ಟಾಲಿನ್: ಭಾರತೀಯ ಕಂಪನಿ(Indian Company) ಜೊತೆಗಿನ ರಕ್ಷಣಾ ಹಗರಣಕ್ಕೆ(Defence Deal) ಸಂಬಂಧಿಸಿದಂತೆ ಎಸ್ಟೋನಿಯಾ(Estonia) ರಕ್ಷಣಾ ಸಚಿವ ಹ್ಯಾನೊ ಪೆವ್ಕುರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಉಕ್ರೇನ್‌ಗೆ(Ukraine) ಶಸ್ತ್ರಾಸ್ತ್ರ ಮತ್ತು ಮದ್ದುಗುಂಡು ಪೂರೈಸುವ ಒಪ್ಪಂದದಲ್ಲಿ ನಡೆದಿದೆ ಎನ್ನಲಾದ ಸುಮಾರು 70 ಮಿಲಿಯನ್ ಯುರೋ (ಸುಮಾರು 768.50 ಕೋಟಿ ರೂ.) ಮೌಲ್ಯದ ಭಾರೀ ಹಗರಣದ ನೈತಿಕ ಹೊಣೆ ಹೊತ್ತು ಹ್ಯಾನೊ ಪೆವ್ಕುರ್ ರಾಜೀನಾಮೆ ಕೊಟ್ಟಿದ್ದಾರೆ. 2022 ರಿಂದ ರಕ್ಷಣಾ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದ ಪೆವ್ಕುರ್(Hanno Pevkur) ಎಸ್ಟೋನಿಯಾದ ರಾಷ್ಟ್ರೀಯ ಆಡಿಟ್ ಕಚೇರಿಯ ತನಿಖಾ ವರದಿಯ ಬೆನ್ನಲ್ಲೇ ಈ ನಿರ್ಧಾರ ಕೈಗೊಂಡಿದ್ದಾರೆ.
ಏನಿದು ಹಗರಣ?
ರಷ್ಯಾದ(Russia) ದಾಳಿಯಿಂದ ತತ್ತರಿಸಿದ್ದ ಉಕ್ರೇನ್‌ಗೆ ಫಿರಂಗಿ ಮದ್ದುಗುಂಡುಗಳನ್ನು (Artillery Shells) ಒದಗಿಸಲು ಎಸ್ಟೋನಿಯಾದ ‘ಡಿಫೆನ್ಸ್ ಇನ್ವೆಸ್ಟ್‌ಮೆಂಟ್ ಸೆಂಟರ್ʼ ಇಟಲಿ ನೋಂದಾಯಿತ ‘ಡೇಟಾಸೆಲ್ ಎಸ್‌ಆರ್‌ಎಲ್’ (Datasel SRL) ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. ಈ ಕಂಪನಿಯನ್ನು ಭಾರತದ ‘ನೆಕೊ ಡಿಫೆನ್ಸ್ ಮ್ಯುನಿಷನ್ಸ್’ 2024ರಲ್ಲಿ ಸ್ವಾಧೀನಪಡಿಸಿಕೊಂಡಿತ್ತು. ಈ ಹಿಂದೆ ಮದ್ದುಗುಂಡುಗಳನ್ನು ಮಾರಾಟ ಮಾಡಿದ ಯಾವುದೇ ಅನುಭವವಿಲ್ಲದ ಈ ಸಂಸ್ಥೆಗೆ ಮುಂಗಡವಾಗಿ ಭಾರೀ ಮೊತ್ತವನ್ನು ನೀಡಲಾಗಿತ್ತು.
ಯುರೋಪಿಯನ್ ಯೂನಿಯನ್‌ನ ‘ಯುರೋಪಿಯನ್ ಪೀಸ್ ಫೆಸಿಲಿಟಿ’ ನಿಧಿಯಿಂದ ಕಂಪನಿಗೆ ಹಂತ-ಹಂತವಾಗಿ ಒಟ್ಟು 70 ಮಿಲಿಯನ್ ಯುರೋ ಮುಂಗಡ ಪಾವತಿಸಲಾಗಿತ್ತು. ಆದರೆ ಕಂಪನಿಯು ನಿಗದಿತ ಸಮಯಕ್ಕೆ ಶಸ್ತ್ರಾಸ್ತ್ರ ಪೂರೈಸುವಲ್ಲಿ ಸತತವಾಗಿ ವಿಫಲವಾಯಿತು. ನಂತರ ಪೂರೈಸಲಾದ ಅಲ್ಪ ಪ್ರಮಾಣದ ಸರಕು ಕೂಡ ಕಳಪೆ ಗುಣಮಟ್ಟದಿಂದ ಕೂಡಿತ್ತು. ಇದನ್ನೂ ಓದಿ: ಮಣ್ಣಲ್ಲಿ ಮಣ್ಣಾದ ಕಟ್ಟಡಗಳು, ಮೂಲಸೌಕರ್ಯ; ನೇಪಾಳ ಭೀಕರ ಪ್ರವಾಹಕ್ಕೆ ಎಲ್ಲವೂ ನಾಮಾವಶೇಷ

ಎಸ್ಟೋನಿಯಾದ ಲೆಕ್ಕಪರಿಶೋಧನಾ ಸಮಿತಿಯು ರಕ್ಷಣಾ ಇಲಾಖೆಯ ಖರೀದಿ ಪ್ರಕ್ರಿಯೆ ಮತ್ತು ಹಣಕಾಸು ನಿರ್ವಹಣೆಯ ಲೋಪಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತು. ಯುರೋಪಿಯನ್ ಒಕ್ಕೂಟದಿಂದ ಈ ಹಣ ಮರುಪಡೆಯಲು ಸಾಧ್ಯವಾಗದಿದ್ದರೆ, ಎಸ್ಟೋನಿಯಾದ ಬೊಕ್ಕಸದಿಂದಲೇ 70 ಮಿಲಿಯನ್ ಯುರೋ ಭರಿಸಬೇಕಾಗುತ್ತದೆ ಎಂದು ಎಚ್ಚರಿಸಿತು.
ಹಗರಣ ಬಹಿರಂಗವಾದ ಬೆನ್ನಲ್ಲೇ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡ ಹ್ಯಾನೊ ಪೆವ್ಕುರ್, ರಕ್ಷಣಾ ಇಲಾಖೆಯ ಮುಖ್ಯಸ್ಥನಾಗಿ ರಾಜಕೀಯ ಹೊಣೆಗಾರಿಕೆಯನ್ನು ತಾವೇ ಹೊರುವುದಾಗಿ ತಿಳಿಸಿದ್ದಾರೆ:
ಎಸ್ಟೋನಿಯಾದ ಭದ್ರತೆಯು ಒಬ್ಬ ವ್ಯಕ್ತಿಯ ಪ್ರಾಜೆಕ್ಟ್ ಅಲ್ಲ, ಅದು ನಮ್ಮೆಲ್ಲರ ಜಂಟಿ ಹೊಣೆಗಾರಿಕೆ. ರಕ್ಷಣಾ ಸಚಿವನಾಗಿ ನಾನು ವೈಯಕ್ತಿಕವಾಗಿ ಖರೀದಿ ಮಾತುಕತೆಗಳಲ್ಲಿ ಭಾಗವಹಿಸದಿದ್ದರೂ, ಇಲಾಖೆಯ ಲೋಪಗಳಿಗೆ ರಾಜಕೀಯ ಹೊಣೆ ಹೊತ್ತು ಪ್ರಧಾನಿಯವರಿಗೆ ಜವಾಬ್ದಾರಿ ಹಸ್ತಾಂತರಿಸುತ್ತಿದ್ದೇನೆ ಎಂದು ತಿಳಿಸಿದ್ದಾರೆ
ಪ್ರಧಾನಿ ಕ್ರಿಸ್ಟನ್ ಮಿಖಾಲ್ ಅವರು ಪೆವ್ಕುರ್ ಅವರ ವೈಯಕ್ತಿಕ ತಪ್ಪಿಲ್ಲ ಎಂದು ಸಮರ್ಥಿಸಿಕೊಂಡರೂ, ವಿರೋಧ ಪಕ್ಷಗಳ ಒತ್ತಡ ಹಾಗೂ ನೈತಿಕ ಕಾರಣಗಳಿಂದ ಅವರು ರಾಜೀನಾಮೆ ನೀಡಿದ್ದಾರೆ.
ಮುಂದೇನು?
ನೀಡಲಾದ 70 ಮಿಲಿಯನ್ ಯರೋ ಮುಂಗಡ ಹಣವನ್ನು ವಾಪಸ್ ಪಡೆಯಲು ಎಸ್ಟೋನಿಯಾ ಸರ್ಕಾರವು ಫ್ರಾನ್ಸ್‌ನ ಸ್ಟ್ರಾಸ್‌ಬರ್ಗ್‌ನಲ್ಲಿರುವ ‘ಯುರೋಪಿಯನ್ ಆರ್ಬಿಟ್ರೇಷನ್ ಆಂಡ್ ಮೀಡಿಯೇಶನ್ ಸೆಂಟರ್ ಮೆಟ್ಟಿಲೇರಿದೆ. ಅಲ್ಲದೆ ಯುರೋಪಿಯನ್ ಕಮಿಷನ್ ಕೂಡ ಎಸ್ಟೋನಿಯಾ ಅಧಿಕಾರಿಗಳೊಂದಿಗೆ ತೆರಿಗೆದಾರರ ಹಣ ಮರುಪಡೆಯುವ ಪ್ರಕ್ರಿಯೆಯ ಬಗ್ಗೆ ನಿರಂತರ ಸಂಪರ್ಕದಲ್ಲಿದೆ.

