ಬೆಂಗಳೂರು/ಮೈಸೂರು: ಈ ಬಾರಿಯ ದಸರಾ ಮಹೋತ್ಸವದಲ್ಲಿ ಅಭಿಮನ್ಯು ಆನೆ (Abhimanyu Elephant) ಭಾಗವಹಿಸಲು ಕೊನೆಗೂ ಸರ್ಕಾರದಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ. ಅರಣ್ಯ ಸಚಿವ ರಾಮಲಿಂಗಾ ರೆಡ್ಡಿ ಅವರು ಈ ಸಂಬಂಧ ಅಧಿಕೃತ ಪ್ರಕಟಣೆ ಹೊರಡಿಸಿದ್ದಾರೆ.
ಒಟ್ಟಿನಲ್ಲಿ ಕೋಟ್ಯಂತರ ಅಭಿಮಾನಿಗಳ ಆಸೆಯಂತೆ 6 ಬಾರಿ ಅಂಬಾರಿ ಹೊತ್ತ ಅಭಿಮನ್ಯು ಈ ಬಾರಿ ನಿಶಾನೆ ಆನೆಯಾಗಿ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲಿದ್ದಾನೆ. ಇದನ್ನೂ ಓದಿ: PUBLiC TV Explianer | ಮುಗಿಯಿತು ʻಅಭಿಮನ್ಯು ಯುಗʼ – ಚಿನ್ನದ ಅಂಬಾರಿಗೆ ಯಾರಾಗ್ತಾರೆ ಹೊಸ ಸಾರಥಿ?

ಪ್ರಕಟಣೆಯಲ್ಲಿ ಏನಿದೆ?
ಮೈಸೂರು ದಸರಾ ಕರ್ನಾಟಕದ ನಾಡಹಬ್ಬವಾಗಿದ್ದು, ನಾಡಿನ ಕಲೆ, ಸಂಸ್ಕೃತಿ, ಪರಂಪರೆ ಹಾಗೂ ವೈಭವವನ್ನು ವಿಶ್ವದಾದ್ಯಂತ ಸಾರುವ ಐತಿಹಾಸಿಕ ಉತ್ಸವವಾಗಿದೆ. ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿ ಉತ್ಸವದಲ್ಲಿ ದಸರಾ ಗಜಪಡೆಯ ಆನೆಗಳು ವರ್ಷಗಳಿಂದಲೂ ಪ್ರಮುಖ ಪಾತ್ರ ವಹಿಸುತ್ತಾ ಬಂದಿವೆ. ಈ ಮಹತ್ವದ ದಸರಾ ಪರಂಪರೆಯಲ್ಲಿ ಅಭಿಮನ್ಯು ಆನೆಯ ಸೇವೆ ಅತ್ಯಂತ ವಿಶೇಷ ಹಾಗೂ ಸ್ಮರಣೀಯವಾಗಿದೆ.
ಹಲವು ವರ್ಷಗಳ ಕಾಲ ದಸರಾ ಮಹೋತ್ಸವದಲ್ಲಿ ಭಾಗವಹಿಸಿ, ಅಂಬಾರಿ ಹೊರುವ ಜವಾಬ್ದಾರಿಯನ್ನು ಅತ್ಯಂತ ಶಿಸ್ತು, ಧೈರ್ಯ ಹಾಗೂ ಯಶಸ್ವಿಯಾಗಿ ನಿರ್ವಹಿಸುವ ಮೂಲಕ ಅಭಿಮನ್ಯು ಆನೆ ನಾಡಿನ ಜನರ ಪ್ರೀತಿ ಮತ್ತು ಗೌರವಕ್ಕೆ ಪಾತ್ರವಾಗಿದೆ.
ಅಭಿಮನ್ಯುವಿನ ದೀರ್ಘಕಾಲದ ಅಮೂಲ್ಯ ಸೇವೆಯನ್ನು ಸ್ಮರಿಸುವ ಉದ್ದೇಶದಿಂದ ಇತ್ತೀಚೆಗೆ ಆಯೋಜಿಸಲಾದ ಅಭಿಮನ್ಯು ಆನೆಯ ಬೀಳ್ಕೊಡುಗೆ/ಗೌರವ ಸಮಾರಂಭವು ಅತ್ಯಂತ ಯಶಸ್ವಿಯಾಗಿ ಹಾಗೂ ಅಚ್ಚುಕಟ್ಟಾಗಿ ನೆರವೇರಿದ್ದು, ಸಾರ್ವಜನಿಕರು ಹಾಗೂ ದಸರಾ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಕಾರ್ಯಕ್ರಮವು ಅಭಿಮನ್ಯುವಿನ ಸೇವೆಗೆ ಸಲ್ಲಿಸಿದ ಗೌರವದ ಪ್ರತೀಕವಾಗಿದೆ.

ಇದರ ಮುಂದುವರಿದ ಭಾಗವಾಗಿ, ಮೈಸೂರು ದಸರಾ-2028ರ ಜಂಬೂಸವಾರಿ ಉತ್ಸವದಲ್ಲಿಯೂ ಅಭಿಮನ್ಯುವನ್ನು ಹೆಮ್ಮೆಯಿಂದ ಹಾಗೂ ಗೌರವಪೂರ್ವಕವಾಗಿ ಗಜಪಡೆಯೊಂದಿಗೆ ನಿಶಾನೆ ಆನೆಯಾಗಿ ಈ ವರ್ಷದ ಉತ್ಸವದಲ್ಲಿ ಘನ ಉಪಸ್ಥಿತಿವಹಿಸಿ ವಿಶೇಷ ಸ್ಥಾನ ಕಲ್ಪಿಸುವುದು ಸೂಕ್ತವಾಗಿದೆ. ಇದನ್ನೂ ಓದಿ: ಮೈಸೂರು ದಸರಾ ಆನೆಗಳ ತೂಕ ಪರೀಕ್ಷೆ: ಶ್ರೀಕಂಠನೇ ಹೆಚ್ಚು ಬಲಶಾಲಿ, ಕೊನೇ ಸ್ಥಾನದಲ್ಲಿ ಕಾವೇರಿ
ಅಭಿಮನ್ಯುವಿನಂತಹ ದಸರಾ ಪರಂಪರೆಯ ಹೆಮ್ಮೆಯ ಆನೆಯ ಹಲವು ವರ್ಷಗಳ ಸೇವೆಯನ್ನು ಗೌರವಿಸುವ ನಿಟ್ಟಿನಲ್ಲಿ 2028ರ ಜಂಬೂಸವಾರಿಯಲ್ಲಿ ಗೌರವಪೂರ್ವಕವಾಗಿ ಉಪಸ್ಥಿತಿಗೊಳಿಸುವುದರಿಂದ ದಸರಾ ಮಹೋತ್ಸವದ ವೈಭವ ಹಾಗೂ ಪರಂಪರೆಗೆ ಮತ್ತಷ್ಟು ಮೆರುಗು ಬರಲಿದೆ. ಆದ್ದರಿಂದ, ಮೈಸೂರು ದಸರಾ-2026ರ ಜಂಬೂಸವಾರಿ ಉತ್ಸವದಲ್ಲಿ ಅಭಿಮನ್ಯು ಆನೆಯನ್ನ ನಿಶಾನೆ ಆನೆಯನ್ನಾಗಿಸಿ, ಇದರ ಸೇವೆಯನ್ನು ಸ್ಮರಿಸುವಂತೆ ಸೂಕ್ತ ವ್ಯವಸ್ಥೆ ಹಾಗೂ ಕ್ರಮ ಕೈಗೊಳ್ಳಲು ಕೋರಿದೆ ಎಂದು ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
