– ಹಿಂದೂ ಗುರುತಿಗಾಗಿ ಆಧಾರ್ ಕೂಡ ಕಡ್ಡಾಯ
ಮುಂಬೈ: ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಮುಖ್ಯಸ್ಥ ಮೋಹನ್ ಭಾಗವತ್ (Mohan Bhagwat ) ಅವರು ಇತ್ತೀಚೆಗೆ ನ್ಯೂಯಾರ್ಕ್ನಲ್ಲಿ ಸಾರ್ವತ್ರಿಕ ಏಕತೆಯ ಕುರಿತು ಮಾತನಾಡಿದ ಒಂದು ವಾರದೊಳಗೆ, ವಿಶ್ವ ಹಿಂದೂ ಪರಿಷತ್ (VHP) ಮಹಾರಾಷ್ಟ್ರದಾದ್ಯಂತ ನಡೆಯಲಿರುವ ನವರಾತ್ರಿ ಉತ್ಸವದ ಕಾರ್ಯಕ್ರಮಗಳಿಗೆ ಮುಸ್ಲಿಮರ ಪ್ರವೇಶವನ್ನು ನಿರ್ಬಂಧಿಸಲು ನಿರ್ಧರಿಸಿದೆ.
ಹೌದು. ನವರಾತ್ರಿ ಆಚರಣೆಯ (Navratri Events) ಭಾಗವಾಗಿ 10 ದಿನಗಳ ಕಾಲ ನಡೆಯುವ ಗರಬಾ ಮತ್ತು ದಾಂಡಿಯಾ ಕಾರ್ಯಕ್ರಮಗಳಿಗೆ ಮುಸ್ಲಿಮರ ಪ್ರವೇಶವನ್ನು ನಿರ್ಬಂಧಿಸಲು ನಿರ್ಧರಿಸಿದೆ. ಜೊತೆಗೆ ಕಾರ್ಯಕ್ರಮಗಳಲ್ಲಿ ಭಾಗವಹಿಸುವವರಿಗೆ ತನ್ನದೇ ಆದ ಕಠಿಣ ನಿಯಮಗಳನ್ನ ಮಾಡಿಕೊಂಡಿದೆ.
ಕಾರ್ಯಕ್ರಮಕ್ಕೆ ಆಗಮಿಸುವವರ ಆಧಾರ್ ಕಾರ್ಡ್ ಪರಿಶೀಲನೆ ನಡೆಸಬೇಕು. ಜೊತೆಗೆ ಅವರ ಹಿಂದೂ ಗುರುತನ್ನ ಖಚಿತಪಡಿಸಿಕೊಳ್ಳಲು ಹಣೆಯ ಮೇಲೆ ಕಡ್ಡಾಯವಾಗಿ ತಿಲಕ ಇಡುವಂತೆ ಆಯೋಜಕರಿಗೆ ಸೂಚನೆ ನೀಡಲಾಗಿದೆ. ಈ ಕುರಿತು ಮಾಡಬೇಕಾದ ಮತ್ತು ಮಾಡಬಾರದ ನಿಯಮಗಳನ್ನೂ ವಿಎಚ್ಪಿ ಪಟ್ಟಿ ಮಾಡಿದೆ.

ಮಹಾರಾಷ್ಟ್ರದಾದ್ಯಂತ (Maharashtra) ನವರಾತ್ರಿ ಕಾರ್ಯಕ್ರಮಗಳಲ್ಲಿ ಮುಸ್ಲಿಮರ (Muslims) ಭಾಗವಹಿಸುವಿಕೆಗೆ ನಿಷೇಧ ಹೇರಿರುವ ಕುರಿತು ಮಾತನಾಡಿದ ವಿಎಚ್ಪಿ ರಾಷ್ಟ್ರೀಯ ವಕ್ತಾರ ಹಾಗೂ ಜಂಟಿ ಕಾರ್ಯದರ್ಶಿ ಶ್ರೀರಾಜ್ ನಾಯರ್, ʻನವರಾತ್ರಿ ಹಬ್ಬದ ಸಂದರ್ಭದಲ್ಲಿ ನಡೆಯುವ ಗರಬಾ-ದಾಂಡಿಯಾ ನೃತ್ಯದಲ್ಲಿ ಮುಸ್ಲಿಮರ ಭಾಗವಹಿಸುವಿಕೆಗೆ ಅವಕಾಶ ನೀಡದಿರಲು ನಾವು ನಿರ್ಧರಿಸಿದ್ದೇವೆʼ ಎಂದು ತಿಳಿಸಿದ್ದಾರೆ.
ನವರಾತ್ರಿ ಹಬ್ಬ ಕೇವಲ ಹಾಡು ಮತ್ತು ನೃತ್ಯಕ್ಕೆ ಸೀಮಿತವಾಗಿಲ್ಲ. ಈ ಹಬ್ಬ ದೇವಿಯ ಆರಾಧನೆಗೆ ಸಂಬಂಧಿಸಿದೆ. ಮೂರ್ತಿ ಪೂಜೆಯನ್ನು ವಿರೋಧಿಸುವ ಮುಸ್ಲಿಮರು ಈ ಹಬ್ಬದಲ್ಲಿ ಏಕೆ ಭಾಗವಹಿಸಬೇಕು? ನವರಾತ್ರಿ ಕಾರ್ಯಕ್ರಮದಲ್ಲಿ ಮುಸ್ಲಿಮರಿಗೆ ಅವಕಾಶ ನೀಡದಿದ್ದ ಮಾತ್ರಕ್ಕೆ ವಿಹೆಚ್ಪಿ ಸಮುದಾಯಕ್ಕೆ ವಿರುದ್ಧವಾಗಿದೆ ಎಂದರ್ಥವಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ.
ಧಾರ್ಮಿಕ ಮತಾಂತರ ಮತ್ತು ಗೋಹತ್ಯೆ ವಿರೋಧದ ತನ್ನ ಪ್ರಮುಖ ಅಜೆಂಡಾದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಲು ವಿಎಚ್ಪಿ ಸಿದ್ಧವಿಲ್ಲ. ಹಬ್ಬಗಳು ಹಿಂದೂಗಳ ಸಾಂಸ್ಕೃತಿಕ ಪರಂಪರೆಯ ಅವಿಭಾಜ್ಯ ಅಂಗ ಅನ್ನೋದು ನಮ್ಮ ನಂಬಿಕೆ. ಹೀಗಾಗಿ ಅದರ ಸ್ವರೂಪದಲ್ಲಿ ಯಾವುದೇ ರೀತಿಯ ಬದಲಾವಣೆಗೆ ಅವಕಾಶ ನೀಡಲು ಸಾಧ್ಯವಿಲ್ಲ. ಆದರೆ, ಈ ನಿರ್ಬಂಧಗಳು ಮುನ್ನೆಚ್ಚರಿಕಾ ಕ್ರಮಗಳಾಗಿದ್ದು, ಮುಸ್ಲಿಮರು ಅಥವಾ ಯಾವುದೇ ಇತರ ಸಮುದಾಯವನ್ನ ಗುರಿಯಾಗಿಸಿಕೊಂಡಿಲ್ಲ ಎಂದು ಎಂದು ತಿಳಿಸಿದ್ದಾರೆ.
ಇತ್ತೀಚೆಗೆ ನ್ಯೂಯಾರ್ಕ್ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಮಾತನಾಡುತ್ತಾ, ಯಾವುದೇ ಹಿಂದೂ ಭಾರತದಲ್ಲಿ ಮುಸ್ಲಿಮರು ಇರಬಾರದು ಎಂದು ಭಾವಿಸಿದರೆ, ಆತ ಹಿಂದೂವೇ ಅಲ್ಲ. ನೀವು ನಿಮ್ಮನ್ನು ಹಿಂದೂ ಎಂದು ಕರೆಯಬೇಕಾದರೆ, ಎಲ್ಲಾ ಮಾರ್ಗಗಳೂ ಒಂದೇ ಗುರಿಯತ್ತ ಸಾಗುತ್ತವೆ ಎಂಬುದನ್ನು ನಂಬಬೇಕು. ಪ್ರತಿಯೊಬ್ಬ ಮನುಷ್ಯನಿಗೂ ಘನತೆ ಇದೆ. ಮನುಷ್ಯರ ನಡುವೆ ಯಾವುದೇ ವ್ಯತ್ಯಾಸವಿಲ್ಲ ಎಂದು ಪ್ರತಿಪಾದಿಸಿದ್ದರು.
