– ರಸ್ತೆ ಆಗದಿದ್ರೆ ಮುಂದಿನ ಚುನಾವಣೆ ಬಹಿಷ್ಕಾರದ ಎಚ್ಚರಿಕೆ
ಚಿಕ್ಕಮಗಳೂರು: ರೈತರಿಗೆ ಹೆಣ್ಣು ಕೊಡಲ್ಲ ಅನ್ನೋ ಕಾಲ ಹೋಗಿ, ನಿಮ್ಮೂರಿನ ರಸ್ತೆ (Road) ಸರಿ ಇಲ್ಲ, ಹೆಣ್ಣು ಕೊಡಲ್ಲ ಅನ್ನೋ ಕಾಲ ಮಲೆನಾಡಿಗೆ ಬಂದಿದೆ.
ಕಳಸ (Kalasa) ತಾಲೂಕಿನ ಕಾಡಂಚಿನ ಕುಗ್ರಾಮಗಳಲ್ಲಿ ರಸ್ತೆಗಳೇ ಸರಿ ಇಲ್ಲ. ಎಡೆಯೂರು, ಮರಸಣಿಗೆ, ಮಾವಿನಕೆರೆ, ಕೆ.ಕೆಳಗೂರು ಗ್ರಾಮಗಳ ರಸ್ತೆಗಳು ಸಂಪೂರ್ಣ ಹಾಳಾಗಿವೆ. ಇದರಿಂದಾಗಿ ಗ್ರಾಮದ ಯುವಕರಿಗೆ ವಧುವನ್ನೇ ಯಾರೂ ಕೊಡುತ್ತಿಲ್ಲ. ಇದನ್ನೂ ಓದಿ: ಯಶವಂತಪುರ ಎಪಿಎಂಸಿಯಲ್ಲಿ ಪೆಟ್ಟಿಗೆ ಅಂಗಡಿಯಲ್ಲಿ ಕೂಲಿಕಾರರೊಂದಿಗೆ ಇಡ್ಲಿ ತಿಂದ ಡಿಕೆಶಿ

ಸುಮಾರು 450-500 ಮನೆಗಳಿರೋ ಕೂಲಿ ಕಾರ್ಮಿಕರು ಈ ಗ್ರಾಮಗಳಲ್ಲಿ ವಾಸವಾಗಿದ್ದಾರೆ. 20 ವರ್ಷಗಳ ಹಿಂದೆ ಜಿಪಂ ಅನುದಾನದಲ್ಲಿ ಈ ರಸ್ತೆಗೆ ಡಾಂಬಾರ್ ಹಾಕಲಾಗಿತ್ತು. ಇದಾದ ಬಳಿಕ ಈ ರಸ್ತೆ ಹೊಂಡ ಗುಂಡಿಗಳಾದರೂ ಯಾವ ರಿಪೇರಿಯನ್ನೂ ಮಾಡಿಲ್ಲ. ಶಾಲಾ-ಕಾಲೇಜಿಗೆ ಹೋಗುವ 70-80 ಮಕ್ಕಳು ರಸ್ತೆ ಇಲ್ಲದೇ ದಿನ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಹಳ್ಳಿಗರು 10 ವರ್ಷದಿಂದ ರಸ್ತೆಗಾಗಿ ಮನವಿ ಮಾಡುತ್ತಲೇ ಇದ್ದಾರೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಆಡಳಿತ ವರ್ಗ ರಸ್ತೆಗೆ ಟಾರ್ ಹಾಕಿಸಿದ್ದಕ್ಕಿಂತ ಹಳ್ಳಿಗರ ಮೂಗಿಗೆ ತುಪ್ಪ ಸವರಿದ್ದೇ ಹೆಚ್ಚು.
ಚುನಾವಣೆ ಸಂದರ್ಭದಲ್ಲಿ ಗೆದ್ದ ಕೂಡಲೇ ಟಾರ್ ಎಂದಿದ್ದ 3 ಪಕ್ಷದ ಅಭ್ಯರ್ಥಿಗಳು, ಗೆದ್ದ ಬಳಿಕ ಹಣ ಇದೆ, ಮಂಜೂರಾಗಿದೆ ಎಂದು 3 ವರ್ಷ ಕಳೆದಿದ್ದಾರೆ. ರಾಜಕಾರಣಿಗಳ ಬಣ್ಣದ ಮಾತಿಗೆ ಬೇಸತ್ತ ಹಳ್ಳಿಗರು, ರಸ್ತೆ ಸರಿಯಾಗದೇ ಇದ್ದರೆ ಮುಂದಿನ ಚುನಾವಣೆಯ ಬಹಿಷ್ಕಾರದ ಎಚ್ಚರಿಕೆ ಕೊಟ್ಟಿದ್ದಾರೆ. ಇದನ್ನೂ ಓದಿ: ಹೊಳೆನರಸೀಪುರ | ಪೂಜೆ ವಿಚಾರಕ್ಕೆ ಅರ್ಚಕರ ನಡುವೆ ಜಟಾಪಟಿ – ದೇವಾಲಯಕ್ಕೆ ಬೀಗ
