– ಉಡುಪಿ ಗ್ರ್ಯಾಂಡ್, ಮಕಾವ್ ಹೊಟೇಲ್ ತಾತ್ಕಾಲಿಕ ಬಂದ್
ಚಾಮರಾಜನಗರ: ನಗರದ ವಿವಿಧ ಹೊಟೇಲ್, ರೆಸ್ಟೋರೆಂಟ್‌ಗಳು ಹಾಗೂ ಆಹಾರ ತಯಾರಿಕಾ ಘಟಕಗಳ ಮೇಲೆ ಚಾಮರಾಜನಗರ ಜಿಲ್ಲಾಧಿಕಾರಿ ಶ್ರೀರೂಪಾ ನೇತೃತ್ವದಲ್ಲಿ ದಿಢೀರ್ ತಪಾಸಣೆ ನಡೆಸಿದ್ದಾರೆ.
ತಪಾಸಣೆ ವೇಳೆ ಉಡುಪಿ ಗ್ರ್ಯಾಂಡ್ ಹೊಟೇಲ್‌ನಲ್ಲಿ ಆಹಾರ ಪದಾರ್ಥಗಳಿಗೆ ಕೃತಕ ಬಣ್ಣ ಮಿಶ್ರಣ, ಅಡುಗೆ ಮನೆಯ ಸ್ವಚ್ಛತೆಯ ಕೊರತೆ ಹಾಗೂ ಅವಧಿ ಮೀರಿದ ಆಹಾರ ಪದಾರ್ಥಗಳ ಬಳಕೆ ಕಂಡುಬಂದಿದೆ. ಇದೇ ವೇಳೆ ಮಕಾವ್ ಹೊಟೇಲ್‌ನಲ್ಲಿ ತಾಜಾ ಇಲ್ಲದ ಮಾಂಸ ಹಾಗೂ ಮಶ್ರೂಮ್‌ಗಳನ್ನು ಬಳಕೆ ಮಾಡುತ್ತಿರುವುದು ಪತ್ತೆಯಾಗಿದೆ. ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ ಎರಡೂ ಹೊಟೇಲ್‌ಗಳನ್ನ ತಾತ್ಕಾಲಿಕವಾಗಿ ಮುಚ್ಚುವಂತೆ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.

ಕೈಗಾರಿಕಾ ಪ್ರದೇಶದಲ್ಲಿರುವ ಕೇನ್ಸ್ ಹಾಗೂ ಕಲರ್ ಟೋನ್ ಉದ್ಯಮ ಸಂಸ್ಥೆಗಳಿಗೂ ಅಧಿಕಾರಿಗಳು ಭೇಟಿ ನೀಡಿ ಆಹಾರ ತಯಾರಿಕೆ ಮತ್ತು ಗುಣಮಟ್ಟದ ಕುರಿತು ಪರಿಶೀಲನೆ ನಡೆಸಿದ್ದಾರೆ. ಇದರ ಜೊತೆಗೆ ನಗರದ ರಸ್ತೆಯ ಬದಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಬೇಕರಿಗಳಿಗೂ ಭೇಟಿ ನೀಡಿದ ಜಿಲ್ಲಾಧಿಕಾರಿ ಶ್ರೀರೂಪಾ, ಆಹಾರ ಪದಾರ್ಥಗಳ ಗುಣಮಟ್ಟ, ಸ್ವಚ್ಛತೆ ಹಾಗೂ ಅವಧಿ ಪರಿಶೀಲಿಸಿದ್ದಾರೆ.
ಅವಧಿ ಮೀರಿದ ಆಹಾರ, ಕೃತಕ ಬಣ್ಣ ಹಾಗೂ ಸ್ವಚ್ಛತೆಯ ಕೊರತೆಯ ವಿರುದ್ಧ ಅಧಿಕಾರಿಗಳ ದಿಢೀರ್ ಕಾರ್ಯಾಚರಣೆ ಮುಂದುವರಿದಿದ್ದು, ಸಾರ್ವಜನಿಕರ ಆರೋಗ್ಯದೊಂದಿಗೆ ರಾಜಿ ಇಲ್ಲ ಎಂಬ ಸಂದೇಶವನ್ನು ಜಿಲ್ಲಾಡಳಿತ ನೀಡಿದೆ.
