ಬಳ್ಳಾರಿ: ಸರ್ಕಾರಿ ನಿವಾಸ ತೆರವು ವಿಚಾರದಲ್ಲಿ ಮಾಜಿ ಸಚಿವ ಡಾ. ಎಚ್.ಸಿ. ಮಹದೇವಪ್ಪ(Mahadevappa) ಪರ ಬ್ಯಾಟ್ ಬೀಸಿದ ಮಾಜಿ ಸಂಸದ ಪ್ರತಾಪ್ ಸಿಂಹ(Pratap Simha) ಹಾಲಿ ಸಚಿವ ಬೈರತಿ ಸುರೇಶ್(Byrathi Suresh) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕಂಪ್ಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಮಹದೇವಪ್ಪ ಅವರು ಹಿರಿಯ ನಾಯಕರು. ಸಿದ್ದರಾಮಯ್ಯ ಅವರಿಗೆ ಹೆಗಲು ಕೊಟ್ಟು, ಕಷ್ಟದ ದಿನಗಳಲ್ಲಿ ಜೊತೆಯಾಗಿ ನಿಂತವರು. ನಮ್ಮ ಹಳೆ ಮೈಸೂರು ಭಾಗದ ದಲಿತರ ಪ್ರಬಲ ಧ್ವನಿಯಾಗಿದ್ದಾರೆ. ಅಂತವರಿಗೆ ಸರ್ಕಾರಿ ಮನೆ ಖಾಲಿ ಮಾಡಲು ಸೂಕ್ತ ಸಮಯಾವಕಾಶ ನೀಡಬೇಕು ಎಂದು ಹೇಳಿದರು.
3 ರಿಂದ 6 ತಿಂಗಳು ತಡವಾಗಿ ಖಾಲಿ ಮಾಡಿದರೆ ಏನು ಮುಳುಗಿ ಹೋಗುತ್ತದೆ? ಸುರೇಶ್‌ಗೆ ಅದೇ ಮನೆ ಬೇಕೆಂದು ಹಠ ಹಿಡಿದಿರುವುದೇಕೆ? ಪಕ್ಷ ಕಟ್ಟಿದ ಹಿರಿಯ ನಾಯಕರಿಗೆ ಒಂದು ನಿವಾಸದ ವಿಚಾರದಲ್ಲಿ ಈ ರೀತಿ ಅಗೌರವ ತೋರುವುದು ಸರಿಯಲ್ಲ. ಅದೇನು ನಿಮ್ಮ ಸ್ವಂತ ಮನೆಯೇ? ಎಂದು ನೇರವಾಗಿ ಪ್ರಶ್ನಿಸಿದರು. ಇದನ್ನೂ ಓದಿ: ಸಮಾವೇಶಕ್ಕೆ ಆಪ್ತರ ಗೈರು: ಸಿದ್ದರಾಮಯ್ಯ ಆಪ್ತಕೂಟದಲ್ಲಿ ಬಿರುಕು?
ಬೆಂಗಳೂರಿನಲ್ಲಿ ನಡೆದ ಅಹಿಂದ ಸಮಾವೇಶವನ್ನು ಉಲ್ಲೇಖಿಸಿ ಕಾಂಗ್ರೆಸ್ ವಿರುದ್ಧ ಅವರು, “ಸಿದ್ದರಾಮಯ್ಯ ಅಹಿಂದ ಸಮಾವೇಶ ನಡೆಸಿದರು, ಆದರೆ ಅದರ ಮೂಲ ಶಕ್ತಿಯಾಗಿದ್ದ ಸತೀಶ್ ಜಾರಕಿಹೊಳಿ ಅವರನ್ನೇ ಕರೆದಿಲ್ಲ. ಅಹಿಂದ ಎಂದರೆ ಸಿದ್ದರಾಮಯ್ಯ ಒಬ್ಬರೇ ಅಲ್ಲ ಎಂಬುದನ್ನು ಸತೀಶ್ ಜಾರಕಿಹೊಳಿ ಈಗಾಗಲೇ ತೋರಿಸಿದ್ದಾರೆ. ಕಾಂಗ್ರೆಸ್ ಸಂಪೂರ್ಣವಾಗಿ ಒಡೆದ ಮನೆಯಾಗಿದ್ದು, ರಾಜ್ಯದ ಜನರು ಆಡಳಿತದಿಂದ ಬೇಸತ್ತಿದ್ದಾರೆ. ರಾಜ್ಯಕ್ಕೆ ಸಮರ್ಥ ನಾಯಕತ್ವ ನೀಡುವ ಉದ್ದೇಶದಿಂದ ಬಿ.ವೈ. ವಿಜಯೇಂದ್ರ ಪಾದಯಾತ್ರೆ ನಡೆಸುತ್ತಿದ್ದಾರೆ” ಎಂದರು. ಇದನ್ನೂ ಓದಿ: ಸರ್ಕಾರಿ ಬಂಗಲೆಗಾಗಿ ಹಾಲಿ, ಮಾಜಿ ಸಚಿವರ ಫೈಟ್ – ಮಹದೇವಪ್ಪ ವಾಸವಿರುವಾಗಲೇ ಜೆಸಿಬಿ ಘರ್ಜನೆ
ಇಬ್ಬರ ವಿರುದ್ಧ ಹೋರಾಟ:
ರಾಜ್ಯ ಸಚಿವ ಸಂಪುಟದಲ್ಲಿ ಮತ್ತಿಬ್ಬರು ಸಚಿವರ ವಿಕೆಟ್ ಬೀಳಲಿದೆ ಎಂಬ ಚರ್ಚೆ ಕುರಿತು ಪ್ರತಿಕ್ರಿಯಿಸಿದ ಅವರು, ಈ ಪಾದಯಾತ್ರೆ ಮುಗಿದ ಬಳಿಕ ಸಚಿವರಾದ ಸಂತೋಷ್ ಲಾಡ್ ಹಾಗೂ ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ತೀವ್ರ ಹೋರಾಟ ಕೈಗೆತ್ತಿಕೊಳ್ಳಬೇಕು ಎಂದು ಒತ್ತಾಯಿಸಿದರು.
