ಬಿಗ್ ಬಾಸ್ ಕನ್ನಡ ಸೀಸನ್ 13ರ ಆಟ ಶುರುವಾಗಿದೆ. ವಿಮಾನದಲ್ಲೇ ಟಾಸ್ಕ್ ನೀಡಿ ಬಿಗ್ ಬಾಸ್ ಸ್ಪರ್ಧಿಗಳಿಗೆ ಶಾಕ್ ಕೊಟ್ಟಿದ್ದಾರೆ. ಮೊದಲ ಟಾಸ್ಕ್‌ನಲ್ಲೇ ಗೆದ್ದ 8 ಸ್ಪರ್ಧಿಗಳು ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಆದರೆ, ಟಾಸ್ಕ್‌ನಲ್ಲಿ ಸೋತ ಉಳಿದ ಸ್ಪರ್ಧಿಗಳು ವಿಮಾನದಲ್ಲೇ ಮತ್ತೊಂದು ದಿನ ಕಳೆಯುವ ಶಿಕ್ಷೆಗೆ ಗುರಿಯಾಗಿದ್ದಾರೆ.
ಸೆ.6ರ ಭಾನುವಾರ ಬಿಗ್ ಬಾಸ್ ಸೀಸನ್ 13 ಗ್ರ್ಯಾಂಡ್ ಓಪನಿಂಗ್ ಪಡೆಯಿತು. ಆಯ್ಕೆಯಾದ 16 ಸ್ಪರ್ಧಿಗಳು ವಿಮಾನದಲ್ಲಿ ದೊಡ್ಮನೆಗೆ ಪ್ರಯಾಣ ಬೆಳೆಸಿದ್ದಾರೆ. ಎಲ್ಲರಿಗೂ ಕಿಚ್ಚ ಸುದೀಪ್ ಅವರು ಬೋರ್ಡಿಂಗ್ ಪಾಸ್ ಕೊಟ್ಟು ಕಳುಹಿಸಿದ್ದಾರೆ.
ಫ್ಲೈಟ್‌ನಲ್ಲೇ ಸ್ಪರ್ಧಿಗಳು ಪರಸ್ಪರ ಪರಿಚಯ ಮಾಡಿಕೊಂಡು ಒಂದು ದಿನ ಕಳೆದರು. ಪ್ರಯಾಣಿಕರು ತಮ್ಮ ಸಹಪ್ರಯಾಣಿಕರನ್ನು ಎಷ್ಟರ ಮಟ್ಟಿಗೆ ಅರ್ಥ ಮಾಡಿಕೊಂಡಿದ್ದಾರೆ ಎಂಬುದನ್ನು ತಿಳಿಯಲು ಸ್ಪರ್ಧಿಗಳಿಗೆ ಬಿಗ್ ಬಾಸ್ ಮೊದಲ ಟಾಸ್ಕ್ ಕೊಟ್ಟರು. ಅದರಂತೆ, ಒಬ್ಬ ಪ್ರಯಾಣಿಕ ತನಗೆ ಇಷ್ಟವಾದ ಸಹ ಪ್ರಯಾಣಿಕನಿಗೆ ಹೂ ಮಾಲೆ ಹಾಕುವುದು, ಇಷ್ಟವಾಗದ ಇನ್ನೊಬ್ಬ ಪ್ರಯಾಣಿಕನಿಗೆ, ಆತನ ಭಾವಚಿತ್ರವನ್ನು ಸೂಟ್‌ಕೇಸ್‌ಗೆ ಅಂಟಿಸಿ ವಿಮಾನದಿಂದ ಹೊರಹಾಕುವ ಟಾಸ್ಕ್ ನೀಡಲಾಯಿತು.
ಎಲ್ಲಾ ಸ್ಪರ್ಧಿಗಳು ತಮಗೆ ಇಷ್ಟವಾದವರಿಗೆ ಹೂವಿನ ಹಾರ ಹಾಕಿದರು. ಇಷ್ಟವಾಗದವರ ಭಾವಚಿತ್ರವನ್ನು ಸೂಟ್‌ಕೇಸ್‌ಗೆ ಅಂಟಿಸಿ ವಿಮಾನದಿಂದ ಕಿಕ್ ಮಾಡಿದರು. ಈ ಟಾಸ್ಕ್‌ನಲ್ಲಿ ಜಗದೀಶ್, ತಾಂಡವ್ ರಾಮ್, ಓಂ ಪ್ರಕಾಶ್, ಕಾವ್ಯ ಗೌಡ, ಸಂಗೀತಾ, ಗಗನ್, ಆಸಿಯಾ, ಯಶಸ್ ಗೆದ್ದರು. ಇವರು ಸಹಪ್ರಯಾಣಿಕರಿಂದ ಹೂಮಾಲೆಯನ್ನಷ್ಟೇ ಪಡೆದರು. ಸೂಟ್‌ಕೇಸ್ ಕಿಕ್‌ನಿಂದ ತಪ್ಪಿಸಿಕೊಂಡರು. ಟಾಸ್ಕ್ ಗೆದ್ದ ಇವರ ಪ್ರಯಾಣವನ್ನು ಕೊನೆಗೊಳಿಸಿ ಬಿಗ್ ಬಾಸ್ ದೊಡ್ಮನೆಗೆ ಅಧಿಕೃತವಾಗಿ ಆಹ್ವಾನಿಸಿದರು. ಟಾಸ್ಕ್ ಸೋತ ಉಳಿದ ಸ್ಪರ್ಧಿಗಳು ಇನ್ನೊಂದು ದಿನ ವಿಮಾನದಲ್ಲೇ ಪ್ರಯಾಣ ಬೆಳೆಸುವ ಶಿಕ್ಷೆಗೆ ಗುರಿಯಾಗಿದ್ದಾರೆ.

