುದ್ಧ ವಿಶ್ವವಿದ್ಯಾಲಯದ ದ್ವಿತೀಯ ವರ್ಷದ ವಿದ್ಯಾರ್ಥಿ ಅಕ್ಷತ್ ತ್ರಿಪಾಠಿಗೆ ಗ್ರೇಟರ್ ನೋಯ್ಡಾದ(Greater Noida) ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಸೆಪ್ಟೆಂಬರ್ 4 ರಂದು ನೋಟಿಸ್ ಜಾರಿ ಮಾಡಿದ್ದರು. ವಿದ್ಯಾರ್ಥಿಯು ಸರ್ಕಾರ ವಿರೋಧಿ ಮಾತುಗಳ ಮೂಲಕ ಶಾಂತಿ ಭಂಗಕ್ಕೆ ಪ್ರಚೋದನೆ ನೀಡುತ್ತಿದ್ದಾನೆ ಎಂದು ಆರೋಪಿಸಿ, 5 ಲಕ್ಷ ರೂ.ಗಳ ವೈಯಕ್ತಿಕ ಬಾಂಡ್ ಹಾಗೂ ಇಬ್ಬರ ಶ್ಯೂರಿಟಿ ನೀಡುವಂತೆ ಸೂಚಿಸಲಾಗಿತ್ತು.
ಹಿರಿಯ ವಕೀಲ ಬಿಶ್ವಜಿತ್ ಭಟ್ಟಾಚಾರ್ಯ ಅವರು ಈ ವಿಚಾರವನ್ನು ಸುಪ್ರೀಂ ಕೋರ್ಟ್ ಗಮನಕ್ಕೆ ತಂದರು. ನೋಟಿಸ್ ನೀಡಿದ್ದನ್ನು ಹಿಂಪಡೆಯಲಾಗಿದ್ದರೂ ಸುಪ್ರೀಂ ಕೋರ್ಟ್ ಆದೇಶವನ್ನು ಉಲ್ಲಂಘಿಸಿರುವುದು ನ್ಯಾಯಾಂಗ ನಿಂದನೆಯಾಗಿದೆ. ವಿದ್ಯಾರ್ಥಿಗಳಲ್ಲಿ ಭಯದ ವಾತಾವರಣ ಸೃಷ್ಟಿಸಲು ಅಧಿಕಾರಿಗಳಿಗೆ ಅವಕಾಶ ನೀಡಬಾರದು” ಎಂದು ವಾದಿಸಿದರು. ಇದನ್ನೂ ಓದಿ: ಸಿದ್ಧಾರ್ಥ ಟ್ರಸ್ಟ್‌ಗೆ ನಿಯಮಬಾಹಿರವಾಗಿ ಸೈಟ್ ವಿಚಾರ – ಖರ್ಗೆ ಕುಟುಂಬ ವಿರುದ್ಧದ ಕೇಸ್‌ಗೆ ಹೈಕೋರ್ಟ್ ತಿರುವು!
ವಿಚಾರಣೆ ವೇಳೆ ಸಿಜೆಐ, ಹಿಂದಿನ ನಿರ್ದೇಶನಗಳ ಹೊರತಾಗಿಯೂ ಇಂತಹ ನೋಟಿಸ್ ನೀಡಿರುವುದು ನ್ಯಾಯಾಲಯಕ್ಕೆ ಆಶ್ಚರ್ಯ ತಂದಿದೆ. ನಮ್ಮ ಯುವಕರ ವಿರುದ್ಧ ಕ್ರಮ ಕೈಗೊಳ್ಳುವ ಪ್ರಶ್ನೆಯೇ ಇಲ್ಲ. ನಾವು ಸ್ಪಷ್ಟ ಆದೇಶವನ್ನು ನೀಡಿದ್ದೇವೆ ಎಂದು ಸೂಚಿಸಿದರು.
ಈ ಕುರಿತ ಸಂಪೂರ್ಣ ವಿವರ ಹಾಗೂ ನೋಟಿಸ್ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಸೂಚಿಸಿರುವ ಪೀಠ, ಗ್ರೇಟರ್ ನೋಯ್ಡಾ ಪ್ರಾಧಿಕಾರದಿಂದ ಈ ಬಗ್ಗೆ ಸಮಗ್ರ ವಿವರಣೆ ಕೇಳುವುದಾಗಿ ತಿಳಿಸಿದೆ.
