ಸಂಜೆಯ ಸಮಯದಲ್ಲಿ ಚಹಾ ಜೊತೆ ತಿನ್ನಲು ಅಥವಾ ಮನೆಯಲ್ಲೇ ಪಾರ್ಟಿ ಆಯೋಜಿಸಿದಾಗ ಮಾಡಬಹುದಾದ ರುಚಿಕರವಾದ ಸ್ನ್ಯಾಕ್ಸ್‌ಗಳಲ್ಲಿ ವೆಜ್ ಸೀಕ್ ಕಬಾಬ್ ಕೂಡ ಒಂದು. ತರಕಾರಿಗಳು, ಆಲೂಗಡ್ಡೆ ಮತ್ತು ಪನೀರ್‌ಗಳನ್ನು ಬಳಸಿ ತಯಾರಿಸುವ ಈ ಕಬಾಬ್ ಹೊರಗೆ ಸ್ವಲ್ಪ ಕ್ರಿಸ್ಪಿಯಾಗಿ, ಒಳಗೆ ಮೃದುವಾಗಿ ಹಾಗೂ ಮಸಾಲೆಯುಕ್ತವಾಗಿರುತ್ತದೆ. ಇವತ್ತಿನ ನಮ್ಮ ರೆಸಿಪಿಯಲ್ಲಿ ಮನೆಯಲ್ಲೇ ರೆಸ್ಟೋರೆಂಟ್ ಶೈಲಿಯ ವೆಜ್ ಸೀಕ್ ಕಬಾಬ್ (Veg Seekh Kebab) ಯಾವ ತಯಾರಿಸುವುದು ಎಂಬುದನ್ನು ತಿಳಿಸುತ್ತಿದ್ದೇವೆ. ನೀವೂ ಕೂಡ ಮನೆಯಲ್ಲಿ ಒಂದ್ಸಲ ಇದನ್ನ ಟ್ರೈ ಮಾಡಿ.

ಬೇಕಾಗುವ ಪದಾರ್ಥಗಳು:
ಆಲೂಗಡ್ಡೆ – 3 ಮಧ್ಯಮ ಗಾತ್ರ
ಕ್ಯಾರೆಟ್ – 1
ಬೀನ್ಸ್ – ಕಾಲು ಕಪ್
ಹಸಿರು ಬಟಾಣಿ – ಕಾಲು ಕಪ್
ಪನೀರ್ – 100 ಗ್ರಾಂ
ಬ್ರೆಡ್‌ಕ್ರಂಬ್ಸ್ – ಕಾಲು ಕಪ್
ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಚಮಚ
ಹಸಿಮೆಣಸಿನಕಾಯಿ – 1-2
ಕೊತ್ತಂಬರಿ ಸೊಪ್ಪು – 2 ಚಮಚ
ಕಸೂರಿ ಮೇಥಿ – 1 ಚಮಚ
ಧನಿಯಾ ಪುಡಿ – 1 ಚಮಚ
ಜೀರಿಗೆ ಪುಡಿ – ಕಾಲು ಚಮಚ
ಗರಂ ಮಸಾಲಾ – ಕಾಲು ಚಮಚ
ಚಾಟ್ ಮಸಾಲಾ – ಕಾಲು ಚಮಚ
ಮೆಣಸಿನ ಪುಡಿ – ಕಾಲು ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ನಿಂಬೆ ರಸ – 1 ಚಮಚ
ಎಣ್ಣೆ ಅಥವಾ ಬೆಣ್ಣೆ – 2-3 ಚಮಚ

ಮಾಡುವ ವಿಧಾನ:
– ಮೊದಲು ಹೆಚ್ಚಿದ ಆಲೂಗಡ್ಡೆ, ಕ್ಯಾರೆಟ್, ಬೀನ್ಸ್ ಮತ್ತು ಹಸಿರು ಬಟಾಣಿಯನ್ನು ಚೆನ್ನಾಗಿ ಬೇಯಿಸಿಕೊಳ್ಳಿ. ಬೇಯಿಸಿದ ನಂತರ ತರಕಾರಿಗಳನ್ನು ಸಂಪೂರ್ಣವಾಗಿ ತಣ್ಣಗಾಗಲು ಬಿಡಿ.
– ನಂತರ ಬೇಯಿಸಿದ ಆಲೂಗಡ್ಡೆ, ಕ್ಯಾರೆಟ್, ಬೀನ್ಸ್ ಮತ್ತು ಬಟಾಣಿಯನ್ನು ಒಂದು ಬೌಲ್‌ಗೆ ಹಾಕಿ ಚೆನ್ನಾಗಿ ಮ್ಯಾಶ್ ಮಾಡಿ. ಇದಕ್ಕೆ ತುರಿದ ಅಥವಾ ಪುಡಿ ಮಾಡಿದ ಪನೀರ್ ಸೇರಿಸಿ.
– ಈಗ ಮಿಶ್ರಣಕ್ಕೆ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಸಣ್ಣದಾಗಿ ಕತ್ತರಿಸಿದ ಹಸಿಮೆಣಸಿನಕಾಯಿ ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ. ನಂತರ ಧನಿಯಾ ಪುಡಿ, ಜೀರಿಗೆ ಪುಡಿ, ಗರಂ ಮಸಾಲಾ, ಚಾಟ್ ಮಸಾಲಾ, ಕೆಂಪು ಮೆಣಸಿನ ಪುಡಿ, ಕಸೂರಿ ಮೇಥಿ ಮತ್ತು ಉಪ್ಪು ಸೇರಿಸಿ. ಕೊನೆಯಲ್ಲಿ ನಿಂಬೆ ರಸ ಹಾಕಿ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ.
– ಬಳಿಕ ಅರ್ಧ ಕಪ್ ಬ್ರೆಡ್‌ಕ್ರಂಬ್ಸ್ ಅನ್ನು ಸ್ವಲ್ಪ ಸ್ವಲ್ಪವಾಗಿ ಸೇರಿಸುತ್ತಾ ಮಿಶ್ರಣ ಮಾಡಿ. ಮಿಶ್ರಣ ಕೈಗೆ ಅಂಟದೇ ಕಬಾಬ್ ಆಕಾರ ನೀಡಲು ಸಾಧ್ಯವಾಗುವಷ್ಟು ಗಟ್ಟಿಯಾಗಿರಬೇಕು.
– ಈಗ ಕೈಗೆ ಸ್ವಲ್ಪ ಎಣ್ಣೆ ಸವರಿಕೊಳ್ಳಿ. ಮಿಶ್ರಣದಿಂದ ಒಂದು ಭಾಗ ತೆಗೆದುಕೊಂಡು ಉದ್ದನೆಯ ಸಿಲಿಂಡರ್ ಆಕಾರದಲ್ಲಿ ಮಾಡಿ.
– ಬಳಿಕ ಒಂದು ನಾನ್‌ಸ್ಟಿಕ್ ಅಥವಾ ಕಬ್ಬಿಣದ ತವಾ ಬಿಸಿ ಮಾಡಿ. ಅದರ ಮೇಲೆ ಸ್ವಲ್ಪ ಎಣ್ಣೆ ಅಥವಾ ಬೆಣ್ಣೆ ಹಾಕಿ.
– ತವಾ ಬಿಸಿಯಾದ ಬಳಿಕ ಕಬಾಬ್‌ಗಳನ್ನು ತವಾದ ಮೇಲೆ ಜಾಗರೂಕತೆಯಿಂದ ಇರಿಸಿ. ಮಧ್ಯಮ ಉರಿಯಲ್ಲಿ ಬೇಯಿಸುತ್ತಾ ಪ್ರತಿ ಬದಿಯನ್ನು ನಿಧಾನವಾಗಿ ತಿರುಗಿಸಿ.
– ಎಲ್ಲಾ ಬದಿಗಳೂ ಗೋಲ್ಡನ್ ಬ್ರೌನ್ ಬಣ್ಣಕ್ಕೆ ಬಂದು ಹೊರಭಾಗ ಸ್ವಲ್ಪ ಕ್ರಿಸ್ಪಿಯಾಗುವವರೆಗೆ ಬೇಯಿಸಿ. ಸುಮಾರು 8-10 ನಿಮಿಷಗಳಲ್ಲಿ ಕಬಾಬ್ ಸಿದ್ಧವಾಗುತ್ತದೆ.
– ಕೊನೆಯಲ್ಲಿ ಕಬಾಬ್‌ಗಳ ಮೇಲೆ ಸ್ವಲ್ಪ ಬೆಣ್ಣೆ ಹಚ್ಚಿ 1-2 ನಿಮಿಷ ಹೆಚ್ಚಿನ ಉರಿಯಲ್ಲಿ ಸ್ವಲ್ಪ ಗ್ರಿಲ್ ಮಾಡಿದರೆ ಸುಂದರವಾದ ಗ್ರಿಲ್ ಮಾರ್ಕ್ ಮತ್ತು ರಿಚ್ ಫ್ಲೇವರ್ ಬರುತ್ತದೆ.
– ಬಿಸಿ ಬಿಸಿಯಾದ ವೆಜ್ ಸೀಕ್ ಕಬಾಬ್ ಅನ್ನು ಈರುಳ್ಳಿ ರಿಂಗ್ಸ್, ನಿಂಬೆ ತುಂಡುಗಳು ಮತ್ತು ಕೊತ್ತಂಬರಿ-ಪುದೀನಾ ಹಸಿರು ಚಟ್ನಿಯೊಂದಿಗೆ ಸರ್ವ್ ಮಾಡಬಹುದು.
