– ತ್ಯಾಜ್ಯ ವಿಲೇವಾರಿ ಶುಲ್ಕ ಹೆಚ್ಚಳ ವಿರೋಧಿಸಿ ಪ್ರತಿಭಟನೆ
ಬೆಂಗಳೂರು: ಅಂಗಡಿಗಳಲ್ಲಿ ಉಳಿಯುವ ತ್ಯಾಜ್ಯ ವಿಲೇವಾರಿಗೆ ಇದೀಗ ಪ್ರತಿ ಕೆಜಿಗೆ 5 ರೂಪಾಯಿ ಶುಲ್ಕದ ನಿರ್ಧಾರಕ್ಕೆ ಕೋಳಿ ಮಾಂಸ, ಮೊಟ್ಟೆ ವ್ಯಾಪಾರಸ್ಥರು ತೀವ್ರ ಆಕ್ರೋಶ ಹೊರಹಾಕಿದ್ದಾರೆ. GBA-BSWML ವಿರುದ್ಧ ಕಿಡಿಕಾರಿರುವ ಕರ್ನಾಟಕ ಪೌಲ್ಟ್ರಿ ಟ್ರೇಡರ್ಸ್ ಅಸೋಸಿಯೇಷನ್, ಹೆಚ್ಚುವರಿ ಶುಲ್ಕದಿಂದ ಕೊನೆಗೆ ಗ್ರಾಹಕರ ಮೇಲೆಯೇ ಬೆಲೆ ಏರಿಕೆಯ ಹೊರೆ ಬೀಳಲಿದೆ ಎನ್ನುತ್ತಿದ್ದಾರೆ.
ಕೋಳಿ ತ್ಯಾಜ್ಯ ವಿಲೇವಾರಿಗೆ ಪ್ರತಿ ಕೆಜಿಗೆ 5 ರೂಪಾಯಿ ಶುಲ್ಕ ವಿಧಿಸುವ ನಿರ್ಧಾರಕ್ಕೆ ವ್ಯಾಪಾರಸ್ಥರು ಗರಂ ಆಗಿದ್ದಾರೆ. ಈ ಹಿಂದೆ ಕೋಳಿ ತ್ಯಾಜ್ಯವನ್ನು ವ್ಯಾಪಾರಿಗಳಿಂದ ಹಣ ಪಡೆದು ತೆಗೆದುಕೊಂಡು ಹೋಗಲಾಗ್ತಿತ್ತು. ಆದರೆ, ಈಗ ಏಕಾಏಕಿ ತ್ಯಾಜ್ಯ ವಿಲೇವಾರಿಗೆ ವ್ಯಾಪಾರಿಗಳೇ ಕೆಜಿಗೆ 5 ರೂಪಾಯಿ ಕೊಡಬೇಕು ಅನ್ನೋ ಆದೇಶ ಬಂದಿದೆ ಅಂತ ವ್ಯಾಪಾರಿಗಳು ಆರೋಪಿಸಿದ್ದಾರೆ. ಇದು ಅವೈಜ್ಞಾನಿಕ ಮತ್ತು ಅನ್ಯಾಯದ ಕ್ರಮ. ಕೂಡಲೇ ಆದೇಶ ವಾಪಸ್ ಪಡೆಯಬೇಕು ಎಂದು ವ್ಯಾಪಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಕರ್ನಾಟಕ ಪೌಲ್ಟ್ರಿ ಟ್ರೇಡರ್ಸ್ ಅಸೋಸಿಯೇಷನ್ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಯುತ್ತಿದೆ. ಕೋಳಿ ಮಾಂಸ, ಮೊಟ್ಟೆ ವ್ಯಾಪಾರಸ್ಥರು ಪ್ರತಿಭಟನೆಯಲ್ಲಿ ಭಾಗಿಯಾಗಿ GBA-BSWML ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಾವುದೇ ಕಾರಣಕ್ಕೂ ನಾವು ಶುಲ್ಕಕಟ್ಟಲ್ಲ. ವ್ಯಾಪಾರಿಗಳು ಹಾಗೂ ಗ್ರಾಹಕರ ಮೇಲೂ ಅನಗತ್ಯ ಆರ್ಥಿಕ ಹೊರೆ ಬೀಳಲಿದೆ ಅಂತ ಆರೋಪಿಸಿದ್ದಾರೆ. ಈಗಾಗಲೇ ವಿವಿಧ ಖರ್ಚುಗಳ ನಡುವೆ ವ್ಯಾಪಾರ ನಡೆಸುತ್ತಿರುವ ನಮಗೆ ಹೆಚ್ಚುವರಿ ಶುಲ್ಕ ವಿಧಿಸಿದ್ರೆ, ಅದನ್ನ ಗ್ರಾಹಕರಿಂದಲೇ ವಸೂಲಿ ಮಾಡಬೇಕಾದ ಪರಿಸ್ಥಿತಿ ಬರಬಹುದು. ಹೀಗಾಗಿ ಸರ್ಕಾರ ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕು. GBA-BSWML ಶುಲ್ಕ ವಿಧಿಸುವ ನಿರ್ಧಾರದಿಂದ ಹಿಂದೆ ಸರಿಯಬೇಕು. ಕೋಳಿ ವ್ಯಾಪಾರಸ್ಥರ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬೇಕು ಅನ್ನೋದು ಕರ್ನಾಟಕ ಪೌಲ್ಟ್ರಿ ಟ್ರೇಡರ್ಸ್ ಅಸೋಸಿಯೇಷನ್ ಆಗ್ರಹವಾಗಿದೆ.
