– ಯಶವಂತಪುರದಿಂದ ಬೆಳಗ್ಗೆ 6:05ಕ್ಕೆ ನಿರ್ಗಮನ
– ಮಂಗಳೂರಿಗೆ ಮಧ್ಯಾಹ್ನ 2:25ಕ್ಕೆ ಆಗಮನ
ಬೆಂಗಳೂರು: ಯಶವಂತಪುರ(Yesvantpur) ಮತ್ತು ಮಂಗಳೂರು ಸೆಂಟ್ರಲ್(Mangaluru Centrl) ನಡುವೆ ರೈಲಿನ ಚಾಲನಾ ಸಮಯ ಹಾಗೂ ಮಾರ್ಗದ ಕಾರ್ಯಸಾಧ್ಯತೆಯನ್ನು ಪರಿಶೀಲಿಸಲು ಭಾರತೀಯ ರೈಲ್ವೆಯು 16 ಬೋಗಿಗಳ ವಂದೇ ಭಾರತ್ ಎಕ್ಸ್‌ಪ್ರೆಸ್(Bengaluru-Mangaluru Vande Bharat Express) ಖಾಲಿ ರೇಕ್‌ನ ಪ್ರಾಯೋಗಿಕ ಸಂಚಾರ ಶನಿವಾರ(ಸೆ.5) ನಡೆಯಲಿದೆ.
ಯಶವಂತಪುರದಿಂದ ಬೆಳಗ್ಗೆ 6:05ಕ್ಕೆ ರೈಲು ಹೊರಟರೆ ಮಂಗಳೂರಿಗೆ ಮಧ್ಯಾಹ್ನ 2:25ಕ್ಕೆ ಆಗಮಿಸಲಿದೆ. ಮಂಗಳೂರಿನಿಂದ ಮಧ್ಯಾಹ್ನ 3 ಗಂಟೆಗೆ ಹೊರಟರೆ ರಾತ್ರಿ 11ಕ್ಕೆ ಯಶವಂತರಪುರ ತಲುಪಲಿದೆ.
ಪ್ರಾಯೋಗಿಕ ಸಂಚಾರದ ಸಂಭಾವ್ಯ ವೇಳಾಪಟ್ಟಿ ಮತ್ತು ನಿಲುಗಡೆಗಳು:
1. ಯಶವಂತಪುರ ಜಂಕ್ಷನ್ ➔ ಮಂಗಳೂರು ಸೆಂಟ್ರಲ್
ಯಶವಂತಪುರ ಜಂಕ್ಷನ್ (YPR): ಬೆಳಗ್ಗೆ 06:05 (ನಿರ್ಗಮನ)
ಹಾಸನ ಜಂಕ್ಷನ್ (HAS): ಬೆಳಗ್ಗೆ 09:00 / 09:05
ಸಕಲೇಶಪುರ (SKLR): ಬೆಳಗ್ಗೆ 09:55 / 10:00
ಸುಬ್ರಹ್ಮಣ್ಯ ರೋಡ್ (SBHR): ಮಧ್ಯಾಹ್ನ 12:30 / 12:35
ಮಂಗಳೂರು ಸೆಂಟ್ರಲ್ (MAQ): ಮಧ್ಯಾಹ್ನ 02:25 (ಆಗಮನ)
2. ಮಂಗಳೂರು ಸೆಂಟ್ರಲ್ ➔ ಯಶವಂತಪುರ ಜಂಕ್ಷನ್
ಮಂಗಳೂರು ಸೆಂಟ್ರಲ್ (MAQ): ಮಧ್ಯಾಹ್ನ 03:00 (ನಿರ್ಗಮನ)
ಸುಬ್ರಹ್ಮಣ್ಯ ರೋಡ್ (SBHR): ಸಂಜೆ 04:30 / 04:35
ಸಕಲೇಶಪುರ (SKLR): ಸಂಜೆ 06:30 / 06:35
ಹಾಸನ ಜಂಕ್ಷನ್ (HAS): ರಾತ್ರಿ 07:20 / 07:30
ಯಶವಂತಪುರ ಜಂಕ್ಷನ್ (YPR): ರಾತ್ರಿ 11:00 (ಆಗಮನ)
ಈ ವೇಳಾಪಟ್ಟಿ ಕೇವಲ ಪ್ರಾಯೋಗಿಕ ಸಂಚಾರಕ್ಕೆ ಮಾತ್ರ ತಾತ್ಕಾಲಿಕವಾಗಿ ನಿಗದಿಪಡಿಸಲಾಗಿದೆ.
ಆಗಸ್ಟ್ 11 ರಿಂದ ಸಕಲೇಶಪುರ-ಸುಬ್ರಹ್ಮಣ್ಯ ಮಾರ್ಗದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಪ್ರಾಯೋಗಿಕ ಸಂಚಾರ ಆರಂಭವಾಗಿದೆ. ಘಾಟ್ ಪ್ರದೇಶದಲ್ಲಿ ಸಂಚರಿಸಲು ಅತ್ಯಗತ್ಯವಾದ ಆಟೋಮ್ಯಾಟಿಕ್ ಎಮರ್ಜೆನ್ಸಿ ಬ್ರೇಕಿಂಗ್ (AEB) ವ್ಯವಸ್ಥೆ ಹೊಂದಿರುವ ರೇಕ್ ಲಭ್ಯವಿಲ್ಲದ ಕಾರಣ ಪ್ರಕ್ರಿಯೆ ತಡವಾಗಿತ್ತು. ಇದನ್ನೂ ಓದಿ: PUBLiC TV Explainer| ಕೊನೆಗೂ ಕರುನಾಡ ರೈಲು ಜಾಲಕ್ಕೆ ಸೇರಿದ ಮಂಗಳೂರು; ಕೇರಳ ಲಾಬಿಗೆ ಬ್ರೇಕ್!
ಘಾಟ್ ಮಾರ್ಗಕ್ಕೆ AEB ತಂತ್ರಜ್ಞಾನ ಕಡ್ಡಾಯ ಯಾಕೆ?
ವಂದೇ ಭಾರತ್ ರೈಲು ಸಾಮಾನ್ಯವಾಗಿ ಅತ್ಯಾಧುನಿಕ ಎಲೆಕ್ಟ್ರೋ-ನ್ಯೂಮ್ಯಾಟಿಕ್ (EP) ಡಿಸ್ಕ್ ಬ್ರೇಕ್ ಹಾಗೂ Regenerative Braking ವ್ಯವಸ್ಥೆಯನ್ನು ಹೊಂದಿರುತ್ತದೆ. ಆದರೆ ಸಕಲೇಶಪುರ-ಸುಬ್ರಹ್ಮಣ್ಯ ರೋಡ್ ನಡುವಿನ ಘಾಟ್ ಮಾರ್ಗವು ಅತ್ಯಂತ ಕಡಿದಾದ ಇಳಿಜಾರು ಹೊಂದಿದೆ.
ಈಗ ಈ ಮಾರ್ಗದಲ್ಲಿ ಚಲಿಸುವ ರೈಲುಗಳ ಸುರಕ್ಷತೆಗಾಗಿ ಬ್ಯಾಂಕರ್ ಇಂಜಿನ್‌ಗಳನ್ನು (ಹೆಚ್ಚುವರಿ ಇಂಜಿನ್) ಜೋಡಿಸಲಾಗುತ್ತದೆ. ಇವುಗಳನ್ನು ಜೋಡಿಸಲು ಮತ್ತು ಕಳಚಲು ಸುಮಾರು 15 ನಿಮಿಷ ಬೇಕಾಗುತ್ತದೆ. ವಂದೇ ಭಾರತ್ ರೈಲಿಗೆ ಈ ರೀತಿ ಹೊರಗಿನಿಂದ ಬ್ಯಾಂಕರ್ ಎಂಜಿನ್ ಜೋಡಿಸಬೇಕಾದರೆ ರೈಲಿನ ಮುಂಭಾಗದ ನೋಸ್ (Nose) ಭಾಗವನ್ನು ಕಳಚಬೇಕಾಗುತ್ತದೆ. ಇದು ಹೆಚ್ಚು ಸಮಯವನ್ನು ತೆಗೆದುಕೊಳ್ಳುತ್ತದೆ. ಜೊತೆಗೆ ರೈಲಿನ ಅತಿವೇಗದ ಉದ್ದೇಶವನ್ನೇ ವ್ಯರ್ಥಗೊಳಿಸುತ್ತದೆ.
ಈ ಕಾರಣಕ್ಕೆ ರೈಲಿನಲ್ಲೇ ಸ್ವಯಂಚಾಲಿತವಾಗಿ ಗರಿಷ್ಠ 30 ಕಿ.ಮೀ ವೇಗವನ್ನು ನಿಯಂತ್ರಿಸುವ ಆಟೋಮ್ಯಾಟಿಕ್ ಎಮರ್ಜೆನ್ಸಿ ಬ್ರೇಕಿಂಗ್ ವ್ಯವಸ್ಥೆ ಹೊಂದಿರುವ ವಿಶೇಷ ರೇಕ್‌ಗಾಗಿ ರೈಲ್ವೇ ಕಾಯುತ್ತಿತ್ತು. ಈಗ ಎಇಬಿ ವ್ಯವಸ್ಥೆ ಹೊಂದಿರುವ ರೇಕ್ ಬಂದಿರುವುದರಿಂದ ಪ್ರಾಯೋಗಿಕ ಸಂಚಾರ ಯಶಸ್ವಿಯಾದ ತಕ್ಷಣವೇ ವಾಣಿಜ್ಯ ಸಂಚಾರಕ್ಕೆ ರೈಲ್ವೆ ಮಂಡಳಿಯಿಂದ ಅಧಿಕೃತ ಅನುಮೋದನೆ ಸಿಗಲಿದೆ.
